ತುಕ್ಕು ಹಿಡಿಯುತ್ತಿರುವ ಜಪ್ತಿ ವಾಹನಗಳು 
ರಾಜ್ಯ

ಬೆಂಗಳೂರಿನ ಪೊಲೀಸ್ ಠಾಣೆಗಳು ಸ್ಕ್ಯಾಪ್​ ಯಾರ್ಡ್.!

ಪ್ರಮುಖ ಮುಖ್ಯಾಂಶಗಳು

  • ತುಕ್ಕು ಹಿಡಿಯುತ್ತಿರುವ ಲಕ್ಷಾಂತರ ಜಪ್ತಿ ವಾಹನಗಳು
  • ವಿಲೇವಾರಿ ವಿಳಂಬದಿಂದ ಜಾಗದ ಕೊರತೆ
  • ಕೋಟ್ಯಂತರ ರೂ.ಆರ್ಥಿಕ ನಷ್ಟ
  • ಕಾನೂನು ಪ್ರಕ್ರಿಯೆಯ ನಿಧಾನಗತಿಯೇ ಮೂಲ ಸಮಸ್ಯೆ

ರವಿ ನಾಯಕ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪೊಲೀಸ್ ಹಾಗೂ ಸಂಚಾರ ಪೊಲೀಸ್ ಠಾಣೆಗಳ ಆವರಣಗಳು ನಿಧಾನವಾಗಿ ಸಕ್ಯೆಾಪ್ ಯಾರ್ಡ್‌ಗಳಾಗಿ ಮಾರ್ಪಡುತ್ತಿವೆ. ಸಂಚಾರ ನಿಯಮ ಉಲ್ಲಂಘನೆ, ಅಪಘಾತ, ಕಳ್ಳತನ, ಕ್ರಿಮಿನಲ್ ಪ್ರಕರಣಗಳು ಹಾಗೂ ದಾಖಲೆಗಳ ಕೊರತೆಯಿಂದಾಗಿ ಜಪ್ತಿ ಮಾಡಲಾದ ಲಕ್ಷಾಂತರ ವಾಹನಗಳು ವರ್ಷಗಟ್ಟಲೆ ಠಾಣೆಗಳಲ್ಲೇ ಬಿದ್ದು ತುಕ್ಕು ಹಿಡಿಯುತ್ತಿವೆ.
ಕಾನೂನು ಪ್ರಕ್ರಿಯೆಯ ವಿಳಂಬ, ವಾಹನ ಮಾಲೀಕರ ನಿರ್ಲಕ್ಷ್ಯ ಮತ್ತು ಸಮನ್ವಯದ ಕೊರತೆಯಿಂದ ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ.
ಪೊಲೀಸ್ ಠಾಣೆಗಳ ಹಿಂಭಾಗಕ್ಕೆ ಒಮ್ಮೆ ಇಣುಕಿ ನೋಡಿದರೆ ನೂರಾರು ಬೈಕ್, ಕಾರು, ಆಟೋ, ಲಾರಿ ಹಾಗೂ ಇತರೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.
10ರಿಂದ 20 ವರ್ಷಗಳಷ್ಟು ಹಳೆಯದಾಗಿರುವ ವಾಹನಗಳು, ಮಳೆ-ಬಿಸಿಲಿಗೆ ಸಿಲುಕಿ ಸಂಪೂರ್ಣ ಹಾಳಾಗಿವೆ. ಕೆಲ ವಾಹನಗಳ ಚಕ್ರಗಳೇ ಇಲ್ಲ, ಮತ್ತೆ ಕೆಲವು ವಾಹನಗಳು ಕೇವಲ ಕಬ್ಬಿಣದ ಚೌಕಟ್ಟಾಗಿ ಉಳಿದಿವೆ.

ಸಮಸ್ಯೆಗೆ ಕಾರಣ? ಏನು? ಹೇಗೆ?:

