Bengaluru woman quits job over cigarette smoke in office 
ರಾಜ್ಯ

'ಎಷ್ಟೂ ಅಂತ ಸಹಿಸಿಕೊಳ್ಳೋದು'; ಆಫೀಸಿನಲ್ಲಿ ಸಿಗರೇಟು ವಾಸನೆಗೆ ಬೇಸತ್ತು ಯುವತಿ ರಿಸೈನ್, ಎಕ್ಸ್​ ಪೋಸ್ಟ್​ ವೈರಲ್​​..Bengaluru woman

ಬೆಂಗಳೂರು: ಸ್ವಚ್ಛತೆ ಇಲ್ಲದೇ ಇರುವುದು ಎಲ್ಲವೂ ಒಂದು ರೀತಿಯಲ್ಲಿ ನರಕಯಾತನೆ. ಇದೆಲ್ಲ ಯಾರಿಗೆ ತಿಳಿಸೋದು ಎಂದು ಸುಮ್ಮನಾಗುವುದು ಇದೆ. ಆದರೆ, ಇಲ್ಲೊಬ್ಬ ಯುವತಿ ಆಫೀಸಲ್ಲಿ ಸಿಗರೇಟ್ ಹೊಗೆಯ ವಾಸನೆ ಹಾಗೂ ಅದರಿಂದ ಉಂಟಾಗುತ್ತಿದ್ದ ಆರೋಗ್ಯ ಸಮಸ್ಯೆಯನ್ನು ಲೆಕ್ಕಕ್ಕಿಟ್ಟುಕೊಂಡು ಯಾರನ್ನು, ಯಾವುದನ್ನ ಕ್ಯಾರೆ ಎನ್ನದೇ ರಿಸೈನ್​ ಮಾಡಿದ ಘಟನೆ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಜಾನ್ವಿ ಚಾವಡಾ ಎಂಬುವವರೇ ರಿಸೈನ್ ಮಾಡಿದ ದಿಟ್ಟ ಮಹಿಳೆ. ಮೇಲ್​​ನಲ್ಲಿ ರಾಜೀನಾಮೆ ಪತ್ರ ಕಳಿಸಿದ್ದನ್ನು ಸ್ಕ್ರೀನ್​ ಶಾಟ್​ ತೆಗೆದುಕೊಂಡು, ಎಕ್ಸ್​​ನಲ್ಲಿ ನಿನ್ನೆ(ಆ.25) ನಾನು ಕೆಲಸಕ್ಕೆ ರಾಜೀನಾಮೆ ಕೊಟ್ಟೆ ಕಾರಣ ಹೀಗಿದೆ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಇದುವರೆಗೆ ಈ ಪೋಸ್ಟ್​ 5.6 ಮಿಲಿಯನ್ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.

ರಿಸೈನ್​ ಲೆಟರ್​ನಲ್ಲಿ ಏನಿದೆ?

