- ರೀಲ್ಸ್ ಹುಚ್ಚಾಟಕ್ಕೆ ತನ್ನ ತಂದೆಯನ್ನೇ ಕೊರಿಯರ್ ಚೀಲದಲ್ಲಿ ಕೂರಿಸಿದ ಮಹಿಳೆ!
- ಇಬ್ಬರು ಮಹಿಳೆಯರು ಮತ್ತು ವೃದ್ಧ ಸೇರಿದಂತೆ ಆರು ಜನರ ಗುಂಪೊಂದು ಕೊರಿಯರ್ ಕಚೇರಿಗೆ ಭೇಟಿ
- ಕೊರಿಯರ್ ಏಜೆನ್ಸಿ ಸಿಬ್ಬಂದಿ ಗೋಣಿ ಚೀಲದಲ್ಲಿ ಏನಿದೆ? ಎಲ್ಲಿಗೆ ಪಾರ್ಸೆಲ್ ಮಾಡಬೇಕೆಂದು ಕೇಳಿದ್ದಾರೆ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನರನ್ನು ಸೆಳೆಯುವ ಉದ್ದೇಶದಿಂದ ಅನೇಕರು ಸಾಮಾಜಿಕ ಜಾಲತಾಣದಲ್ಲಿ ನಾನಾ ರೀತಿಯ ವಿಡಿಯೋಗಳನ್ನು ಮಾಡಿ ಹರಿಬಿಡುವುದನ್ನು ನಾವು ನೋಡಿರುತ್ತೇವೆ. ಆದರೆ, ಇಲ್ಲೊಬ್ಬ ಮಹಿಳೆ ರೀಲ್ಸ್ ಹುಚ್ಚಾಟಕ್ಕೆ ತನ್ನ (Courier Father) ತಂದೆಯನ್ನೇ ಕೊರಿಯರ್ ಚೀಲದಲ್ಲಿ ಕೂರಿಸಿ ಅದನ್ನು ಪಾರ್ಸೆಲ್ ಮಾಡುವಂತೆ ಚಿತ್ರೀಕರಿಸಿದ್ದು, ಸಧ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಘಟನೆ ಏನು?
ಬೆಂಗಳೂರಿನ ಇಬ್ಬರು ಮಹಿಳೆಯರು ಮತ್ತು ವೃದ್ಧ ಸೇರಿದಂತೆ ಆರು ಜನರ ಗುಂಪೊಂದು ಕೊರಿಯರ್ ಕಚೇರಿಗೆ ಭೇಟಿ ನೀಡಿ, ಗೋಣಿ ಚೀಲದಲ್ಲಿ ಪ್ಯಾಕ್ ಮಾಡಿದ ವಸ್ತುವನ್ನು ಕೊರಿಯರ್ ಮಾಡಬೇಕೆಂದು ಹೇಳಿದ್ದಾರೆ.
ಚೀಲವು ಅಸಹಜವಾಗಿ ಅಲುಗಾಡುತ್ತಿರುವುದನ್ನು ಮತ್ತು ಅದರಿಂದ ಶಬ್ದ ಬರುತ್ತಿರುವುದನ್ನು ಗಮನಿಸಿದ ಕೊರಿಯರ್ ಏಜೆನ್ಸಿ ಸಿಬ್ಬಂದಿ ಗೋಣಿ ಚೀಲದಲ್ಲಿ ಏನಿದೆ? ಎಲ್ಲಿಗೆ ಪಾರ್ಸೆಲ್ ಮಾಡಬೇಕೆಂದು ಕೇಳಿ ಚೀಲವನ್ನು ಓಪನ್ ಮಾಡಿದ್ದಾರೆ. ಆಗ ಒಬ್ಬ ವೃದ್ಧ ಆ ಚೀಲದಿಂದ ಹೊರ ಬರುವುದನ್ನು ವಿಡಿಯೋ ತೋರಿಸುತ್ತದೆ.
