108 ವರ್ಷದ ಬಳಿಕ ರಾಜಧಾನಿಯಲ್ಲಿ ಅತ್ಯಂತ ಕಡಿಮೆ ಮಳೆ
ಬೆಂಗಳೂರು: ರಾಜಧಾನಿಯಲ್ಲಿ 108 ವರ್ಷದ ಬಳಿಕ, 2026ರ ಜುಲೈನಲ್ಲಿ ಅತ್ಯಂತ ಕಡಿಮೆ ಮಳೆ ಸುರಿದಿದೆ.
ನಗರದಲ್ಲಿ ವಾಡಿಕೆಯಂತೆ 94 ಮಿಮೀ ಮಳೆಯಾಗಬೇಕಿತ್ತು. ಆದರೆ,16.1 ಮಿಮೀ ಬಿದ್ದಿದ್ದು, ಶೇ.83 ಮಳೆ ಕೊರತೆ ಉಂಟಾಗಿದೆ. 1918ರ ಜುಲೈನಲ್ಲಿ 18.5 ಮಿಮೀ ಮಳೆಯಾಗಿತ್ತು. 1918ರ ಜುಲೈ ನಂತರ 2026ರ ಜುಲೈನಲ್ಲಿ ಮಳೆ ಪ್ರಮಾಣ ತೀವ್ರವಾಗಿ ಕುಸಿದಿದೆ. ಪೂರ್ವ ಮುಂಗಾರಿನ ಅವಧಿಯಲ್ಲಿ ಉದ್ಯಾನನಗರಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿತ್ತು. ಆದರೆ, ದೀರ್ಘ ಕಾಲದ ಒಣಹವೆಯು ಮುಂಗಾರು ಶಕ್ತಿ ಕುಗ್ಗಿಸಿದ್ದರಿಂದ ನಗರದಲ್ಲಿ ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಕಡಿಮೆ ಸುರಿದಿದೆ.
ಆಗಸ್ಟ್, ಸೆಪ್ಟೆಂಬರ್‌ನಲ್ಲಿ ನಗರದಲ್ಲಿ ಇನ್ನಷ್ಟು ಮಳೆ ಕೊರತೆ ಉಂಟಾಗಲಿದೆ. ಜತೆಗೆ, ವಾಡಿಕೆಗಿಂತ ತಾಪಮಾನ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ. ಮುಂಗಾರು ಆಗಮಿಸಿ 2 ತಿಂಗಳು ಮುಗಿದಿದ್ದರೂ ನಗರದಲ್ಲಿ ಮೋಡಗಳು ಇದ್ದರೂ ಮಳೆ ಸುರಿಯುತ್ತಿಲ್ಲ.
116 ವರ್ಷದ ಬಳಿಕ ಅಧಿಕ ಉಷ್ಣಾಂಶ:
ರಾಜಧಾನಿಯಲ್ಲಿ 116 ವರ್ಷದ ಬಳಿಕ ಗರಿಷ್ಠ ತಾಪಮಾನ ದಾಖಲಾಗಿದೆ. 1914ರ ಜುಲೈನಲ್ಲಿ 33.3 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. 116 ವರ್ಷದ ಬಳಿಕ ಅಂದರೆ 2026ರ ಜು.14ರಂದು 33.6 ಡಿ.ಸೆ. ದಾಖಲಾಗಿದ್ದು, ಹಿಂದಿನ ಎಲ್ಲ ದಾಖಲೆ ಅಳಿಸಿಹಾಕಿದೆ. ‘ಎಲ್‌ನಿನೋ ಪರಿಣಾಮ’ ಮಳೆ ತಗ್ಗಿಸುವಿಕೆ ಮಾತ್ರವಲ್ಲದೆ, ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಹೆಚ್ಚಳ ದಾಖಲಾಗಿದೆ.