ವಿಜಯಪುರದ ಕಮಾಂಡೋ ಕರಿಯರ್ ಅಕಾಡೆಮಿಯ ತರಬೇತಿ ಮೈದಾನದಲ್ಲಿ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್‌ರ 95ನೇ ಹುತಾತ್ಮ ದಿನ ಆಚರಿಸಲಾಯಿತು. ಸಿದ್ಧಲಿಂಗ ಬಾಗೇವಾಡಿ, ಶರಣು ಕುಳಶೆಟ್ಟಿ ಮತ್ತು ವಿದ್ಯಾರ್ಥಿಗಳಿದ್ದಾರೆ.
- ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾಹಿತಿ
- ಹುತಾತ್ಮ ದಿನಾಚರಣೆ
ವಿಜಯಪುರ: ದೇಶದ ಪ್ರತಿಯೊಬ್ಬರಿಗೂ ಉಚಿತ ಶಿಕ್ಷಣ, ಆರೋಗ್ಯ, ವಸತಿಯಂತಹ ಮೂಲ ಸೌಲಭ್ಯಗಳು ಸಿಗಬೇಕು. ಮಾನವನಿಂದ ಮಾನವನ ಶೋಷಣೆ ಇಲ್ಲದ ಸಮಾಜವಾದಿ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ಭಗತ್ ಸಿಂಗ್ ಬಯಸಿದ್ದರು ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಹೇಳಿದರು.
ನಗರದ ಕಮಾಂಡೋ ಕರಿಯರ್ ಅಕಾಡೆಮಿಯ ತರಬೇತಿ ಮೈದಾನದಲ್ಲಿ ಎಐಡಿವೈಒ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಾರತ ಸ್ವಾತಂತ್ರೃ ಸಂಗ್ರಾಮದ ಮಹಾನ್ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್‌ರವರ 95ನೇ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಾಂಧೀಜಿ ಸಂಧಾನ ಪರ ಪಂಥದ ನಾಯಕರಾದರೆ, ಭಗತ್ ಸಿಂಗ್, ನೇತಾಜಿ ಅವರು ಸಂಧಾನ ರಹಿತ ಪಂಥದ ಅಗ್ರಗಣ್ಯ ನಾಯಕರು. ಸಂಧಾನ ಪರ ಪಂಥದವರು ಕೆಲವು ಸವಲತ್ತುಗಳಿಗಾಗಿ ಬ್ರಿಟೀಷ್ ಸರ್ಕಾರಕ್ಕೆ ಮನವಿ ಕೊಡುವುದಕ್ಕೆ ಸೀಮಿತವಾಗಿದ್ದರು. ಆದರೆ ಸಂಧಾನಾತೀತ ಪಂಥವು ಬ್ರಿಟಿಷರು ದೇಶ ಬಿಟ್ಟು ತೊಲಗಬೇಕು. ನಂತರ ದೇಶದಲ್ಲಿರುವ ಜಾತಿ-ಮತಗಳ ಅಸಮಾನತೆ ಇಲ್ಲದ, ದೇಶದ ಬೆನ್ನೆಲುಬಾದ ರೈತರ ಸಂಕಷ್ಟಗಳನ್ನು ದೂರ ಮಾಡುವ, ಮಹಿಳೆಗೆ ಸಮಾನತೆ ಹಾಗೂ ಭದ್ರತೆ ಖಾತ್ರಿ ಪಡಿಸುವ, ಎಲ್ಲರಿಗೂ ಉಚಿತ ಶಿಕ್ಷಣ, ಉದ್ಯೋಗ ನೀಡುವ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದರು.
ಭಗತ್ ಸಿಂಗ್ ಅವರ ಉತ್ತರಾಧಿಕಾರಿಗಳಾಗಿ ನಾವು ಸಮ ಸಮಾಜಕ್ಕಾಗಿ ಎಲ್ಲ ಯುವಜನರನ್ನು ಸಂಘಟಿಸಿ ಹೋರಾಟ ಬೆಳೆಸಬೇಕು ಎಂದು ಸಲಹೆ ನೀಡಿದರು. ಕಮಾಂಡೋ ಅಕಾಡೆಮಿಯ ಮುಖ್ಯಸ್ಥ ಶರಣು ಕುಳಶೆಟ್ಟಿ ಮಾತನಾಡಿ, ಇಂದು ಭಗತ್‌ಸಿಂಗ್ ನಮ್ಮೆಲ್ಲರಿಗೂ ಆದರ್ಶವಾಗಿದ್ದಾರೆ. ಅವರ ತ್ಯಾಗ, ಬಲಿದಾನ ಸ್ಮರಣೀಯ ಎಂದರು.
ಎಐಡಿವೈಓ ಜಿಲ್ಲಾಧ್ಯಕ್ಷ ಶ್ರೀಕಾಂತ ಕೊಂಡಗೂಳಿ ಮಾತನಾಡಿ, ಸೈಮನ್ ಗೋಬ್ಯಾಕ್ ಹೋರಾಟದಲ್ಲಿ ಲಾಲಾ ಲಜಪತರಾಯ ಅವರನ್ನು ಲಾಠಿಚಾರ್ಜ್ ಮಾಡಿ ಸಾಯಿಸಿದ ಬ್ರಿಟಿಷ್ ಅಧಿಕಾರಿಯನ್ನು ಸಾಯಿಸುವ ಧೈರ್ಯ
ಮಾಡಿದ್ದು ಭಗತ್‌ಸಿಂಗ ಹಾಗೂ ಅವರ ಸ್ನೇಹಿತರು ಎಂದು ಇತಿಹಾಸದ ಕ್ಷಣಗಳನ್ನು ವಿವರಿಸಿದರು. ಅದಕ್ಕೂ ಮುನ್ನ ಭಗತ್‌ಸಿಂಗರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.