Kayaloram Restaurant Bommenahalli
- ಮಟನ್ ಊಟ ಎಂದು ಬೀಫ್ ಆಹಾರ ಗ್ರಾಹಕರಿಗೆ ನೀಡುತ್ತಿದ್ದ ರೆಸ್ಟೋರೆಂಟ್ ಮಾಲೀಕರು
- 18 ತಿಂಗಳಿನಿಂದ ರೆಸ್ಟೋರೆಂಟ್ ನಡೆಸುತ್ತಿದ್ದ ಇಬ್ಬರು ಮಾಲೀಕರ ಬಂಧನ, ಮತ್ತೊಬ್ಬ ನಾಪತ್ತೆ
- ಮಟನ್ ಖಾದ್ಯ ಎಂದು ಗ್ರಾಹಕರಿಗೆ ಮೋಸ, ಕೇಸ್ ದಾಖಲು
ಬೆಂಗಳೂರು: ಮಟನ್ ಮಾರಾಟ ಮಾಡುವ ನೆಪದಲ್ಲಿ ಗ್ರಾಹಕರಿಗೆ ದನದ ಮಾಂಸದ ಬಾಡೂಟ ಉಣಿಸುತ್ತಿದ್ದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ರೆಸ್ಟೋರೆಂಟ್ ಮಾಲೀಕರಿಬ್ಬರನ್ನು ಗುಪ್ತಚರ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಜಿಜೂ ಅಲೆಕ್ಸಾಂಡರ್ (45) ಮತ್ತು ಶೀಬು (44) ಬಂಧಿತರು. ಮತ್ತೊಬ್ಬ ಆರೋಪಿ ಅಭಿಲಾಷ್ ಎಂಬಾತ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ಭೈರತಿಯಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದ ಆರೋಪಿಗಳು ಬೊಮ್ಮನಹಳ್ಳಿ ಬಳಿ ಇರುವ ಕಾಯಲೋರಂ ರೆಸ್ಟೋರೆಂಟ್ನ ಮಾಲೀಕರು ಎನ್ನಲಾಗಿದೆ,
ದನದ ಮಾಂಸ ಎಂದು ತಿಳಿದಿದ್ದು ಹೇಗೆ?
ಇತ್ತೀಚೆಗೆ ಯುವಕರ ತಂಡವೊಂದು ರೆಸ್ಟೋರೆಂಟ್‌ಗೆ ಊಟ ಮಾಡಲು ಹೋಗಿತ್ತು. ಅವರು ಆರ್ಡರ್ ಮಾಡಿದ್ದ ಮಟನ್ ಊಟದ ಬದಲಿಗೆ, ಹೋಟೆಲ್ ಸಿಬ್ಬಂದಿ ದನದ ಮಾಂಸ ನೀಡಿದ್ದರು. ಇದನ್ನು ಸೇವಿಸಿದ ಯುವಕರಿಗೆ ಅನುಮಾನ ಬಂದು ಹೊಟೇಲ್ ಮಾಲೀಕರನ್ನು ಪ್ರಶ್ನಿಸಿದ್ದಲ್ಲದೆ ಪೊಲೀಸರಿಗೂ ಮಾಹಿತಿ ನೀಡಿದ್ದರು.
ಮಟನ್ ಎಂದು ಬೀಫ್ ಉಣಬಡಿಸುತ್ತಿದ್ದ ಮಾಲೀಕರು
ಆರೋಪಿಗಳು ಒಂದೂವರೆ ವರ್ಷಗಳಿಂದ ಅಂದರೆ 18 ತಿಂಗಳಿನಿಂದ ರೆಸ್ಟೋರೆಂಟ್ನಲ್ಲಿ ಮಟನ್ ಎಂದು ಹೇಳಿ ಬೀಫ್ ಆಹಾರ ನೀಡಲಾಗುತ್ತಿದೆ ಆ ಮೂಲಕ ಮೋಸ ಮಾಡಲಾಗುತ್ತಿದೆ ಎಂದು ನೂರಾರು ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದರು. ರೆಸ್ಟೋರೆಂಟ್ ಮೆನುವಿನಲ್ಲಿಯೂ ಬೀಫ್ ಬಗ್ಗೆ ಉಲ್ಲೇಖಿಸಿರಲಿಲ್ಲ. ಈ ದೂರುಗಳ ಆಧಾರದಮೇಲೆ ಗ್ರಾಹಕರ ಸೋಗಿನಲ್ಲಿ ರೆಸ್ಟೋರೆಂಟ್‌ಗೆ ಭೇಟಿ ಕೊಟ್ಟ ಪೊಲೀಸರು ಫುಡ್ ಆರ್ಡರ್ ಮಾಡಿದರು, ಮಟನ್ ಖಾದ್ಯಗಳನ್ನು ಪರಿಶೀಲಿಸಿದಾಗ ಇದು ಗೋಮಾಂಸ ಎಂದು ತಿಳಿಯಿತು. ಸದ್ಯ ರೆಸ್ಟೋರೆಂಟ್ ಸೀಜ್ ಮಾಡಿದ್ದಾರೆ.
ಆರೋಪಿಗಳ ವಿರುದ್ಧ ರಾಜ್ಯ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ-2020 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಆವಲಹಳ್ಳಿ ಪೋಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಗ್ರಾಹರಿಂದ ಆಕ್ಷೇಪ
ನಾವು ನಂಬಿಕೆಯಿಂದ ಹಣ ಕೊಟ್ಟು ಮಟನ್ ಬಿರಿಯಾನಿ ತಿನ್ನಲು ಬಂದರೆ, ನಮಗೆ ಈ ರೀತಿ ವಂಚನೆ ಮಾಡುತ್ತಿರುವುದು ಅತ್ಯಂತ ದ್ರೋಹದ ಕೆಲಸ. ಇಂತಹ ರೆಸ್ಟೋರೆಂಟ್‌ಗಳ ಲೈಸೆನ್ಸ್ ಅನ್ನು ಶಾಶ್ವತವಾಗಿ ರದ್ದುಗೊಳಿಸಬೇಕು" ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, (ಏಜೆನ್ಸೀಸ್).