ನಗರದಲ್ಲಿ ಪ್ರತಿದಿನ ನೂರಾರು ವಾಹನಗಳನ್ನು ಪೊಲೀಸರು ಜಪ್ತಿ ಮಾಡುತ್ತಾರೆ. ಸಂಚಾರ ನಿಯಮ ಉಲ್ಲಂಘನೆ, ದಾಖಲೆಗಳ ಕೊರತೆ, ಮದ್ಯಪಾನ ಮಾಡಿ ವಾಹನ ಚಾಲನೆ, ಅಪಘಾತ ಪ್ರಕರಣಗಳು ಹಾಗೂ ವಿವಿಧ ಅಪರಾಧಗಳಲ್ಲಿ ಬಳಸಿದ ವಾಹನಗಳನ್ನು ಠಾಣೆಗಳಿಗೆ ತಂದು ನಿಲ್ಲಿಸಲಾಗುತ್ತದೆ.
ಇವುಗಳಲ್ಲಿ ಕೆಲವು ವಾಹನಗಳನ್ನು ಮಾಲೀಕರು ದಂಡ ಪಾವತಿಸಿ ಅಥವಾ ನ್ಯಾಯಾಲಯದ ಆದೇಶದ ಮೂಲಕ ಬಿಡುಗಡೆ ಮಾಡಿಸಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಯಾರೂ ತೆಗೆದುಕೊಂಡು ಹೋಗುವುದಿಲ್ಲ. ಹೀಗೆ ವರ್ಷದಿಂದ ವರ್ಷಕ್ಕೆ ವಾಹನಗಳು ಠಾಣೆಗಳಲ್ಲಿ ಸಂಗ್ರಹವಾಗುತ್ತಲೇ ಇವೆ.

ವಿಲೇವಾರಿ ಏಕೆ ವಿಳಂಬ?:

ಈ ಸಮಸ್ಯೆಗೆ ಹಲವು ಕಾರಣಗಳಿವೆ. ನ್ಯಾಯಾಲಯಗಳಲ್ಲಿ ಪ್ರಕರಣಗಳು ವರ್ಷಗಟ್ಟಲೆ ಬಾಕಿ ಉಳಿಯುವುದು. ಪ್ರಕರಣ ಮುಕ್ತಾಯವಾಗುವವರೆಗೆ ವಾಹನ ಬಿಡುಗಡೆ ಅಥವಾ ಹರಾಜು ಸಾಧ್ಯವಾಗದಿರುವುದು.ವಾಹನ ಮಾಲೀಕರು ದಂಡ, ತೆರಿಗೆ ಅಥವಾ ದಾಖಲೆಗಳ ಕೊರತೆಯಿಂದ ವಾಹನ ಪಡೆಯಲು ಮುಂದೆ ಬರದಿರುವುದು ಪ್ರಮುಖ ಕಾರಣವಾಗುತ್ತಿದೆ.
ವಾಹನದ ಮೌಲ್ಯಕ್ಕಿಂತ ದಂಡ ಮತ್ತು ಬಾಕಿ ಮೊತ್ತವೇ ಹೆಚ್ಚಾಗಿರುವುದರಿಂದ ಮಾಲೀಕರು ವಾಹನವನ್ನೇ ಬಿಟ್ಟು ಹೋಗುತ್ತಿದ್ದಾರೆ. ವಾರಸುದಾರರಿಲ್ಲದ ವಾಹನಗಳ ಗುರುತು ಪತ್ತೆ ಮತ್ತು ಕಾನೂನು ಪ್ರಕ್ರಿಯೆ ವಿಳಂಬವಾಗುವುದರಿಂದ ಬೆಲೆ ಬಾಳುವ ವಾಹನಗಳು ನಿಂತಲ್ಲೇ ನಿಂತು ಹಾಳಾಗುತ್ತಿವೆ.

ಜಾಗದ ಕೊರತೆ:

ಜಾಗದ ಕೊರತೆಯಿಂದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ. ಪ್ರತಿ ಠಾಣೆಯಲ್ಲೂ ಜಪ್ತಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಹೊಸದಾಗಿ ವಶಕ್ಕೆ ಪಡೆಯುವ ವಾಹನಗಳನ್ನು ನಿಲ್ಲಿಸಲು ಜಾಗದ ಕೊರತೆ ಎದುರಾಗುತ್ತಿದೆ. ಕೆಲವು ಠಾಣೆಗಳು ಆವರಣದ ಹೊರಭಾಗದಲ್ಲಿಯೂ ವಾಹನಗಳನ್ನು ನಿಲ್ಲಿಸುವ ಪರಿಸ್ಥಿತಿ ಎದುರಿಸುತ್ತಿವೆ. ಇದರಿಂದ ಠಾಣೆಗಳ ಕಾರ್ಯನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ.

