Bengaluru Woman Serves Chai To Sanitation Workers
- ಪ್ರಚಾರದ ಹಂಗಿಲ್ಲದೆ ಪೌರ ಕಾರ್ಮಿಕರಿಗೆ ನಿತ್ಯ ಟೀ-ಬಿಸ್ಕತ್ ಬಾಳೆಹಣ್ಣು ನೀಡುವ ಮಹಿಳೆ
- ಬೆಂಗಳೂರಿನಲ್ಲಿನ ಮಹಿಳೆಯ ನಿಸ್ವಾರ್ಥ ಸೇವೆಗೆ ಜನರು ಫಿದಾ
- ಬೀದಿ ನಾಯಿ, ಬೆಕ್ಕಿಗೆ ಹಾಲು, ನೀರು ಹಾಗೂ ಪಕ್ಷಿಗಳಿಗೆ ಧಾನ್ಯ ನೀಡುವ ಮಹಿಳೆ
ಬೆಂಗಳೂರು: ಲೈಕ್ಸ್, ಶೇರ್, ಕಾಮೆಂಟ್ಗಾಗಿ ಕೆಲವರು ಬೀದಿಯಲ್ಲಿ ಮಲಗಿರುವ ಕಾರ್ಮಿಕರಿಗೆ, ದಿಕ್ಕು-ದೆಸೆ ಇಲ್ಲದವರಿಗೆ ಬೆಡ್ಶೀಟ್, ಆಹಾರ ಹೀಗೆ ನಾನಾ ರೀತಿಯಲ್ಲಿ ಸಹಾಯ ಮಾಡಿದ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಒಂದು ಶೋಕಿ ಅಥವಾ ಫ್ಯಾಶನ್ ಆಗಿ ಬದಲಾಗಿದೆ. ಈ ಮಧ್ಯೆ ಬೆಂಗಳೂರಿನ ಮಹಿಳೆಯೊಬ್ಬರು ಯಾವುದೇ ಪ್ರಚಾರದ ಗೀಳಿಲ್ಲದೆ, ನಿಸ್ವಾರ್ಥವಾಗಿ ಮನೆ ಬಳಿಗೆ ಬರು ಪೌರ ಕಾರ್ಮಿಕರಿಗೆ ಬಾಕ್ಸ್ನಲ್ಲಿ ಆಹಾರ, ಟೀ, ಬಿಸ್ಕತ್ ನಿತ್ಯ ನೀಡುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.
ಕನ್ನಡ ಸಿನಿಮಾ ರಂಗದ ಬರಹಗಾರ, ಕಾದಂಬರಿಕಾರ ಜಗದೀಶ್ ನಂದನಹಳ್ಳಿ ಎಂಬುವವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 24 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದು, ಹಲವರು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ನನ್ನ ತಾಯಿಯೂ ಹೀಗೆನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ವಿಡಿಯೋದಲ್ಲಿ ಏನಿದೆ?
ರೀಲ್ಸ್, ಸಬ್ಸ್ಕ್ರಿಪ್ಶನ್ಗಾಗಿ, ಪ್ರಚಾರಕ್ಕಾಗಿ ಈಗಿನ ಕಾಲಘಟ್ಟದವರು ಏನನ್ನಾದರೂ ಮಾಡುತ್ತಾರೆ.ಆದರೆ, ನನ್ನ ಮನೆಯ ಮುಂದಿನ ಮನೆಯಲ್ಲಿರುವ ಮಹಿಳೆಯು ಯಾವುದೇ ಪ್ರಚಾರಕ್ಕೂ ಒಳಗಾಗದೇ ತನ್ನ ಆತ್ಮ ತೃಪ್ತಿಗಾಗಿ, ನಿತ್ಯ ತನ್ನ ಮನೆಯ ಸುತ್ತ ಕೆಲಸ ಮಾಡುವ ಕಾರ್ಮಿಕರಿಗೆ ಬಿಸಿ ಚಹಾ, ಆಹಾರ ನೀಡುತ್ತಾರೆ. ಇಂದು ಅವರ ಬಗ್ಗೆ ಬರೆಯಲು ಇಚ್ಛಿಸುತ್ತೇನೆ.
