Bengaluru Techie Bathing Video Case 
ರಾಜ್ಯ

ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಚಿತ್ರೀಕರಿಸಿದ ಕಾಮುಕ; ಮಹದೇವಪುರ ಪೊಲೀಸರಿಂದ ಆರೋಪಿ ಅರೆಸ್ಟ್

ಪ್ರಮುಖ ಮುಖ್ಯಾಂಶಗಳು

  • 23 ವರ್ಷದ ಯುವತಿ ಸ್ನಾನ ಮಾಡುತ್ತಿದ್ದ ವಿಡಿಯೋ ಚಿತ್ರೀಕರಿಸಿದ ಕಾಮುಕ
  • ತಮಿಳುನಾಡು ಮೂಲದ ಕಾರ್ತಿಕ್ ಎಂಬಾತನನ್ನು ಬಂಧಿಸಿದ ಪೊಲೀಸರು
  • ಸ್ನಾನ ಮಾಡುವಾಗ ಕಿಟಕಿಯ ಮೂಲಕ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಣ.
ಬೆಂಗಳೂರು: ಮಹದೇವಪುರ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಕಾಮುಕನೊಬ್ಬ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸುತ್ತಿದ್ದ ಆರೋಪದ ಮೇಲೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮಹದೇವಪುರದ ಗರುಡಾಚಾರ್ ಪಾಳ್ಯದ ನಿವಾಸಿಯಾದ 23 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಆದ ಯುವತಿ ಏಪ್ರಿಲ್ 29ರ ರಾತ್ರಿ ಸುಮಾರು 9:30 ರಿಂದ 9:40ರ ನಡುವೆ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಸದ್ಯ ಯುವತಿಯ ದೂರಿನ ಆಧಾರದ ಮೇಲೆ ಆರೋಪಿ ಕಾರ್ತಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ನಾನ ಮಾಡುತ್ತಿದ್ದಾಗ ವಿಡಿಯೋ ಚಿತ್ರೀಕರಣ

ಸಂತ್ರಸ್ತ ಯುವತಿ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದಾಗ, ಕಿಟಕಿಯ ಮೂಲಕ ಕಾಮುಕ ಮೊಬೈಲ್ ಫೋನ್ ಹಿಡಿದು ವಿಡಿಯೋ ಮಾಡುತ್ತಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಎಚ್ಚೆತ್ತ ಯುವತಿ ಜೋರಾಗಿ ಕಿರುಚಿಕೊಂಡಿದ್ದಾರೆ. ಯುವತಿಯ ಕಿರುಚಾಟ ಕೇಳುತ್ತಿದ್ದಂತೆ ಆರೋಪಿಯು ಅಲ್ಲಿಂದ ಮೊಬೈಲ್ ಫೋನ್ ಸಮೇತ ಪರಾರಿಯಾಗಿದ್ದಾನೆ.
ದುರ್ಘಟನೆ ನಂತರ ಯುವತಿ ತೀವ್ರ ಅಘಾತಕ್ಕೊಳಗಾಗಿ ಮಹದೇವಪುರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಬಹುದು ಅಥವಾ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿ ದೂರಿನಲ್ಲಿ ಉಲ್ಲೇಖಿಸಿದ್ದರು.

ಪೊಲೀಸರಿಂದ ವಶಕ್ಕೆ

ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಕೈಗೊಂಡು, ನೆರೆಮನೆಯಲ್ಲೇ ವಾಸವಿದ್ದ ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡು ಮೂಲದ ಈತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಇವನ ಮೊಬೈಲ್ ಪರಿಶೀಲಿಸಿದಾಗ ಸಂತ್ರಸ್ತೆಯ ವಿಡಿಯೋ ಪತ್ತೆಯಾಗಿದೆ.
ಆರೋಪಿ ಕಾರ್ತಿಕ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 77 ಮತ್ತು ಸೆಕ್ಷನ್ 79 (ಮಹಿಳೆಯ ಘನತೆಗೆ ಧಕ್ಕೆ ತರುವ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, (ಏಜೆನ್ಸೀಸ್​).