ಸತ್ತ ಹೆಗ್ಗಣ ಹೆಕ್ಕಿದ ಬೆಂಗಳೂರು ಪೊಲೀಸ್!
- ಮನೆಮುಂದೆ ಸತ್ತ ಹೆಗ್ಗಣ
- ಸತ್ತು ಮೂರು ದಿನವಾದರೂ ವಿಲೇವಾರಿ ಮಾಡದ ಕಾರ್ಪೋರೇಶನ್ ಸಿಬ್ಬಂದಿ
- 112 ಸಹಾಯವಾಣಿಗೆ ಕರೆ ಮಾಡಿದ ಮಹಿಳೆ
- ಸತ್ತ ಹೆಗ್ಗಣ ಹೆಕ್ಕಿದ ಬೆಂಗಳೂರು ಪೊಲೀಸ್!
ಬೆಂಗಳೂರು: ಸಾರ್ವಜನಿಕರಿಗೆ ತುರ್ತು ಸನ್ನಿವೇಶದಲ್ಲಿ ಸಹಾಯಕ್ಕೆ ಬರಲು ಕರ್ನಾಟಕ ರಾಜ್ಯ 112 ಎಂಬ ತುರ್ತು ಸೇವಾ ಸಹಾಯವಾಣಿಯನ್ನು ಪರಿಚಯಿಸಿದೆ.
ಏನಾದರೂ ಅಪಾಯಕಾರಿ ಸನ್ನಿವೇಶ ಎದುರಾದರೆ ಅಥವಾ ಎದುರಾಗುವ ಮುನ್ಸೂಚನೆ ಇದ್ದಾಗ ಈ ಸಂಖ್ಯೆಗೆ ಕರೆ ಮಾಡಿದರೆ ಪೊಲೀಸರು (Bengaluru Police) ತಕ್ಷಣ ಸ್ಥಳಕ್ಕೆ ಧಾವಿಸಿ ದೂರು ನೀಡಿದ ವ್ಯಕ್ತಿ ಜೊತೆ ಸಂವಾದ ನಡೆಸಿ ಎದುರಾದ ತೊಂದರೆಗೆ ಪರಿಹಾಕ ಕಲ್ಪಿಸುತ್ತಾರೆ. ಆದರೆ ಇತ್ತೀಚೆಗೆ ಬೆಂಗಳೂರಿನ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ಪೊಲೀಸರಿಗೆ ಹೆಗ್ಗಣವನ್ನು ವಿಲೇವಾರಿ ಮಾಡಲು ಕರೆದಿರುವ ವೀಲಕ್ಷಣ ಘಟನೆ ನಡೆದಿದೆ.
ಹೆಗ್ಗಣ ಸತ್ತು ಮೂರು ದಿನವಾಗಿದೆ ಸರ್!
ಪೊಲೀಸ್ ಮಾಹಿತಿ ಪ್ರಕಾರ, ಈ ಘಟನೆ ಬೆಂಗಳೂರು ಉತ್ತರದಲ್ಲಿರುವ ರಾಘವೇಂದ್ರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ದೂರುದಾರ ಮಹಿಳೆ ಖಾದ್ರಿ ಚೌಕ್ ಪಕ್ಕದಲ್ಲಿರುವ ಆವಟೆ ಆಸ್ಪತ್ರೆ ಹತ್ತಿರದಲ್ಲಿರುವವರಾಗಿದ್ದಾರೆ. ನಮ್ಮ ಮನೆ ಮುಂದೆ ಹೆಗ್ಗಣ ಸತ್ತು ಮೂರು ದಿನ ಕಳೆದಿದೆ, ಕಾರ್ಪೊರೇಶನ್ ಅವರಿಗೆ ಕರೆ ಮಾಡಿದರೆ ಅವರು ಸರಿಯಾಗಿ ಪ್ರತಿಕ್ರಿಯೆ ನೀಡುತ್ತಿಲ್ಲ. ನಮಗೆ ಇಲ್ಲಿ ವಾಸನೆ ತಡಿಯಲು ಆಗುತ್ತಿಲ್ಲ, ದಯವಿಟ್ಟು ನೀವು ಬಂದು ಆ ಹೆಗ್ಗಣವನ್ನು ವಿಲೇವಾರಿ ಮಾಡಿ ಎಂದು 112 ಗೆ ಮಹಿಳೆಯೊಬ್ಬಳು ದೂರನ್ನು ನೀಡಿದ್ದಾರೆ.
ಹೆಗ್ಗಣ ಹೆಕ್ಕಿದ ಪೊಲೀಸ್!
