ಬೆಂಗಳೂರು: ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಯಸಿದ್ದ ಟಾಟಾ ಪವರ್ ಕಂಪನಿ ಲಿಮಿಟೆಡ್ (ಟಿಪಿಸಿಎಲ್)ನ ಪ್ರಯತ್ನಕ್ಕೆ ಬೆಂಗಳೂರು ವಿದ್ಯುತ್ ಪ್ರಸರಣ ನಿಗಮ ತಾತ್ಕಾಲಿಕ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ.
ಪ್ರಸ್ತುತ ಬೆಸ್ಕಾಂ ವ್ಯಾಪ್ತಿಯಲ್ಲಿರುವ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಇದೀಗ ಬೆಸ್ಕಾಂ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದೆ.
ಟಾಟಾ ಪ್ರಸ್ತಾವನೆ ಕುರಿತು ಬೆಸ್ಕಾಂ ಹಲವು ಗಂಭೀರ ಆಕ್ಷೇಪಣೆಗಳನ್ನು ಕೆಇಆರ್‌ಸಿ ಮುಂದೆ ಸಲ್ಲಿಸಿದ್ದು, ವಿದ್ಯುತ್ ಕಾಯ್ದೆ- 2003ರಡಿ ಅಗತ್ಯವಿರುವ ಕಾನೂನುಬದ್ಧ ಹಾಗೂ ಸಾರ್ವಜನಿಕ ಹಿತಾಸಕ್ತಿ ಸಂಬಂಧಿತ ಮಾನದಂಡಗಳನ್ನು ಪೂರೈಸುವ ಬಗ್ಗೆ ಟಾಟಾ ಸಂಸ್ಥೆಯು ಅರ್ಜಿಯಲ್ಲಿ ಪ್ರಸ್ತಾಪಿಸಿಲ್ಲ ಎಂದಿದೆ.
ಪ್ರಸ್ತಾವಿತ ಪ್ರದೇಶದಲ್ಲಿ ಸ್ವತಂತ್ರ ವಿದ್ಯುತ್ ವಿತರಣಾ ಜಾಲವನ್ನು ನಿರ್ಮಿಸುವ ಕುರಿತು ಟಾಟಾ ಪವರ್ ಸ್ಪಷ್ಟ ಯೋಜನೆ ಸಲ್ಲಿಸಿಲ್ಲ. ಬದಲಾಗಿ, ಬೆಸ್ಕಾಂನ ಈಗಿರುವ ಮೂಲಸೌಕರ್ಯವನ್ನು ಅವಲಂಬಿಸಿ ವಿದ್ಯುತ್ ಸರಬರಾಜು ಮಾಡಲು ಉದ್ದೇಶಿಸಿರುವುದಾಗಿ ಹೇಳಿದೆ. ಇದು ಹೇಗೆ ಸಾಧ್ಯವಾಗುತ್ತದೆ ಎಂಬುದು ಬೆಸ್ಕಾಂ ಎತ್ತಿರುವ ಪ್ರಧಾನ ಪ್ರಶ್ನೆ.
ಯಾವುದೇ ಗ್ರಾಹಕ ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ವಿದ್ಯುತ್ ಸಂಪರ್ಕ ನೀಡುವ ಕಾನೂನುಬದ್ಧ ಬಾಧ್ಯತೆಯನ್ನು ಟಾಟಾ ಪವರ್ ಹೇಗೆ ನಿರ್ವಹಿಸಲಿದೆ ಎಂಬುದರ ಕುರಿತು ಸಮರ್ಪಕ ಮಾಹಿತಿ ನೀಡಿಲ್ಲ ಎಂಬುದು ಬೆಸ್ಕಾಂನ ಆಕ್ಷೇಪಣೆಯಾಗಿದೆ.
ವಿದ್ಯುತ್ ಖರೀದಿ ಯೋಜನೆಯ ಕುರಿತಾಗಿಯೂ ಬೆಸ್ಕಾಂ ಆಕ್ಷೇಪ ಸಲ್ಲಿಸಿದ್ದು, ಅಲ್ಪಾವಧಿ ವಿದ್ಯುತ್ ಖರೀದಿ ಹೆಚ್ಚಿನ ಅವಲಂಬನೆಯು ಗ್ರಾಹಕರಿಗೆ ಹೆಚ್ಚುವರಿ ವೆಚ್ಚದ ಭಾರವನ್ನು ಉಂಟುಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದೆ.
