ಸಾಂದರ್ಭಿಕ ಚಿತ್ರ 
ರಾಜ್ಯ

ದೇಶದಲ್ಲೇ ಸಂಚಾರ ದಟ್ಟಣೆಯಲ್ಲಿ ಬೆಂಗಳೂರು ಮೊದಲ ಸ್ಥಾನ

ಪ್ರಮುಖ ಮುಖ್ಯಾಂಶಗಳು

  • 10 ಕಿ.ಮೀ.ಸಂಚಾರಕ್ಕೆ 36.9 ನಿಮಿಷ
  • ಹತ್ತನೇ ಸ್ಥಾನದಲ್ಲಿ ದೆಹಲಿ
  • ಎರಡನೇ ಸ್ಥಾನಕ್ಕೆ ಕೋಲ್ಕತ್ತಾ

ರವಿ ನಾಯಕ್

ಬೆಂಗಳೂರು:

ದೇಶದಲ್ಲೇ ಅತಿ ಹೆಚ್ಚು ಟ್ರಾಫಿಕ್ ದಟ್ಟಣೆ ಹೊಂದಿರುವ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಟಾಮ್‌ಟಾಮ್ ಟ್ರಾಫಿಕ್ ಇಂಡೆಕ್ಸೃ್2025 ವರದಿ ಪ್ರಕಾರ, ನಗರದಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ 36 ನಿಮಿಷ 9 ಸೆಕೆಂಡುಗಳು ಬೇಕಾಗುತ್ತಿದ್ದು, ಭಾರತದಲ್ಲೇ ಅತಿ ನಿಧಾನಗತಿಯಲ್ಲಿ ವಾಹನಗಳು ಸಂಚರಿಸುವ ನಗರ ಎಂಬ ದಾಖಲೆ ನಿರ್ಮಿಸಿದೆ.

ನಗರದಲ್ಲಿ ವಾಹನಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವುದು, ರಸ್ತೆ ಮೂಲಸೌಕರ್ಯದ ಮೇಲಿನ ಒತ್ತಡ ಹಾಗೂ ಸಂಚಾರ ದಟ್ಟಣೆ ಹೆಚ್ಚುತ್ತಿರುವುದು ಈ ಪರಿಸ್ಥಿತಿಗೆ ಪ್ರಮುಖ ಕಾರಣಗಳಾಗಿವೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಬೆಂಗಳೂರಿನ ಸಂಚಾರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದಾಗಿ ವರದಿ ತಿಳಿಸಿದೆ.
ಟ್ರಾಫಿಕ್ ದಟ್ಟಣೆಯಲ್ಲಿ ಕೊಲ್ಕತ್ತಾ ಎರಡನೇ ಸ್ಥಾನದಲ್ಲಿದ್ದು, 10 ಕಿ.ಮೀ ಸಂಚಾರಕ್ಕೆ 35.18 ನಿಮಿಷ, ಪುಣೆ ಮೂರನೇ ಸ್ಥಾನದಲ್ಲಿ 33.20 ನಿಮಿಷ ಹಾಗೂ ಹೈದರಾಬಾದ್ ನಾಲ್ಕನೇ ಸ್ಥಾನದಲ್ಲಿ 32.37 ನಿಮಿಷ ಸಮಯ ತೆಗೆದುಕೊಳ್ಳುತ್ತಿದೆ. ದೀರ್ಘಕಾಲ ಸಂಚಾರ ದಟ್ಟಣೆಯಲ್ಲಿ ಮುಂಚೂಣಿಯಲ್ಲಿದ್ದ ದೆಹಲಿ ಈ ಬಾರಿ 10ನೇ ಸ್ಥಾನಕ್ಕೆ ಕುಸಿದಿದೆ.

ಟ್ರಾಫಿಕ್ Index ವರದಿ:

ನೆದರ್ಲ್ಯಾಂಡ್ಸ್ ಮೂಲದ ನ್ಯಾವಿಗೇಷನ್ ತಂತ್ರಜ್ಞಾನ ಸಂಸ್ಥೆ ಟಾಮ್‌ಟಾಮ್ ವಿಶ್ವದ ವಿವಿಧ ನಗರಗಳ ಸಂಚಾರ ಪರಿಸ್ಥಿತಿಯನ್ನು ವಿಶ್ಲೇಷಿಸಿ ಪ್ರತಿ ವರ್ಷ ಟ್ರಾಫಿಕ್ ಇಂಡೆಕ್ಸೃ್ ಪ್ರಕಟಿಸುತ್ತದೆ. 2025ರ ವರದಿಯಲ್ಲಿ ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರವಾಗಿ ಗುರುತಿಸಲ್ಪಟ್ಟಿದ್ದು, ಜಾಗತಿಕ ಮಟ್ಟದಲ್ಲಿಯೂ ಅತ್ಯಂತ ಕೆಟ್ಟ ಹಾಗೂ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರಗಳ ಪೈಕಿ ಮುಂಚೂಣಿಯಲ್ಲಿದೆ.