ಈ ವೇಳೆ ಕುಟುಂಬಸ್ಥರು ಸಿಬ್ಬಂದಿಯೊಂದಿಗೆ ಮಾತನಾಡುತ್ತಾ, ನಾವು ಅವರನ್ನು ಬೇರೆ ಜಿಲ್ಲೆಗೆ ಕೊರಿಯರ್ ಮಾಡಲು ಬಯಸುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ ಮನುಷ್ಯನನ್ನು ಕೊರಿಯರ್ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕುಟುಂಬದವರು ತಮ್ಮ ತಮಾಷೆಗೆ ಕ್ಷಮೆಯಾಚಿಸುವ ಬದಲು, ಸಿಬ್ಬಂದಿಗೆ ಕೊರಿಯರ್ ಮಾಡಲು ಸಾಧ್ಯವಾಗದಿದ್ದರೆ, ನೀವು ವ್ಯವಹಾರವನ್ನು ಏಕೆ ನಡೆಸುತ್ತಿದ್ದೀರಿ. ನಿಮ್ಮಿಂದ ನಮ್ಮ ಸಮಯ ಹಾಳಾಗಿದೆ. ಅದಕ್ಕಾಗಿ ಹಣ ಪಾವತಿಸಿ ಎಂದು ವಾದ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಸಿಬ್ಬಂದಿ ಸ್ಥಳಕ್ಕೆ ಪೊಲೀಸರನ್ನು ಕರೆಸಿ, ವಿಚಾರವನ್ನು ತಿಳಿಸಿದ್ದಾರೆ. ಈ ವೇಳೆ ಅಧಿಕಾರಿಗಳು ತನಿಖೆ ನಡೆಸುವಾಗ ಗುಂಪಿನಲ್ಲಿದ್ದ ಕೆಲವರು ಮೊಬೈಲ್ ಫೋನ್‌ಗಳಲ್ಲಿ ರೀಲ್‌ಗಳನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.
ಈ ಘಟನೆ ಬಗ್ಗೆ ಮಾತನಾಡಿದ ಕುಟುಂಬಸ್ಥರು ಯುಗಾದಿ ಮತ್ತು ರಂಜಾನ್ ಹಬ್ಬದ ಹಿನ್ನಲೆ ಬಸ್ ಟಿಕೆಟ್ ಬೆಲೆ ಏರಿಕೆಯಾಗುತ್ತಿದೆ. ಈ ಸಂಬಂಧ ತಮಾಷೆಗಾಗಿ ರೀಲ್ಸ್ ರೆಕಾರ್ಡ್ ಮಾಡುತ್ತಿದ್ದೆವು ಎಂದು ಪೊಲೀಸರಲ್ಲಿ ಕುಟುಂಬ ಒಪ್ಪಿಕೊಂಡಿದೆ. ಆದಾಗ್ಯೂ, ಕುಟುಂಬದ ಮೇಲೆ ಪೊಲೀಸರು ಯಾವುದೇ ಕೇಸುಗಳನ್ನು ದಾಖಲಿಸಿಕೊಂಡಿಲ್ಲ.
ನೆಟ್ಟಿಗರ ಆಕ್ರೋಶ!
ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ವ್ಯೂಸ್‌ಗಾಗಿ ತಂದೆಯ ಜೀವವನ್ನೇ ಪಣಕ್ಕಿಡುವುದೇ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಸೈಬರ್ ತಜ್ಞರು ಮತ್ತು ಮನಶ್ಶಾಸ್ತ್ರಜ್ಞರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಜನರು ಡಿಜಿಟಲ್ ಜಗತ್ತಿನಲ್ಲಿ ಗಮನ ಸೆಳೆಯಲು ತಮ್ಮ ವಿವೇಚನೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇದು ಅಟ್ಟಹಾಸದ ಪರಮಾವಧಿ ಎಂದು ಅಭಿಪ್ರಾಯಪಟ್ಟಿದ್ದಾರೆ (ಏಜೆನ್ಸೀಸ್).