ಈ ವಿಡಿಯೋದಲ್ಲಿ ಇರುವ ಮಹಿಳೆ ನಮ್ಮ ಬಿಲ್ಡಿಂಗ್ ಎದಿರು ಇರುತ್ತಾರೆ. ನಾನು ನಮ್ಮ ಬಿಲ್ಡಿಂಗ್‌ನಲ್ಲಿ ಹತ್ತು ವರ್ಷಗಳಿಂದ ಬಾಡಿಗೆ ಇರುತ್ತಿದ್ದೇನೆ. ನಮ್ಮ ಓನರ್ ಕೂಡ ಈ ಮಹಿಳೆಯ ಹಾಗೆ. ಅವರ ಕತೆ ಬೇರೊಂದು ದಿನ ಹೇಳುತ್ತೇನೆ. ಇವರನ್ನು ನಾನು ಸುಮಾರು ವರ್ಷಗಳಿಂದ ಗಮನಿಸುತ್ತ ಬಂದಿದ್ದೇನೆ. ಇವರು ಹೆಚ್ಚು ಕಡಿಮೆ ಪ್ರತಿ ದಿನ ನಮ್ಮ ಬೀದಿಗೆ ಬರುವ ಪೌರ ಕಾರ್ಮಿಕರಿಗೆ ಕಾಫಿ, ಬ್ರೇಡ್, ಬಿಸ್ಕತ್, ಬಾಳೆ ಹಣ್ಣು ಕೊಡುತ್ತಾರೆ. ಕೆಲ ವಿಷೇಶ ಸಂದರ್ಭಗಳಲ್ಲಿ ಬೇರೆ ತಿಂಡಿ ತಿನಿಸುಗಳನ್ನು ಹಾಗೂ ವಸ್ತುಗಳನ್ನು ಕೊಡುತ್ತಾರೆ. ಇನ್ನು ಹಬ್ಬದ ದಿನ ಅಂದ್ರೆ ಮುಗಿತು ಮನೆಯಲ್ಲಿ ವಿಶೇಷವಾಗಿ ಆಹಾರ ತಯಾರಿಸಿದರೆ ಅವರಿಗೂ ಅದನ್ನು ನೀಡುತ್ತಾಳೆ.
ನಿಸ್ವಾರ್ಥ ಪ್ರೀತಿ
ಇಷ್ಟೇ ಈಕೆಯ ಔದಾರ್ಯ ಮುಗಿದಿಲ್ಲ. ಮನೆಯ ಮುಂದೆ ನಾಯಿ ಬೆಕ್ಕಿಗಾಗಿ ನೀರಿನ ಬೌಲ್, ಹಾಲಿನ ಬೌಲ್ ಇರಿಸಿರುತ್ತಾರೆ. ಇನ್ನು ಮಹಡಿ ಮೇಲಿನ ತಾರಸಿಯಲ್ಲಿ ಹಕ್ಕಿಗಳಿಗೆ ಧಾನ್ಯ ಇಟ್ಟಿರುತ್ತಾರೆ. ಹಾಗೆ ಮನೆಯ ಮುಂದೆ ತರಕಾರಿ, ಹೂವು, ಹಣ್ಣು ಮಾರಲು ಬರುವ ಮಾರಾಟಗಾರರನ್ನು ತುಂಬ ಆತ್ಮೀಯತೆಯಿಂದ ನೋಡುತ್ತಾರೆ. ಕೆಲವರಂತೂ ಏನು ಮಾರದಿದ್ದರೂ ಇವರನ್ನು ಮಾತಾಡಿಸಿಕೊಂಡು ಹೋಗಲು ಬರುತ್ತಾರೆ. ಕೆಲವರು ಇವ್ರ ಬಳಿ ಸುಮ್ಮನೇ ಹರಟೆಗಿಳಿಯೋಕೆ ಬರುತ್ತಾರೆ.
ನಾನು ಇಷ್ಟು ವರ್ಷಗಳಲ್ಲಿ, ಇಷ್ಟೊಂದು ಶ್ರದ್ಧೆಯಿಂದ, ಹೆಚ್ಚು ಕಡಿಮೆ ಪ್ರತಿ ದಿನ ಇನ್ನೊಬ್ಬರಿಗೆ ಸಹಾಯ ಮಾಡುವ ವ್ಯಕ್ತಿಯನ್ನು ದೇವರಾಣೆಗೂ ನೋಡಿರಲಿಲ್ಲ. ಅದೂ ಯಾವುದೇ ಫಲಾಪೇಕ್ಷೆ ಅಥವಾ ಸೋಷಿಯಲ್ ಮೀಡಿಯಾದ ಪ್ರಚಾರ ಬಯಸದೆ, ನಿಸ್ವಾರ್ಥವಾಗಿ ಮಾಡುತ್ತಿದ್ದಾರೆ ಎಂದರೆ ಇವರು ನಿಜವಾಗಿಯೂ ಮಹಾತಾಯಿಗೆ ಸಮಾನ.
ಯಾರೀ ಜಗದೀಶ್ ನಂದನಹಳ್ಳಿ
ಜಗದೀಶ್ ನಂದನಹಳ್ಳಿಯವರು ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಬರಹಗಾರ. ಗೀತರಚನೆಕಾರ ಮತ್ತು ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ರಾಜು ಜೇಮ್ಸ್ ಬಾಂಡ್' ಮತ್ತು 'ಕಲ್ಬೆಟ್ಟದ ದರೋಡೆಕೋರರು ಎಂಬ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಮೂರನೇ ಪ್ರೀತಿ ಎನ್ನುವ ಕಾಂದಂಬರಿ ಹಾಗೂ ಮೀ, ಮೈ ಫ್ರೆಂಡ್ಸ್ ಅಂಡ್ ಆನ್ ಆಂಟಿ ಬರೆದಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).