ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು: ಮೇಕೆದಾಟು ಯೋಜನೆಗೆ ಸಣ್ಣಪುಟ್ಟ ನೆಪ ಮುಂದಿಟ್ಟು ಸುಪ್ರೀಂ ಕೋರ್ಟ್‌ನಲ್ಲಿ ತಕರಾರು ಮಾಡಲು ತಮಿಳುನಾಡು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇಂತಹ ಲೋಪದೋಷಗಳು ಇವೆಯಾ ಎಂದು ಪರಿಶೀಲಿಸಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ಈ ನಿರ್ದೇಶನ ನೀಡಿದರು. ರಾಜ್ಯ ಸರ್ಕಾರದ ಕನಸಿನ ಮೇಕೆದಾಟು ಯೋಜನೆ ಜಾರಿಗೆ ತರಬೇಕಿದೆ. ಆದರೆ, ತಮಿಳುನಾಡು ಸರ್ಕಾರ, ಸಣ್ಣಪುಟ್ಟ ನೆಪಗಳನ್ನು ಮುಂದಿಟ್ಟು ಸುಪ್ರೀಂಕೋರ್ಟ್‌ನಲ್ಲಿ ತಕರಾರು ಮಾಡಲು ತಯಾರಿ ನಡೆಸುತ್ತಿದೆ. ತಾಂತ್ರಿಕ ಸಮಸ್ಯೆಗಳು ಇದ್ದರೇ ಕೂಡಲೇ ಬಗೆಹರಿಸಬೇಕು. ಜತೆಗೆ ಯೋಜನೆಗೆ ಯಾವುದೇ ತೊಂದರೆ ಆಗಂತೆ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ.
ಇನ್ನೂ ಬಂಡಿಪುರ ಮತ್ತು ನಾಗರಹೊಳೆ ಪರಿಸರ ಪ್ರವಾಸೋದ್ಯಮ ಹಾಗೂ ಸಫಾರಿ ಪ್ರದೇಶಗಳಲ್ಲಿ ಹುಲಿಗಳು ಮತ್ತು ಚಿರತೆಗಳ ಸಾಂದ್ರತೆ, ಮಾನವ ವನ್ಯಜೀವಿ ಸಂಘರ್ಷ ಹೆಚ್ಚಿರುವ ಪ್ರದೇಶಗಳಿಗಿಂತ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಯಾವುದೇ ಧಕ್ಕೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಫಾರಿ ಚಟುವಟಿಕೆಗಳನ್ನು ಆರಂಭಿಸುವಂತೆ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬಿಎಂಐಸಿ ಕಾರಿಡಾರ್ ನಿರ್ಮಾಣದಿಂದ ಆನೆ, ಹುಲಿ, ಚಿರತೆಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು. ಪರಿಣಾಮವಾಗಿ ವನ್ಯಜೀವಿಗಳು ಅರಣ್ಯ
ಪ್ರದೇಶಗಳಿಂದ ಹೊರಬಂದು ಚನ್ನಪಟ್ಟಣ ಹಾಗೂ ರಾಮನಗರ ಭಾಗಗಳತ್ತ ಚಲಿಸುತ್ತಿದ್ದು, ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ನಿರ್ಮಾಣಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ಅಗತ್ಯ ಅಂಡರ್‌ಪಾಸ್, ಓವರ್‌ಪಾಸ್ ಹಾಗೂ ವನ್ಯಜೀವಿ ಕಾರಿಡಾರ್‌ಗಳನ್ನು ನಿರ್ಮಿಸುವ ಷರತ್ತು ವಿಧಿಸಲಾಗಿತ್ತು. ಆದರೆ, ರಸ್ತೆ ನಿರ್ಮಾಣದ ವೇಳೆ ಈ ಷರತ್ತುಗಳನ್ನು ಸಮರ್ಪಕವಾಗಿ ಪಾಲಿಸಲಾಗಿಲ್ಲ ಎಂಬ ವಿಚಾರವನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಕೂಡಲೇ ಓವರ್‌ಪಾಸ್ ಸೇತುವೆಗಳನ್ನು ನಿರ್ಮಾಣ ಮಾಡಬೇಕೆಂದು ಡಿ.ಕೆ. ಶಿವಕುಮಾರ್ ಸಲಹೆ ನೀಡಿದರು.
ಜನರ ಸುರಕ್ಷತೆಗೆ ಆದ್ಯತೆ ನೀಡಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಹಾಗೂ ಅಪಾಯದ ಸ್ಥಿತಿಯಲ್ಲಿರುವ ಮರಗಳು ಮತ್ತು ಕೊಂಬೆಗಳನ್ನು ತೆರವುಗೊಳಿಸುವ ಕುರಿತು ಈಗಾಗಲೇ ಸ್ಪಷ್ಟ ಸೂಚನೆ ನೀಡಲಾಗಿದ್ದರೂ, ಅದರ ಪರಿಣಾಮಕಾರಿ ಅನುಷ್ಠಾನ ಆಗಿಲ್ಲ. ಆದ ಕಾರಣ ಮಳೆ ಮತ್ತು ಗಾಳಿಯಿಂದ ಮರಗಳು ಹಾಗೂ ಕೊಂಬೆಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಾಯಿ ಸಮಿತಿ ಸದಸ್ಯರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ನೀಡಿ ಅಪಾಯಕಾರಿಯಾಗಿರುವ ಮರಗಳು ಮತ್ತು ಕೊಂಬೆಗಳ ಗುರುತು ಪತ್ತೆ, ತೆರವು ಕಾರ್ಯಾಚರಣೆಯನ್ನು ತುರ್ತಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.