ರಾಜ್ಯ

ಪತ್ನಿ ಕಾಟಕ್ಕೆ ಬೇಸತ್ತು ಮದುವೆಯಾದ 10 ದಿನಕ್ಕೆ ಪತಿ ಪರಾರಿ; ಗಂಡ ಬೇಕೆಂದು ಮೊಬೈಲ್ ಟವರ್ ಏರಿ ಹೆಂಡ್ತಿ ಹೈಡ್ರಾಮಾ..Nelamangala

  • ಪತ್ನಿ ಕಾಟಕ್ಕೆ ಬೇಸತ್ತು ಮದುವೆಯಾದ 10 ದಿನಕ್ಕೆ ಪರಾರಿಯಾದ ಗಂಡ .

  • ಪತಿಯನ್ನು ಹುಡುಕಿಕೊಡಿ ಎಂದು ಮೊಬೈಲ್​ ಟವರ್ ಏರಿದ ಯುವತಿ.

  • ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ನಡೆದ ಘಟನೆ.

ನೆಲಮಂಗಲ: ಪತ್ನಿ ಕಾಟ ತಾಳಲಾರದೆ ಮದುವೆಯಾದ ಹತ್ತೇ ದಿನಕ್ಕೆ ಪತಿ ಪರಾರಿಯಾಗಿದ್ದು, ನಾಪತ್ತೆಯಾದ ಪತಿಯನ್ನು ಹುಡುಕಿ ಕೊಡಿ ಎಂದು ನವವಧುವೊಬ್ಬರು ಮೊಬೈಲ್ ಟವರ್​ ಏರಿ ಹೈಡ್ರಾಮಾ ಸೃಷ್ಟಿಸಿದ ಘಟನೆ ನೆಲಮಂಗಲ ಸಮೀಪದ ಮಾಕಳಿ ಗ್ರಾಮದಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಪಾವಗಡ ಮೂಲದ ನಿವಾಸಿಯಾಗಿರುವ ಸಿಂಧು (20) ಎಂಬಾಕೆಯೇ ಈ ದುಸ್ಸಾಹಸಕ್ಕೆ ಕೈ ಹಾಕಿದ ಮಹಿಳೆ ಎಂದು ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ ಏನು?

ಸಿಂಧು ಮತ್ತು ಗಣೇಶ್ ಅವರ ಮದುವೆ ಅ.6ರಂದು ಮದುವೆ ಮಾಡಿಕೊಂಡಿದ್ದರು. ಮದುವೆಯಾದ 10ದಿನಕ್ಕೆ ದಾಂಪತ್ಯ ಬದುಕಲ್ಲಿ ಬಿರುಕು ಮೂಡಿದೆ. ಆಕೆಯ ಕಾಟ ತಾಳಲಾರದೆ ಗಣೇಶ್ ಯಾರಿಗೂ ತಿಳಿಸದೆ ಮನೆಯಿಂದ ನಾಪತ್ತೆಯಾಗಿದ್ದರು. ಇದರಿಂದ ಕಂಗಾಲಾದ ಸಿಂಧು, ಮದನಾಯಕನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ತಮ್ಮ ಪತಿಯನ್ನು ಹುಡುಕಿಕೊಡುವಂತೆ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಮುಂದುವರೆಸಿದ್ದರೂ ಪತಿ ಪತ್ತೆಯಾಗದ ಕಾರಣ ತೀವ್ರ ಮಾನಸಿಕವಾಗಿ ನೊಂದುಕೊಂಡಿದ್ದಳು ಎನ್ನಲಾಗಿದೆ.

ಮೊದಲಿಗೆ ಗಂಡ ಸಿಕ್ಕಿಲ್ಲ ಎಂದು ಸಾರ್ವಜನಿಕ ರಸ್ತೆಯ ಮಧ್ಯೆ ಕುಳಿತು ಪತಿಯನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಸಂಚಾರಕ್ಕೆ ಅಡಚಣೆ ಉಂಟುಮಾಡಿದ್ದರು. ಆನಂತರ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮನವೊಲಿಸಿ ವಾಪಸ್​ ಕಳುಹಿಸಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಿಂದ ಶಿಕ್ಷಕರಿಗೆ ಅನ್ಯಾಯ

ಟವರ್​ ಏರಿ ಹೈಡ್ರಾಮಾ ಸೃಷ್ಟಿ

ಆದರೆ, ಸೋಮವಾರ ಬೆಳಗ್ಗೆ ಮಾಕಳಿ ಗ್ರಾಮದ ಮೊಬೈಲ್ ಟವರ್ ಏರಿದ ಅವರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಮದನಾಯಕನಹಳ್ಳಿ ಪೊಲೀಸರು ಹರಸಾಹಸಪಟ್ಟು ಅವರನ್ನು ಕೆಳಗೆಳಿಸಿ, ಪಾವಗಡದಲ್ಲಿದ್ದ ತಾಯಿ ಮನೆಗೆ ಕಳುಹಿಸಿದ್ದರು. ಆದರೆ ಪಾವಗಡದಿಂದ ವಾಪಸ್ ಬಂದ ಸಿಂಧು, ಮಂಗಳವಾರ(ಅ.20) ಬೆಳಿಗ್ಗೆ ಮತ್ತೆ ಅದೇ ಮೊಬೈಲ್ ಟವರ್ ಏರಿ ಕುಳಿತು ಪೊಲೀಸರಿಗೆ ಭಾರಿ ತಲೆನೋವಾಗಿ ಪರಿಣಮಿಸಿದ್ದಾರೆ.

ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿ, ಸಿಂಧು ಅವರೊಂದಿಗೆ ಮಾತನಾಡಿ ಮನವೊಲಿಸುವಲ್ಲಿ ಯಶಸ್ವಿಯಾದರು. ಯಾವುದೇ ಅಪಾಯವಿಲ್ಲದೆ ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ನಂತರ ಹೆಚ್ಚಿನ ಮಾನಸಿಕ ಬೆಂಬಲ ಹಾಗೂ ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಸಿಂಧು ಅವರನ್ನು ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಹಾಗೂ ಸಮಾಲೋಚನೆಗೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).