ನಿತ್ಯ 2 ಸಾವಿರ ವಾಹನ ನೋಂದಣಿ:

ನಗರದಲ್ಲಿ ನಿತ್ಯ 2 ಸಾವಿರ ಹೊಸ ವಾಹನಗಳು ನೋಂದಣಿಯಾಗುತ್ತಿವೆ. ಕಾರುಗಳಿಗಿಂತ ಹೆಚ್ಚಾಗಿ ಬೈಕ್‌ಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಇಂಧನ ದರ ಹೆಚ್ಚಳವಾಗುತ್ತಿರುವ ಪರಿಣಾಮ ಎಲೆಕ್ಟ್ರಿಕಲ್ (ಇ.ವಿ) ವಾಹನ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಆದ್ದರಿಂದ ಕೆಲ ವಾಹನ ಮಾಲೀಕರು ಹಳೇ ವಾಹನಗಳನ್ನು ಮಾರಾಟಕ್ಕೆ ಮುಂದಾಗುತ್ತಿದ್ದಾರೆ. ಸೂಕ್ತ ದಾಖಲೆ ಇಲ್ಲದೆ ಖರೀದಿ ಮಾಡುವ ವಾಹನಗಳು ಸಂಚಾರ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ತೆಗೆದುಕೊಂಡು ಹೋಗುತ್ತಾರೆ. ಅವುಗಳನ್ನು ಬಿಡಿಸಿಕೊಳ್ಳಲು ವಾರಸುದಾರರು ಬಾರದ ಪರಿಣಾಮ ಜಪ್ತಿ ಮಾಡಿರುವ ವಾಹನ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಳವಾಗುತ್ತಿದೆ.
ಕೆಲವು ಪ್ರಕರಣಗಳಲ್ಲಿ ಜಪ್ತಿ ಮಾಡಿರುವ ವಾಹಗಳನ್ನು ಬಿಡಿಸಿಕೊಳ್ಳಲು ವಾಹನ ಮಾಲೀಕರು ನಾಲ್ಕೈದು ವರ್ಷ ಬಳಿಕ ಠಾಣೆಗೆ ಆಗಮಿಸಿ ತಮ್ಮ ವಾಹನ ಬಿಡುಗೆ ಮುಂದಾಗುತ್ತಿದ್ದಾರೆ. ಒಂದು ವೇಳೆ ವಾಹನ ಮಾಲೀಕರು ಬಾರುವುದಿಲ್ಲ ಎಂಬ ಕಾರಣದಿಂದ ಅಂತಹ ವಾಹನಗಳನ್ನು ಗುಜರಿ ಅಥವಾ ವಿಲೇವಾರಿ ಮಾಡುವುದರಿಂದ ಪೊಲೀಸರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಬಹುತೇಕ ಠಾಣೆಗಳಲ್ಲಿ ಸೀಜ್ ಮಾಡಿರುವ ವಾಹನಗಳ ಗೋಜಿಗೆ ಪೊಲೀಸ್ ಅಧಿಕಾರಿಗಳು ಹೋಗುತ್ತಿಲ್ಲ ಎನ್ನಲಾಗಿದೆ.

ಕೋಟ್ಯಂತರ ಆರ್ಥಿಕ ನಷ್ಟ:

ವಾಹನವನ್ನು ಜಪ್ತಿ ಮಾಡಿದಾಗ ಅದರ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿ ಇರಬಹುದು. ಆದರೆ ವರ್ಷಗಟ್ಟಲೆ ಮಳೆ-ಬಿಸಿಲಿನಲ್ಲಿ ಬಿಟ್ಟ ಪರಿಣಾಮ ಅದು ಕೊನೆಗೆ ಆ ವಾಹನ ಸಕ್ಯೆಾಪ್ ಮೌಲ್ಯಕ್ಕೆ ಇಳಿಯುತ್ತದೆ. ಇದರಿಂದ ಆರ್ಥಿಕ ನಷ್ಟವಾಗುತ್ತಿದೆ ಎನ್ನಲಾಗಿದೆ. ತುಕ್ಕು ಹಿಡಿದ ವಾಹನಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಸೋರಿಕೆಯಾಗುವ ಎಣ್ಣೆ, ಬ್ಯಾಟರಿಗಳಲ್ಲಿರುವ ರಾಸಾಯನಿಕಗಳು ಮಣ್ಣಿನ ಗುಣಮಟ್ಟದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಇದು ಕೇವಲ ಆಡಳಿತಾತ್ಮಕ ಸಮಸ್ಯೆಯಲ್ಲ, ಪರಿಸರದ ಸಮಸ್ಯೆಯು ಇದರಿಂದ ಹೆಚ್ಚುತ್ತಾ ಹೋಗುತ್ತಿದೆ.