ಇಮೇಲ್‌ನಲ್ಲಿರುವ ರಾಜೀನಾಮೆ ಪತ್ರದಲ್ಲಿ ಹೀಗಿದೆ, 'ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂಬುದನ್ನು ಈ ಇಮೇಲ್ ಮೂಲಕ ಔಪಚಾರಿಕವಾಗಿ ತಿಳಿಸಲು ಬಯಸುತ್ತೇನೆ. ಕಂಪನಿಯಲ್ಲಿ ನನ್ನ ಕೊನೆಯ ದಿನ - ಆಗಸ್ಟ್ 25', 2026 ಎಂದು ಬರೆದುಕೊಳ್ಳಲಾಗಿದೆ. ತಮ್ಮ ನಿರ್ಧಾರವನ್ನು ವಿವರಿಸುತ್ತಾ, 'ನನಗೆ ಸಿಗರೇಟ್ ವಾಸನೆಯನ್ನು ಸಹಿಸಲು ಸಾಧ್ಯವಿಲ್ಲ. ಎಷ್ಟು ಸಾಧ್ಯವೋ ಅಷ್ಟು ಹೊಂದಿಕೊಳ್ಳಲು ಪ್ರಯತ್ನಿಸಿದೆ ಆದರೆ ಆಗಲಿಲ್ಲ. ಹೇಗಾದರೂ ಬದಲಾಗಬೇಕಾದವಳು ನಾನಲ್ಲ' ಎಂದು ತಿಳಿಸಿದ್ದಾರೆ.
ಈ ಪೋಸ್ಟ್​ಗೆ ನೆಟ್ಟಿಗರೊಬ್ಬರು ಧೂಮಪಾನ ಎಲ್ಲಿ ನಡೆಯುತ್ತಿತ್ತು ಕಚೇರಿಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಜಾನ್ವಿ, 'ಪ್ಯಾಂಟ್ರಿ ರೂಮ್' ಮತ್ತು ಲಂಚ್​ ಏರಿಯಾದಲ್ಲಿ ಧೂಮಪಾನ ಮಾಡುತ್ತಿದ್ದರು, ಕೆಲವರು ಸ್ಮೋಕ್ ಮಾಡಿದ ನಂತರ ತನ್ನ ಪಕ್ಕದಲ್ಲೇ ಬಂದು ಕುಳಿತುಕೊಳ್ಳುತ್ತಿದ್ದರು. ಸಿಗರೇಟ್ ಹೊಗೆ ತಾನು ಕೆಲಸ ಮಾಡುತ್ತಿದ್ದ ಲಾಬಿ ಪ್ರದೇಶದಾದ್ಯಂತ ಹರಡುತ್ತಿತ್ತು. ಇದರಿಂದ ನನ್ನನ್ನು ನಾನು ರಕ್ಷಣೆ ಮಾಡಿಕೊಳ್ಳಲು ಮಾಸ್ಕ್ ಧರಿಸಿದೆ, ಆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.

ಸೆಕೆಂಡ್ ಹ್ಯಾಂಡ್ ಸ್ಮೋಕ್​ ಬಗ್ಗೆ ಆತಂಕ

ಇನ್ನು ಕೆಲವರು ಜಾನ್ವಿ ಚಾವಡಾ ಅವರು ಉದ್ಯೋಗದಲ್ಲಿ ಮುಂದುವರಿಯುವ ಬದಲು ತಮ್ಮ ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಿರುವುದನ್ನು ಶ್ಲಾಘಿಸಿದ್ದು, ಪ್ಯಾಸಿವ್ ಸ್ಮೋಕಿಂಗ್ಗೆ ಸಂಬಂಧಿಸಿದ ಆರೋಗ್ಯ ಕಾಳಜಿಗಳನ್ನು ಎತ್ತಿ ತೋರಿಸಿದ್ದಾರೆ.

ನೆಟ್ಟಿಗರು ಏನಂದ್ರು?

ಧೈರ್ಯಶಾಲಿ ಮತ್ತು ಅತ್ಯುತ್ತಮವಾದ ನಿರ್ಧಾರ..!. ಭಾರತದಲ್ಲಿನ ಕಚೇರಿಗಳು ಈ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟುಬಿಡಬೇಕು ಮತ್ತು ಕೇವಲ ವಿರಾಮದ ಸಮಯದಲ್ಲಿಯೂ ಅಲ್ಲದೆ, ಒಟ್ಟಾರೆಯಾಗಿ ಕಚೇರಿಯೊಳಗೆ ಧೂಮಪಾನ ಮತ್ತು ಮದ್ಯಪಾನ ನಿಷೇಧ ನೀತಿಯನ್ನು ಜಾರಿಗೆ ತರಲು ಕೆಲಸ ಮಾಡಬೇಕು. ಕೆಲಸದ ವೇಳೆಯಲ್ಲಿ ಧೂಮಪಾನವಿಲ್ಲ, ಮದ್ಯಪಾನವಿಲ್ಲ. ಮನೆಗೆ ಹೋಗಿ, ಕೆಲಸದ ಸಮಯ ಮುಗಿದ ನಂತರ ಅಲ್ಲಿ ಧೂಮಪಾನ ಮಾಡಿಕೊಳ್ಳಿ ಎಂದು ಎಸ್​​ಕೆ ಸಿಂಗ್​ ಎಂಬುವವರು ಕಾಮೆಂಟ್ ಮಾಡಿದ್ದಾರೆ.