ದಶಕದಿಂದ ವಾಹನ ಸಂಖ್ಯೆ ಹೆಚ್ಚಳ:

ನಗರದಲ್ಲಿ ಕಳೆದ ಒಂದು ದಶಕದಲ್ಲಿ ವಾಹನಗಳ ಸಂಖ್ಯೆ ಅತಿವೇಗವಾಗಿ ಏರಿಕೆಯಾಗಿದೆ. ಐಟಿ, ಬಿಟಿ, ಉತ್ಪಾದನಾ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾದಂತೆ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ದೇಶದ ಅನೇಕ ಭಾಗಗಳಿಂದ ಜನರು ಬೆಂಗಳೂರಿನತ್ತ ವಲಸೆ ಬರುತ್ತಿದ್ದಾರೆ. ಇದರಿಂದ ಜನಸಂಖ್ಯೆಯ ಜತೆಗೆ ಖಾಸಗಿ ವಾಹನಗಳ ಬಳಕೆ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ನಗರದ ರಸ್ತೆ ಜಾಲ ವಿಸ್ತರಣೆ ವಾಹನಗಳ ಹೆಚ್ಚಳಕ್ಕೆ ಅನುಗುಣವಾಗಿ ಸಂಚಾರ ವ್ಯವಸ್ಥೆ ಮಾರ್ಪಟ್ಟಿಲ್ಲ. ಪ್ರಮುಖ ರಸ್ತೆಗಳು ಇನ್ನೂ ಕಿರಿದಾಗಿದ್ದು, ಜಂಕ್ಷನ್‌ಗಳ ವಿನ್ಯಾಸವೂ ಆಧುನಿಕ ಸಂಚಾರದ ಅಗತ್ಯಗಳಿಗೆ ಹೊಂದಿಕೆಯಾಗಿಲ್ಲ. ರಸ್ತೆ ಕಾಮಗಾರಿಗಳು, ಮೆಟ್ರೊ ನಿರ್ಮಾಣ, ಅಗೆದು ಬಿಟ್ಟ ರಸ್ತೆಗಳು ಮತ್ತು ಮಳೆಗಾಲದಲ್ಲಿ ಉಂಟಾಗುವ ನೀರು ನಿಲ್ಲುವ ರಸ್ತೆ ಗುಂಡಿ ಸಮಸ್ಯೆಗಳು ಸಂಚಾರವನ್ನು ಮತ್ತಷ್ಟು ಸಂಕೀರ್ಣಗೊಳಿಸುತ್ತಿವೆ ಎಂಬ ಆರೋಪವಿದೆ.

ಆರ್ಥಿಕ ನಷ್ಟವೂ ಅಪಾರ:

ಸಂಚಾರ ದಟ್ಟಣೆಯಿಂದ ಪ್ರತಿದಿನ ಲಕ್ಷಾಂತರ ಉದ್ಯೋಗಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲ ಕಳೆಯಬೇಕಾಗುತ್ತಿದೆ. ಇದರಿಂದ ಉತ್ಪಾದಕತೆ ಕುಸಿಯುವುದರ ಜತೆಗೆ ಇಂಧನ ಬಳಕೆ ಹೆಚ್ಚಳ, ಮಾಲಿನ್ಯ ವೃದ್ಧಿ ಮತ್ತು ವಾಹನಗಳ ನಿರ್ವಹಣಾ ವೆಚ್ಚವೂ ಏರಿಕೆಯಾಗುತ್ತಿದೆ. ಸರಕು ಸಾಗಣೆ ವಿಳಂಬವಾಗುವುದರಿಂದ ಕೈಗಾರಿಕೆಗಳು ಹಾಗೂ ವ್ಯಾಪಾರ ವಹಿವಾಟಿನ ಮೇಲೂ ಪರೋಕ್ಷವಾಗಿ ಪರಿಣಾಮ ಬೀಳುತ್ತಿದೆ.

ಮುಂದಿನ ಸವಾಲು?

ಬೆಂಗಳೂರು ಭಾರತದ ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡುವ ನಗರವಾಗಿದೆ. ಆದರೆ ಅದೇ ನಗರದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿರುವುದು ನಗರ ಯೋಜನೆ, ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಸವಾಲಾಗಿ ಪರಿಣಮಿಸಿದೆ. ಮೆಟ್ರೊ ಯೋಜನೆ ವಿಸ್ತರಣೆ, ರಸ್ತೆ ಅಭಿವೃದ್ಧಿ ಹಾಗೂ ಸಮಗ್ರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳನ್ನು ವೇಗವಾಗಿ ಜಾರಿಗೊಳಿಸದಿದ್ದರೆ ಮುಂದಿನ ವರ್ಷಗಳಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ನಗರದ ಅಭಿವೃದ್ಧಿಯ ವೇಗಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆಯೂ ಬೆಳೆಯಬೇಕಾಗಿದೆ.