ನಂತರ ದೂರುದಾರರ ಮನೆಗೆ ತೆರಳಿದ 112 ಪೊಲೀಸ್ ಸಿಬ್ಬಂದಿ ಮನೆಮುಂದೆ ಬಿದ್ದಿದ್ದ ಹೆಗ್ಗಣವನ್ನು ಎತ್ತಿಕೊಂಡು ವಿಲೇವಾರಿ ಮಾಡಿದ್ದಾರೆ. ವಿಲೇವಾರಿ ಮಾಡಿದ ನಂತರ ಪೊಲೀಸ್ ಅಧಿಕಾರಿ ಮಾಡಿದ ಕೆಲಸವನ್ನು ತಮ್ಮ ಮೇಲಾಧಿಕಾರಿಗಳಿಗೆ ತಿಳಿಸಿದ್ದು, ಈಗ ಈ ಸುದ್ದಿ ಎಲ್ಲೆಡೆ ವೈರಲ್ ಆಗುತ್ತಿದೆ.
112 ಪೊಲೀಸ್ ಸೇವೆ ಬಗ್ಗೆ
ಕರ್ನಾಟಕ ರಾಜ್ಯದಲ್ಲಿ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ಜಾರಿಗೆ ತರಲಾಗಿರುವ ಏಕೈಕ ಮತ್ತು ಅತ್ಯಂತ ಪರಿಣಾಮಕಾರಿ ತುರ್ತು ಸಹಾಯವಾಣಿ ಸಂಖ್ಯೆ ಎಂದರೆ 112. ಇದು ಕೇಂದ್ರ ಸರ್ಕಾರದ ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ERSS - Emergency Response Support System) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹಳೆಯ ಪೊಲೀಸ್ ಸಹಾಯವಾಣಿ ಸಂಖ್ಯೆ 100 ರ ಬದಲಿಗೆ ಈಗ ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಬಳಕೆಯಲ್ಲಿದೆ.
ಪೊಲೀಸ್ ನೆರವು ಮಾತ್ರವಲ್ಲದೆ ಅಗ್ನಿಶಾಮಕ ದಳ, ಆರೋಗ್ಯ ಸೇವೆ (ಅಂಬುಲೆನ್ಸ್) ಹಾಗೂ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ತುರ್ತು ಸೇವೆಗಳನ್ನು ಒಂದೇ ಸೂರಿನಡಿ ತರಲು ಈ 112 ಸಂಖ್ಯೆಯನ್ನು ಪರಿಚಯಿಸಲಾಗಿದೆ.
ಸಾರ್ವಜನಿಕರು 112 ಸಂಖ್ಯೆಗೆ ಕರೆ ಮಾಡಿದಾಗ, ಆ ಕರೆಯು ಬೆಂಗಳೂರಿನಲ್ಲಿರುವ ಕೇಂದ್ರ ತುರ್ತು ಪ್ರತಿಕ್ರಿಯೆ ಕೇಂದ್ರಕ್ಕೆ ತಲುಪುತ್ತದೆ. ಅಲ್ಲಿನ ಸಿಬ್ಬಂದಿ ಕರೆಯ ಲೊಕೇಶನ್ ಅನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ಪತ್ತೆಹಚ್ಚಿ, ತಕ್ಷಣವೇ ಘಟನಾ ಸ್ಥಳಕ್ಕೆ ಹತ್ತಿರವಿರುವ ಪೊಲೀಸ್ ತುರ್ತು ಪ್ರತಿಕ್ರಿಯೆ ವಾಹನಕ್ಕೆ ಮಾಹಿತಿ ರವಾನಿಸುತ್ತಾರೆ. ನಗರ ಪ್ರದೇಶಗಳಲ್ಲಿ ಕೇವಲ 15 ರಿಂದ 20 ನಿಮಿಷಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ನೆರವು ನೀಡುತ್ತಾರೆ.
ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ 112 ಸೇವೆ ಹೆಚ್ಚಿನ ಆದ್ಯತೆ ನೀಡಿದೆ. ಅಪಾಯದ ಸಮಯದಲ್ಲಿ ಕರೆ ಮಾಡಲು ಸಾಧ್ಯವಾಗದಿದ್ದರೆ, ಮೊಬೈಲ್ ಫೋನ್‌ನಲ್ಲಿ 5 ಅಥವಾ 9 ಸಂಖ್ಯೆಯನ್ನು ಲಾಂಗ್ ಪ್ರೆಸ್ ಮಾಡುವ ಮೂಲಕ ಅಥವಾ ಪವರ್ ಬಟನ್ ಅನ್ನು ಸತತವಾಗಿ 3 ಬಾರಿ ಒತ್ತುವ ಮೂಲಕ ತುರ್ತು ಸಂದೇಶವನ್ನು ರವಾನಿಸಬಹುದಾಗಿದೆ, (ಏಜನ್ಸೀಸ್).