Bengaluru traffic police issue advisory banning flyover traffic
- ಇಂದು ಆರ್ಸಿಬಿ ಗುಜರಾತ್ ಟೈಟನ್ಸ್ ವಿರುದ್ಧ ಫೈನಲ್ ಪಂದ್ಯಾವಳಿ
- ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ಪೊಲೀಸರಿಂದ ಕಟ್ಟುನಿಟ್ಟಿನ ಕ್ರಮ
- ಪಂದ್ಯದ ನಂತರ ಸಂಭ್ರಮಾಚರಣೆಗೆ ಬ್ರೇಕ್, ಫ್ಲೈ ಓವರ್ ಮೇಲೆ ಸಂಚಾರ ನಿರ್ಬಂಧ
ಬೆಂಗಳೂರು: ಇಂದು ಆರ್ಸಿಬಿ ಹಾಗೂ ಗುಜರಾತ್ ಟೈಟನ್ಸ್ ವಿರುದ್ಧ ಕೊನೆಯ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಅಹ್ಮದಾಬಾದ್ ನಗರದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳು ಟ್ರೋಫಿಗಾಗಿ ಸೆಣಸಾಡಲಿವೆ. ಹೀಗಾಗಿ, ಕಳೆದ ವರ್ಷ ಆರ್ಸಿಬಿ ಭರ್ಜರಿಯಾಗಿ ಜಯಭೇರಿ ಸಾಧಿಸಿದ ನಂತರ ನಡೆದಿದ್ದ ಅಹಿತಕರ ಘಟನೆಗಳನ್ನು ಗಮನದಲ್ಲಿಟ್ಟುಕೊಂಡಿರುವ ಬೆಂಗಳೂರು ಪೊಲೀಸರು ನಾನಾ ರೀತಿಯಲ್ಲಿ ಕಟ್ಟುನಿಟ್ಟುನ ಕ್ರಮವನ್ನು ತೆಗೆದುಕೊಂಡಿದ್ದಾರೆ. ಜೊತೆಗೆ ಸವಾರರ ಹಿತ ದೃಷ್ಟಿಯಿಂದಾಗಿ ಫ್ಲೈಓವರ್ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿ ಸಂಚಾರ ಪೊಲೀಸರು ಹೊಸ ಆದೇಶ ಹೊರಡಿಸಿದೆ.
ನಾಳೆಯವರೆಗೂ ಸಂಚಾರ ನಿರ್ಬಂಧ
ಆರ್ಸಿಬಿ ಪಂದ್ಯದ ವೇಳೆ ಮತ್ತು ನಂತರ ಟ್ರಾಫಿಕ್ ಜಾಮ್ ಸೇರಿದಂತೆ ಯಾವುದೇ ಅವಘಡ ಸಂಭವಿಸದಂತೆ ಕಾಪಾಡಿಕೊಳ್ಳಲು ಬೆಂಗಳೂರು ಸಂಚಾರ ಪೊಲೀಸರು ಎಲಿವೇಟೆಡ್ ಮತ್ತು ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಇಂದು ರಾತ್ರಿಯಿಂದ ಜೂನ್ 1ರ ಬೆಳಿಗ್ಗೆ ಐದರವರೆಗೆ ಸಂಚಾರ ನಿರ್ಬಂಧಿಸಿ ಪ್ರಕಟಣೆ ಹೊರಡಿಸಿದೆ.
