Bengaluru Sarjapur Road in abysmal condition 
ರಾಜ್ಯ

'ರಸ್ತೆಯೋ ಅಥವಾ ಮೋರಿಯೋ?'; ಐಟಿ ಹಬ್​​ ಸರ್ಜಾಪುರದ ರಸ್ತೆ ಅವಸ್ಥೆ ವಿರುದ್ಧ ನೆಟ್ಟಿಗರು ಕಿಡಿ.. Sarjapur Road

ಬೆಂಗಳೂರು: ಸರ್ಜಾಪುರ ಸುತ್ತಮುತ್ತಲ ಪ್ರದೇಶದಲ್ಲಿ  ಕಾರ್ಪೋರೇಟ್ ಕಂಪನಿಗಳು ಹೆಚ್ಚಾಗಿಯೇ ಇದೆ. ನೆರೆ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿರುವವರು ಹೆಚ್ಚಾಗಿಯೇ ಇದ್ದಾರೆ. ಆದರೆ, ಇಲ್ಲಿರುವ ರಸ್ತೆಗಳ ಸ್ಥಿತಿ ಮಾತ್ರ ಶೋಚನೀಯ. ಅಲ್ಲಲ್ಲಿ ಕಂಡು ಬರುವ ಕಸ,  ರಸ್ತೆ ದುರಸ್ತಿ ಕಾರ್ಯ, ಟ್ರಾಫಿಕ್​ ಜಾಮ್​​​ನಿಂದ ಇಲ್ಲಿನ ನಿವಾಸಿಗಳು ಬೇಸತ್ತು ಹೋಗಿದ್ದಾರೆ.  ಇದಕ್ಕೆ ಮತ್ತೊಂದು ಸಾಕ್ಷಿಯೆನ್ನುವಂತೆ ಬಂಗಾಳ ಮೂಲದ ಟೆಕ್ಕಿಯೊಬ್ಬರು ಪೋಸ್ಟ್​ವೊಂದು ಹಂಚಿಕೊಂಡಿದ್ದಾರೆ. 
ಸರ್ಜಾಪುರ ರಸ್ತೆಯ ಜುನ್ನಸಂದ್ರ ಲೇನ್​ನ ಬಳಿ ಇರುವ ವಿಪ್ರೋ ಎಸ್‌ಇಝಡ್ ಕಚೇರಿಯ ಎದುರಿನ ರಸ್ತೆ ಅವಸ್ಥೆ ಬಗ್ಗೆ  ಸಂಜುಕ್ತಾ ಎನ್ನುವವರು ಫೋಟೋ ಹಂಚಿಕೊಂಡು, ಬೆಂಗಳೂರು ಸಂಚಾರ ಪೊಲೀಸರು ಹಾಗೂ ಗ್ರೇಟರ್​ ಬೆಂಗಳೂರು ಪ್ರಾಧೀಕಾರಕ್ಕೆ ಟ್ಯಾಗ್​ ಮಾಡಿದ್ದಾರೆ.  

ಪೋಸ್ಟ್​ನಲ್ಲಿ ಏನಿದೆ?

ಬಂಗಾಳ ಮೂಲದ ಸಂಜುಕ್ತಾ ಎನ್ನುವವರು ಎಕ್ಸ್​ನಲ್ಲಿ ರಸ್ತೆಯೊಂದರ ಫೋಟೋ ಹಂಚಿಕೊಂಡಿದ್ದಾರೆ. ಇಲ್ಲಿ ಮೋರಿಯೇ ಕಾಣುತ್ತಿಲ್ಲ. ಆದರೆ, ರಸ್ತೆ ಮೇಲೆ ಕಪ್ಪು, ಕೆಟ್ಟ ವಾಸನೆಯಿಂದ ಕೂಡಿದ ನೀರು ಹರಿಯುತ್ತಿದೆ. ಬೃಹತ್​ ಗಾತ್ರದ ಚಪ್ಪಡಿ ಕಲ್ಲುಗಳು ಬಿದ್ದಿವೆ. ಪಕ್ಕದಲ್ಲೇ ಬಸ್​ ನಿಲ್ದಾಣಕ್ಕೂ ಹೋಗಲಾರದೆ ಪರದಾಡುವ​ ಪ್ರಯಾಣಿಕರು, ಪಾದಚಾರಿ ಮಾರ್ಗವೇ ಮರೆಯಾಗಿ ನಡೆದಾಡಲು ಹೆಣಗಾಡುವಂತಾಗಿದೆ. ಇನ್ನೂ ಇದೇ ಇಕ್ಕಟ್ಟಿನಲ್ಲಿ ವಾಹನ ಸವಾರರು ಪ್ರಯಾಣಿಸುತ್ತಿರುವುದು ಚಿತ್ರದಲ್ಲಿ ಇದೆ.

