ಮದುವೆಯಾದ್ರೂ ನೀವಿಬ್ಬರು ಒಟ್ಟಿಗೆ ಇರುವುದಿಲ್ಲ... ಭವಿಷ್ಯವಾಣಿಗೆ ಹೆದರಿ ಟೆಕ್ಕಿ ಸಾವಿಗೆ ಶರಣು! Bengaluru Techie  
ರಾಜ್ಯ

ಮದುವೆಯಾದ್ರೂ ನೀವಿಬ್ಬರು ಒಟ್ಟಿಗೆ ಇರುವುದಿಲ್ಲ... ಭವಿಷ್ಯವಾಣಿಗೆ ಹೆದರಿ ಟೆಕ್ಕಿ ಸಾವಿಗೆ ಶರಣು! Bengaluru Techie

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷಿ ಹೇಳಿದ ಭವಿಷ್ಯವಾಣಿಗೆ ಹೆದರಿ ಸಾವಿಗೆ ಶರಣಾದ ಟೆಕ್ಕಿ
  • ಬೆಂಗಳೂರಿನ ಎಂಇಐ ಲೇಔಟ್​ನಲ್ಲಿ ನಡೆದ ಆಘಾತಕಾರಿ ಘಟನೆ
  • ಪ್ರೇಮ ವಿವಾಹಕ್ಕೆ ಕುಟುಂಬ ಒಪ್ಪಿದರೂ ಸಾವಿಗೆ ಕೊರಳೊಡ್ಡಿದ ಮಹಿಳೆ
ಬೆಂಗಳೂರು: ನೀವು ಮದುವೆಯಾದರೂ ಒಟ್ಟಿಗೆ ಇರುವುದಿಲ್ಲ, ಡಿವೋರ್ಸ್​ ಆಗುತ್ತದೆ ಎಂದು ಜ್ಯೋತಿಷಿ ಹೇಳಿದ ಭವಿಷ್ಯವಾಣಿಗೆ ಹೆದರಿ ಟೆಕ್ಕಿಯೊಬ್ಬರು ( Bengaluru Techie ) ಸಾವಿಗೆ ಶರಣಾಗಿರುವ ಆಘಾತಕಾರಿ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮೃತಳನ್ನು ವಿದ್ಯಾಜ್ಯೋತಿ (27) ಎಂದು ಗುರುತಿಸಲಾಗಿದೆ. ಈ ಘಟನೆ ಕಳೆದ ಶುಕ್ರವಾರ (ಫೆ.27) ನಗರದ ಎಂಇಐ ಲೇಔಟ್​ನಲ್ಲಿ ನಡೆದಿದೆ. 
ಅಂದಹಾಗೆ, ವಿದ್ಯಾಜ್ಯೋತಿ ಬೇರೆ ಜಾತಿಯ ವ್ಯಕ್ತಿಯನ್ನು ಪ್ರೀತಿ ಮಾಡುತ್ತಿದ್ದಳು. ಆಕೆಯ ಇಚ್ಛೆಯಂತೆಯೇ ಎರಡೂ ಕುಟುಂಬಗಳು ಇಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದವು. ಆದರೆ, ಜ್ಯೋತಿಷ್ಯವನ್ನು ತುಂಬಾ ನಂಬುತ್ತಿದ್ದ ವಿದ್ಯಾಜ್ಯೋತಿ, ಭವಿಷ್ಯವಾಣಿಗೆ ಭಯಬಿದ್ದು, ಸಾವಿಗೆ ಕೊರಳೊಡ್ಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ವಿಚಾರಣೆಯನ್ನು ಉಲ್ಲೇಖಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು  ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಕಾರ, ವಿದ್ಯಾಜ್ಯೋತಿಯ ಪಾಲಕರು ಇತ್ತೀಚೆಗೆ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಮದುವೆಯಾದ ಎರಡು ವರ್ಷಗಳ ನಂತರ ದಂಪತಿ ನಡುವೆ ತಪ್ಪು ಅಭಿಪ್ರಾಯ ಮೂಡಬಹುದು. ಇದು ಅವರಿಬ್ಬರ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ಭವಿಷ್ಯ ನುಡಿದಿದ್ದರು ಎಂದು ಹೇಳಿದ್ದಾರೆ.
ಇದಿಷ್ಟೇ ಅಲ್ಲದೆ, ಬೇರೆಯಾಗುವುದನ್ನು ತಪ್ಪಿಸಲು, ಜ್ಯೋತಿಷಿ ಒಂಬತ್ತು ದಿನಗಳ ವ್ರತವನ್ನು ಮಾಡಲು ಸಲಹೆ ನೀಡಿದ್ದರು. ಈ ವ್ರತವನ್ನು ಅನುಸರಿಸಿದ ವಿದ್ಯಾಜ್ಯೋತಿ, ಒಂಬತ್ತನೇ ಅಥವಾ ಕೊನೆಯ ದಿನದಂದು ತಮ್ಮ ಪಾಲಕರು ಇಲ್ಲದ ಸಮಯದಲ್ಲಿ ತನ್ನ ಕೋಣೆಗೆ ಹೋಗಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.
ಸಂಜೆ ವೇಳೆ ಪದೇಪದೆ ಬಾಗಿಲು ತಟ್ಟಿದರೂ ಕೋಣೆಯ ಒಳಗಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಆಕೆಯ ತಂದೆ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಮಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಬಾಗಲಗುಂಟೆ ಪೊಲೀಸರು ಅಸ್ವಾಭಾವಿಕ ಮರಣ ವರದಿ (ಯುಡಿಆರ್) ಪ್ರಕರಣ ದಾಖಲಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ, (ಏಜೆನ್ಸೀಸ್​).