Bengaluru Potholes (ಚಿತ್ರ X) 
ರಾಜ್ಯ

ಇದು ಆಡಳಿತದ ವೈಫಲ್ಯ!: ಸಿಮೆಂಟ್ ಹಿಡಿದು ಗುಂಡಿ ಮುಚ್ಚಲು ರಸ್ತೆಗಿಳಿದ ಬೆಂಗಳೂರಿನ ಮಹಿಳೆ, ವಿಡಿಯೋ ವೈರಲ್! Bengaluru Potholes

ಬೆಂಗಳೂರು: ಸಿಲಿಕಾನ್ ಸಿಟಿಯ ಮುಖ್ಯ ರಸ್ತೆಯೊಂದರ ಬಿದ್ದಿದ್ದ ದೊಡ್ಡ ಗುಂಡಿಯನ್ನು (Bengaluru Potholes) ಮುಚ್ಚಲು ಮಹಿಳೆಯೊಬ್ಬರು ಸ್ವತಃ ಮುಂದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸಾರ್ವಜನಿಕರ ಜವಬ್ದಾರಿ ಮತ್ತು ಸುರಕ್ಷತೆಯ ಕುರಿತು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.

ವೈರಲ್​ ವಿಡಿಯೋದಲ್ಲೇನಿದೆ?

ವೈರಲ್ ಆಗಿರುವ ವಿಡಿಯೋದಲ್ಲಿ, ಹೆಲ್ಮೆಟ್ ಧರಿಸಿರುವ ಮಹಿಳೆಯೊಬ್ಬರು ರಸ್ತೆಯ ದೊಡ್ಡ ಗುಂಡಿಗೆ ಸಿಮೆಂಟ್ ಮಿಶ್ರಣದಂತಿರುವ ಎರಡು ಚೀಲಗಳ ವಸ್ತುವನ್ನು ಸುರಿದು, ಅದನ್ನು ಸಮತಟ್ಟು ಮಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಮಹಿಳೆಯ ಈ ಶ್ರಮವನ್ನು ಹಲವರು ಶ್ಲಾಘಿಸಿದ್ದರೆ, ಇನ್ನು ಕೆಲವರು ಒಣ ಸಿಮೆಂಟ್ ಅಥವಾ ಮಣ್ಣಿನಂತಹ ತಾತ್ಕಾಲಿಕ ವಸ್ತುಗಳನ್ನು ಬಳಸಿ ಗುಂಡಿ ಮುಚ್ಚುವುದರಿಂದ ದ್ವಿಚಕ್ರ ವಾಹನ ಸವಾರರಿಗೆ ರಸ್ತೆ ಮತ್ತಷ್ಟು ಅಪಾಯಕಾರಿಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ಕಿಡಿ
ಈ ವಿಡಿಯೋವನ್ನು @sanatan_kannada ಎಂಬ 'X' ಬಳಕೆದಾರರೊಬ್ಬರು ಹಂಚಿಕೊಂಡಿದ್ದು, ಅಧಿಕಾರಿಗಳು ಮಾಡಲು ವಿಫಲವಾದದ್ದನ್ನು ತಾಯಿಯೊಬ್ಬರ ಕರುಳು ಮಾಡಿದೆ. ಬೆಂಗಳೂರಿನ ಅಪಾಯಕಾರಿ ರಸ್ತೆ ಗುಂಡಿಗಳಿಂದ ಬೇಸತ್ತು, ಅವರೇ ಮಣ್ಣು ತಂದು ರಸ್ತೆ ಗುಂಡಿ ಮುಚ್ಚಿದ್ದಾರೆ. ನಾಗರಿಕರು ಸರ್ಕಾರದ ಕೆಲಸವನ್ನು ತಾವೇ ಮಾಡುವಂತೆ ಮಾಡಿರುವ ಜಿಬಿಎ (GBA) ಹಾಗೂ ನಗರಾಭಿವೃದ್ಧಿ ಸಚಿವರಿಗೆ ನಾಚಿಕೆಯಾಗಬೇಕು. ಇದು ಆಡಳಿತವಲ್ಲ, ಸಂಪೂರ್ಣ ವೈಫಲ್ಯ ಎಂದು ಬರೆದು ಪೋಸ್ಟ್ ಹಂಚಿಕೊಂಡಿದ್ದಾರೆ.

ಸಾರ್ವಜನಿಕರ ಮಿಶ್ರ ಪ್ರತಿಕ್ರಿಯೆ

ನಗರದ ಮೂಲಸೌಕರ್ಯಗಳ ಅಸಮರ್ಪಕ ಸ್ಥಿತಿಯ ಬಗ್ಗೆ ಜನರು ಆಕ್ರೋಶ ಹೊರಹಾಕಿದ್ದರೂ, ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡುವುದರಿಂದ ಎದುರಾಗುವ ದೀರ್ಘಕಾಲೀನ ಅಪಾಯಗಳನ್ನು ಹಲವು ವಾಹನ ಸವಾರರು ಎತ್ತಿ ತೋರಿಸಿದ್ದಾರೆ.
ಒಬ್ಬ ಬಳಕೆದಾರರು ಹೀಗೆ ಮಾಡುವುದರಿಂದ ಮರುದಿನವೇ ಮತ್ತೆ ಗುಂಡಿ ಬೀಳುತ್ತದೆ. ಸಿಮೆಂಟ್ ಅಥವಾ ಇಟ್ಟಿಗೆ ಬಳಸಿ ರಸ್ತೆ ಮುಚ್ಚುವ ಕೆಲಸವನ್ನು ಸಂಚಾರ ಪೊಲೀಸರು ಸೇರಿದಂತೆ ಯಾರೂ ಮಾಡಬಾರದು. ಇದರಿಂದ ರಸ್ತೆ ಮತ್ತಷ್ಟು ಅಪಾಯಕಾರಿಯಾಗುತ್ತದೆ. ಇದಕ್ಕೆ ಅಗರ ಕೆರೆ ರಸ್ತೆಯೇ ಉದಾಹರಣೆ; ಅಲ್ಲಿ ಸಿಮೆಂಟ್ ಹಾಕಿ ಗುಂಡಿ ಮುಚ್ಚಲಾಗಿತ್ತು, ಆದರೆ ಈಗ ಅದು ಮೂಲ ಗುಂಡಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ," ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ (ಏಜೆನ್ಸೀಸ್​).