ಬಾಗಲೂರು ಸ್ನಾತಕೋತ್ತರ ಕೇಂದ್ರಕ್ಕೆ ಚಾಲನೆ
- ಉನ್ನತ ಶಿಕ್ಷಣದ ಸೌಲಭ್ಯ ವಿಸ್ತರಣೆಯ ಜತೆಗೆ ಗುಣಮಟ್ಟದ ಬಗ್ಗೆಯೂ ಅಗತ್ಯ ಗಮನ ಹರಿಸಬೇಕೆಂದ ಸಚಿವ ಡಾ. ಎಂ.ಸಿ. ಸುಧಾಕರ್
- ನೂತನ ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ
- ಪ್ರಸಕ್ತ ಸಾಲಿನಲ್ಲಿ (2025-26) ಆರಂಭಿಕ ಕೋರ್ಸ್‌ಗಳಾಗಿ ಎಂಬಿಎ ಮತ್ತು ಎಂ.ಕಾಂ. ಕೋರ್ಸ್‌ಗಳ ಆರಂಭ
ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಗಲೂರಿನಲ್ಲಿ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ನೂತನ ಸ್ನಾತಕೋತ್ತರ ಕೇಂದ್ರವನ್ನು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಚಾಲನೆ ನೀಡಿದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಶಿಲಾಫಲಕವನ್ನು ಅನಾವರಣಗೊಳಿಸಿ ಶುಭ ಹಾರೈಸಿದರು. ಉನ್ನತ ಶಿಕ್ಷಣದ ಸೌಲಭ್ಯ ವಿಸ್ತರಣೆಯ ಜತೆಗೆ ಗುಣಮಟ್ಟದ ಬಗ್ಗೆಯೂ ಅಗತ್ಯ ಗಮನ ಹರಿಸಬೇಕೆಂದು ಸಚಿವ ಡಾ. ಎಂ.ಸಿ. ಸುಧಾಕರ್ ಸೂಚಿಸಿದರು. ಬ್ಯಾಟರಾಯನಪುರ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ನೂತನ ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ ಭೂಮಿ ಮತ್ತು ಮೂಲಸೌಕರ್ಯ ಒದಗಿಸುವ ಭರವಸೆ ನೀಡಿದರು.
ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ನಾತಕೋತ್ತರ ಕೇಂದ್ರದಲ್ಲಿ ಪ್ರವೇಶ ಪಡೆದು ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ. ರಮೇಶ್ ಮಾತನಾಡಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈ ಸ್ನಾತಕೋತ್ತರ ಕೇಂದ್ರ ಮಹತ್ವದ ಹೆಜ್ಜೆಯಾಗಿದೆ ಎಂದು ಮಾಹಿತಿ ನೀಡಿದರು.
ವಿಶ್ವವಿದ್ಯಾನಿಲಯದ ಕುಲಸಚಿವ ಎ. ನವೀನ್ ಜೋಸ್ೆ, ಮೌಲ್ಯಮಾಪನ ಕುಲಸಚಿವ ರಮೇಶ್ ಬಿ. ಕುಡೇನಟ್ಟಿ, ವಿತ್ತಾಧಿಕಾರಿ ಎಂ.ವಿ. ವಿಜಯಲಕ್ಷ್ಮಿ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕಿ ಪ್ರೊ. ರಿತಿಕಾ ಸಿನ್ಹಾ, ಸಿಂಡಿಕೇಟ್ ಮತ್ತು ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು, ಬಾಗಲೂರು ಗ್ರಾಪಂ ಅಧ್ಯಕ್ಷ ಎ. ಕೆಂಪೇಗೌಡ ಉಪಸ್ಥಿತರಿದ್ದರು.
ಎಂಬಿಎ, ಎಂ.ಕಾಂ ಆರಂಭ: ಕುಲಪತಿ ಪ್ರೊ. ಬಿ. ರಮೇಶ್
ಪ್ರಸಕ್ತ ಸಾಲಿನಲ್ಲಿ (2025-26) ಆರಂಭಿಕ ಕೋರ್ಸ್‌ಗಳಾಗಿ ಎಂಬಿಎ ಮತ್ತು ಎಂ.ಕಾಂ. ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ಮುಂದಿನ ವರ್ಷ ಹೊಸದಾಗಿ ಬೇಡಿಕೆ ಇರುವಂತಹ ಬಿಸಿಎ ಹಾಗೂ ಬಿ.ಕಾಂ. ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭವಾಗಲು ಇನ್ನೂ 7ರಿಂದ 8 ತಿಂಗಳು ಇರುವ ಕಾರಣ ಇನ್ನೂ ಹೆಚ್ಚಿನ ಕೋರ್ಸ್‌ಗಳನ್ನು ವಿದ್ಯಾರ್ಥಿಗಳ ದೃಷ್ಟಿಯಿಂದ ಆರಂಭಿಸಲು ಸಾಧ್ಯವಿದೆಯೇ ಎಂಬುದನ್ನು ಚಿಂತಿಸಲಾಗುತ್ತಿದೆ ಎಂದು ಬೆಂ.ನಗರ ವಿವಿ ಕುಲಪತಿ ಪ್ರೊ. ಬಿ. ರಮೇಶ್ ತಿಳಿಸಿದರು.
ಸದ್ಯ ತಾತ್ಕಾಲಿಕವಾಗಿ ಪಿಯು ಇಲಾಖೆಯ ಪದವಿ ಪೂರ್ವ ಕಾಲೇಜು ಕಟ್ಟಡದಲ್ಲಿ ಕೇಂದ್ರವನ್ನು ಆರಂಭಿಸಲಾಗಿದೆ. ಕಂಪ್ಯೂಟರ್ ಲ್ಯಾಬ್, ಗ್ರಂಥಾಲಯ, ಕಚೇರಿ ಮತ್ತು ಪ್ರಾಧ್ಯಾಪಕರಿಗೆ ಅವಶ್ಯವಿರುವ ಸೌಲಭ್ಯ ಕಲ್ಪಿಸಲಾಗಿದೆ. ಹೊಸ ಕಟ್ಟಡಗಳನ್ನು ನಿರ್ಮಿಸಲು ಜಾಗದ ಹುಡುಕಾಟದಲ್ಲಿದ್ದು, ಸದ್ಯವೇ ಗುರುತು ಮಾಡಲಾಗುತ್ತದೆ ಎಂದು ತಿಳಿಸಿದರು.