- ಬೆಂಗಳೂರಿನಲ್ಲಿ ಭೀಕರ ತ್ರಿವಳಿ ಕೊಲೆ
- ತಂದೆ-ತಾಯಿ, ತಂಗಿಯನ್ನೇ ಕೊಂದ ಆರೋಪಿ ಶ್ವೇತಾ
- ಪ್ರಿಯಕರನಿಗೋಸ್ಕರ ಕುಟುಂಬದವರನ್ನೇ ಬಲಿ ಕೊಟ್ಟ ಪಾಪಿ ಅರೆಸ್ಟ್ ತನಿಖೆಯಲ್ಲಿ
Triple Murder: ಬೆಂಗಳೂರಿನಲ್ಲಿ ಲಿವ್-ಇನ್ ಪ್ರೇಮಿಗೋಸ್ಕರ ತನ್ನ ಹೆತ್ತವರು ಮತ್ತು ಸಹೋದರಿಯನ್ನೇ ಭೀಕರವಾಗಿ ಕೊಂದ ಪ್ರಕರಣ ಸದ್ಯ ರಾಜ್ಯದ ಜನತೆಯನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ. ಆರೋಪಿ ಶ್ವೇತಾ ಸದ್ಯ ಪೊಲೀಸರ ಬಂಧನದಲ್ಲಿದ್ದು, ತನಿಖೆಯಲ್ಲಿ ಆಕೆ ಯಾವ ಕಾರಣಕ್ಕೆ ಚಾಕುವಿನಲ್ಲಿ ಇರಿದು ಬರ್ಬರವಾಗಿ ಕೊಂದಿದ್ದು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಸೋಮವಾರ (ಜೂ.22) ಪ್ರಿಯಕರನ ಜೊತೆಗೂಡಿ ಕೆಆರ್ ಪುರದ ನಿವಾಸದಲ್ಲಿ ತಂದೆ-ತಾಯಿ ಮತ್ತು ತಂಗಿಯನ್ನು ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದಿರುವ ಶ್ವೇತಾ, ಘಟನೆ ಬೆನ್ನಲ್ಲೇ ಸ್ಥಳದಿಂದ ಪರಾರಿಯಾಗಿದ್ದಳು. ಕೊಲೆಗೈದ ತಕ್ಷಣ ಪ್ರೇಮಿಯ ಜೊತೆ ಬೈಕ್ನಲ್ಲಿ ತಮಿಳುನಾಡಿಗೆ ತೆರಳಿದ ಆಕೆ, ಗಾಡಿ ಮಧ್ಯೆದಲ್ಲೇ ಕೆಟ್ಟು ಹೋದ ಕಾರಣ, ಬಸ್ನಲ್ಲಿ ಒಂದಷ್ಟು ದೂರ ಪ್ರಯಾಣಿಸಿದಳು. ಅಷ್ಟರೊಳಗೆ ಆರೋಪಿಯ ಸುಳಿವನ್ನು ಪತ್ತೆಹಚ್ಚಿದ ಖಾಕಿ ಪಡೆ, ಬುಧವಾರ (ಜೂ.24) ಬೆಳಗ್ಗೆ ಪುದುಚೇರಿ ರೈಲ್ವೆ ನಿಲ್ದಾಣದ ಬಳಿಯಿರುವ ಬೀಚ್ ರಸ್ತೆಯಲ್ಲಿ ಆಕೆಯನ್ನು ವಶಕ್ಕೆ ಪಡೆಯಿತು. ಈಗ ಪೊಲೀಸರು ಆಕೆಯನ್ನು ತನಿಖೆಗೆ ಒಳಪಡಿಸಿ, ಕೊಲೆಯ ಹಿಂದಿರುವ ಸತ್ಯವನ್ನು ಕಕ್ಕಿಸಿದ್ದಾರೆ.
ನೆಮ್ಮದಿಯನ್ನೇ ಕಸಿದುಕೊಂಡ್ರು...
ಪೊಲೀಸರ ತನಿಖೆಯಲ್ಲಿ ಬಾಯ್ಬಿಟ್ಟ ಶ್ವೇತಾ, “ನನ್ನ ಮನೆಯಲ್ಲಿ ನನಗೆ ಯಾವುದಕ್ಕೂ ಸ್ವಾತಂತ್ರ ಇರಲಿಲ್ಲ. ಸದಾ ಚುಚ್ಚಿ ಮಾತನಾಡುತ್ತಿದ್ದರು ಮತ್ತು ಮಾನಸಿಕವಾಗಿ ನರಕಯಾತನೆ ಕೊಡುತ್ತಿದ್ರು. ನನ್ನ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿದ್ರು. ಹಿಂಸೆ ತಾಳಲಾರದೆ ಅವರನ್ನೆಲ್ಲ ಕೊಂದುಬಿಟ್ಟೆ" ಎಂದು ಹೇಳಿದ್ದಾಳೆ. ಲಿವ್-ಇನ್ ಪ್ರೀತಿಗಾಗಿ ತನ್ನ ರಕ್ತ ಸಂಬಂಧವನ್ನೇ ಕಡಿದು ಹಾಕಿದ ಶ್ವೇತಾಳ ಪಾಪದ ಕೃತ್ಯ ಸದ್ಯ ರಾಜ್ಯ ಮತ್ತು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಡೈರಿಯಲ್ಲಿ ನೋವಿನ ಬರಹ
ಈ ಮಧ್ಯೆ, ಆರೋಪಿ ಶ್ವೇತಾಳ ವೈಯಕ್ತಿಕ ಡೈರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾನು ನೋವಿನಲ್ಲಿರುವೆ, ಒಂಟಿಯಾಗಿರುವೆ ಮತ್ತು ಖಿನ್ನತೆಯಿಂದ ಬಳಲುತ್ತಿರುವೆ ಎಂದು ಬರೆದಿರುವುದು ಗೊತ್ತಾಗಿದೆ. ಮೇಲ್ನೋಟಕ್ಕೆ, ಆಕೆ ತೀವ್ರ ಮಾನಸಿಕ ಮತ್ತು ಕುಟುಂಬದೊಂದಿಗಿನ ಭಿನ್ನಾಭಿಪ್ರಾಯಗಳಿಂದ ಕೊಲೆ ಮಾಡಿರುವುದು ಕಂಡುಬಂದಿದೆ. ಪ್ರಸ್ತುತ, ಈ ಕೊಲೆಯಲ್ಲಿ ಶ್ವೇತಾ ಜೊತೆ ಭಾಗಿಯಾದ ಪ್ರೇಮಿ ಕೆನ್ನೆತ್ ಸದ್ಯ ಖಾಕಿ ಕಣ್ಣೀನಿಂದ ತಪ್ಪಿಸಿಕೊಂಡಿದ್ದು, ಆತನ ಸೆರೆಗೆ ವಿಶೇಷ ತಂಡಗಳು ಬಲೆ ಬೀಸಿವೆ,(ಏಜೆನ್ಸೀಸ್).