ಸಂಭ್ರಮಾಚರಣೆಗೆ ಬ್ರೇಕ್
ಈಗಾಗಲೇ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ಹಿತ ದೃಷ್ಟಿಯಿಂದ ಆರ್ಸಿಬಿ ಪಂದ್ಯದ ವೇಳೆ ಮತ್ತು ನಂತರ ಯಾವುದೇ ಸಂಭ್ರಮಾಚರಣೆಯನ್ನು ಆಚರಿಸುವುದಾಗಲಿ, ಪಟಾಕಿ ಸಿಡಿಸುವುದು, ಬೆಟ್ಟಿಂಗ್ ಆಡುವುದನ್ನು ನಿಷೇಧಿಸಿದೆ. ಅಷ್ಟೇ ಅಲ್ಲದೆ ಪ್ರಚೋದನಕಾರಿ ಪೋಸ್ಟ್ ಹಂಚಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಆ ಬೆನ್ನಲ್ಲೇ ಬೆಂಗಳೂರು ಸಂಚಾರ ಪೊಲೀಸರು ಸಹ ಪ್ರಕಟಣೆಯನ್ನು ಹೊರಡಿಸಿದ್ದಾರೆ. 19ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯದ ಸಮಯದಲ್ಲಿ ಹಾಗೂ ಪಂದ್ಯದ ನಂತರ ಬೆಂಗಳೂರು ನಗರದೆಲ್ಲೆಡೆ ವಿಜಯೋತ್ಸವ ಆಚರಣೆ ಮಾಡುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ದಕ್ಷಿಣ ವಿಭಾಗ ವ್ಯಾಪ್ತಿಯ ಎಲಿವೇಟೆಡ್ ಪ್ರೈಓವರ್ & ಡಬಲ್ ಡೆಕ್ಕರ್ ಪ್ರೈಒವರ್‌ಗಳಲ್ಲಿ ಇಂದು(ಮೇ.31) ರಾತ್ರಿ 11ಗಂಟೆಯಿಂದ ಜೂ.1ರ ಬೆಳಿಗ್ಗೆ 5ಗಂಟೆಯವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲೆಲ್ಲಿ ಸಂಚಾರ ನಿರ್ಬಂಧ
- ಎಲಿವೇಟೆಡ್ ಫ್ಲೈ ಓವರ್: ರೂಪೇನ ಅಗ್ರಹಾರ ದಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಯಿಂದ ರೂಪೇನ ಅಗ್ರಹಾರದವರೆಗೆ ಎರಡೂ ಕಡೆ ನಿರ್ಬಂಧವಿರಲಿದೆ
- ಡಬಲ್ ಡೆಕ್ಕರ್ ಪ್ರೈಓವರ್: ಇನ್ನೂ ರಾಗಿಗುಡ್ಡ ಕಡೆಯಿಂದ 5ನೇ ಮೈನ್ ಹೊರವರ್ತುಲ ರಸ್ತೆ ಹಾಗೂ ಹೊಸೂರು ರಸ್ತೆ ಕಡೆಗೆ ತೆರಳುವ ಮತ್ತು 5ನೇ ಮೈನ್ ಹೊರವರ್ತುಲ ರಸ್ತೆಯಿಂದ ರಾಗಿಗುಡ್ಡ ಕಡೆಗೆ ಹೋಗುವ ಎರಡೂ ಕಡೆ ಮಾರ್ಗಗಲ್ಲಿ ಸಂಚರಿಸದಂತೆ ಆದೇಶ ಹೊರಡಿಸಿದೆ.
- ಇನ್ನು ಪ್ರೈ ಓವರ್ ಕೆಳಗಿನ ಮುಖ್ಯರಸ್ತೆಗಳು ಸಾರ್ವಜನಿಕ ವಾಹನಗಳ ಮುಕ್ತವಾಗಿದ್ದು, ಉಪಯೋಗಿಸಿಕೊಳ್ಳಲು ಬೆಂಗಳೂರು ನಗರ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
- ಸಿಲ್ಕ್ ಬೋರ್ಡ್ ಕಡೆಯಿಂದ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಕಡೆಗೆ ಡಬಲ್ ಡೆಕ್ಕರ್ ಪ್ರೈಓವರ್ ಡೌನ್ ರ್ಯಾಂಪ್ ಅನ್ನು ನಿರ್ಬಂಧಿಸಿದೆ.
- ಸಂಚಾರಕ್ಕೆ ಪರ್ಯಾಯ ಮಾರ್ಗಗಳು
- ಸಾರ್ವಜನಿಕರು ಕೆಳಭಾಗದ ಮಾರೇನಹಳ್ಳಿ ಮುಖ್ಯ ರಸ್ತೆಯ ಮೂಲಕ ರಾಗಿಗುಡ್ಡ ಮೆಟ್ರೋ ನಿಲ್ದಾಣ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ ಸಂಚರಿಸಬಹುದಾಗಿರುತ್ತದೆ.
- *ಸಾರ್ವಜನಿಕರು ಕೆಳಭಾಗದ ಮಾರೇನಹಳ್ಳಿ ಮುಖ್ಯ ರಸ್ತೆಯ ಮೂಲಕ ಸಿಲ್ಕ್ ಬೋರ್ಡ್ ಕಡೆಯಿಂದ ರಾಗಿಗುಡ್ಡ ಮೆಟ್ರೋ ನಿಲ್ದಾಣದ ಕಡೆಗೆ ಸಂಚರಿಸಬಹುದಾಗಿರುತ್ತದೆ, (ಏಜೆನ್ಸೀಸ್).