ಕೈಗಾರಿಕಾ ಹಾಗೂ ವಾಣಿಜ್ಯ ವಲಯದ ಹೆಚ್ಚಿನ ಆದಾಯ ತರುವ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಟಾಟಾ ಸಂಸ್ಥೆ ಸೇವೆ ನೀಡುವ ಸಾಧ್ಯತೆ ಇರುವುದರಿಂದ, ಸಬ್ಸಿಡಿ ಪಡೆಯುವ ಸಾಮನ್ಯ ಗ್ರಾಹಕರಿಗೆ ತೊಂದರೆಯಾಗಬಹುದು. ಅಲ್ಲದೇ ಬೆಸ್ಕಾಂನ ಆರ್ಥಿಕ ಸ್ಥಿರತೆಗೆ ಧಕ್ಕೆ ಉಂಟಾಗಬಹುದು ಎಂದು ಕಳವಳವನ್ನೂ ವ್ಯಕ್ತಪಡಿಸಿದೆ.
‘ಗೃಹ, ಕೃಷಿ ಹಾಗೂ ಇತರ ಸಬ್ಸಿಡಿ ಆಧಾರಿತ ಗ್ರಾಹಕರಿಗೆ ನೀಡಲಾಗುತ್ತಿರುವ ಕ್ರಾಸ್ ಸಬ್ಸಿಡಿ ವ್ಯವಸ್ಥೆ ದುರ್ಬಲಗೊಳ್ಳುವ ಅಪಾಯವಿದೆ. ಇಂತಹ ವ್ಯವಸ್ಥೆಯಿಂದ ಬೆಸ್ಕಾಂನ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳು, ಸಾರ್ವಜನಿಕ ಸೇವಾ ಬಾಧ್ಯತೆಗಳಿಗೆ ಧಕ್ಕೆ ಉಂಟಾಗುವುದಲ್ಲದೇ, ಗ್ರಾಹಕರಿಗೆ ಹಣಕಾಸಿನ ಹೊರೆ ಹೆಚ್ಚುವ ಸಾಧ್ಯತೆ ಇದೆ ಎಂದು ವಿವರಿಸಿದೆ.
ಎಲ್ಲಾ ಗ್ರಾಹಕರಿಗೂ ಸಮರ್ಪಕ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಒದಗಿಸುವ ಕಾನೂನುಬದ್ಧ ಹೊಣೆಗಾರಿಕೆ ಬೆಸ್ಕಾಂ ಮೇಲಿದೆ. ಇದಕ್ಕಾಗಿ ಬೆಸ್ಕಾಂ 2035ರ ನಂತರವೂ ಮುಂದುವರಿಯುವ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದು, ವಿದ್ಯುತ್ ಬಳಕೆ ಆಗದಿದ್ದರೂ ನಿಗದಿತ ಸ್ಥಿರ ಶುಲ್ಕಗಳನ್ನು ಪಾವತಿಸಬೇಕಾಗಿದೆ. ಟಿಪಿಸಿಎಲ್‌ಗೆ ಇಂತಹ ಯಾವುದೇ ಹೊಣೆಗಾರಿಕೆಗಳಿಲ್ಲ ಎಂದು ಆಕ್ಷೇಪಣೆಯಲ್ಲಿ ಪ್ರಮುಖ ಅಂಶವಾಗಿ ದಾಖಲಿಸಿದೆ.
ಟಿಪಿಸಿಎಲ್‌ನ ವ್ಯವಹಾರ ಮಾದರಿಯು ಹೆಚ್ಚುವರಿ ದರ ಪಾವತಿಸುವ ಗ್ರಾಹಕರನ್ನು ಆಕರ್ಷಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಇದರಿಂದ ಬೆಸ್ಕಾಂ ತನ್ನ ಶೇ.80 ಕ್ರಾಸ್ ಸಬ್ಸಿಡಿ ಪಡೆಯುವ ವರ್ಗದ ಗ್ರಾಹಕರಿಗೆ ಸೇವೆ ಒದಗಿಸಲು ಅವಲಂಬಿಸಿರುವ ಆರ್ಥಿಕ ಆಧಾರವೇ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ತನ್ನ ಆತಂಕವನ್ನು ಕೆಇಆರ್‌ಸಿ ಮುಂದೆ ವ್ಯಕ್ತಪಡಿಸಿದೆ.