ಟೆಕ್ಕಿ ಹೇಳಿದ್ದೇನು?
ಭಾರತದ ಸಿಲಿಕಾನ್ ಕಣಿವೆ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ವಿಪ್ರೋ ಎಸ್‌ಇಝಡ್ ಕಚೇರಿಯ ಎದುರು ಇರುವ ರಸ್ತೆ ಹೀಗೆ  ಕಾಣುತ್ತಿದೆ. ಇಂತಹ ರಸ್ತೆಯಲ್ಲಿ ನಾವು ನಡೆದಾಡುವುದು ಹೇಗೆ?.  ಪ್ರಯಾಣಿಸಬೇಕಾದದ್ದು ಹೇಗೆ? ಕಳೆದ 6 ತಿಂಗಳಿನಿಂದ  ಈ ರಸ್ತೆ ದುರಸ್ತಿ ಕಾರ್ಯದಡಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ ಏನು?

 ಮಳೆಗಾಲದ ಆರಂಭದಲ್ಲೇ ರಸ್ತೆಯ ಸ್ಥಿತಿ ಹೀಗಾಗಿದೆ.  ಮುಂದಿನ ದಿನದಲ್ಲಿ ಇನ್ನಷ್ಟು ಹದಗೆಡಬಹುದು. ಜಿಬಿಎ ಅಂತಿಮವಾಗಿ ರಸ್ತೆಯನ್ನು ಡಾಂಬರೀಕರಣಗೊಳಿಸಿದ್ದರಿಂದ ಮತ್ತು ಅದು ಉತ್ತಮ ಸ್ಥಿತಿಯಲ್ಲಿರುವುದರಿಂದ ನಾವು ಸಂತೋಷಪಟ್ಟೆವು. ಆದರೆ ಶೀಘ್ರದಲ್ಲೇ, ಒಳಚರಂಡಿ ಕಾಮಗಾರಿಗಾಗಿ ರಸ್ತೆ ಮತ್ತೆ ಹಾಳಾಗಿತ್ತು. ಈಗ ತಿಂಗಳುಗಳಿಂದ ಇದರ ಸ್ಥಿತಿ ಹೀಗೆ ಇದೆ. ಇದರ ದುರಸ್ತಿ ಕಾರ್ಯದ ಹೊಣೆ ಯಾರು ಹೊತ್ತುಕೊಂಡಿಲ್ಲ ಎಂದು ಇದು  41 ವರ್ಷದ ಐಟಿ ಉದ್ಯೋಗಿ ದಿವಾಕರ್ ಹೇಳಿದರು.
ಮೊದಲು ಇಲ್ಲಿ ರಸ್ತೆ ದುರಸ್ತಿ ಮಾಡಿದ್ದರು ಆಗ ನಿಟ್ಟುಸಿರು ಬಿಟ್ಟಿದ್ದೆವು. ಮತ್ತೆ ಯಾವುದೋ ಕಾರ್ಯಕ್ಕೆ ರಸ್ತೆ ಅಗೆದರು.  ಈಗ ರಸ್ತೆಯ ಎರಡು ಬದಿ ಚರಂಡಿ ನಿರ್ಮಾಣದ ಅಗತ್ಯ ಇದೆ. ಎರಡು ತಿಂಗಳಿನಿಂದ ಸ್ಥಿತಿ ಹೀಗೆ ಇದೆ. ಪಾದಚಾರಿಗಳು ಸಂಚರಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ್ದಾರೆ, (ಏಜೆನ್ಸೀಸ್).