ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ
ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಗೆ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಹೆಸರು ನಾಮಕಾರಣ ಮಾಡುವುದಕ್ಕೆ ನನ್ನ ಸಹಮತ ಇದೆ ಎಂದು ತುಮಕೂರಿನ ಹಿರೇಮಠದ ತಪೋವನದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಮಹಾವಿದ್ಯಾಪೀಠ- ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಯನಗರದ ಶಿವರಾತ್ರೀಶ್ವರ ಕೇಂದ್ರದಲ್ಲಿ ಆಯೋಜಿಸಿದ್ದ ‘ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ ಅವರು, ಎಕ್ಸ್‌ಪ್ರೆಸ್ ವೇಗೆ ಶ್ರೀಗಳ ಹೆಸರು ಇಡಬೇಕೆಂದು ವೇದಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗಾಗಿ, ಎಕ್ಸ್‌ಪ್ರೆಸ್ ವೇಗೆ ಶ್ರೀಗಳ ಹೆಸರು ಇಡುವುದು ಸೂಕ್ತವಾಗಿದೆ. ಇದನ್ನು ಸರ್ಕಾರ ಮಾಡಬೇಕು. ಶ್ರೀಗಳು ದಂತಕಥೆ ಇದ್ದಂತೆ. ಸುತ್ತೂರು ಮಠ ಜನಸಾಮಾನ್ಯರ ಮಠ. ಯಾರನ್ನೂ ಜಗ್ಗದೆ, ಯಾರಿಗೂ ಜಗ್ಗದೆ ಬೆಳೆದ ಈ ಮಠವು ಅದ್ಭುತ ಪರಂಪರೆ ಹೊಂದಿದೆ. ಬರೀ ವೀರಶೈವ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೆ ವೀರಶೈವ ಮಠಗಳು ಶಿಕ್ಷಣ ನೀಡುತ್ತಿದೆ. ಸ್ವಾಮೀಜಿ ಅಂದರೆ ಬರೀ ಸನ್ಯಾಸಿಯಲ್ಲ. ಅವರಿಗೆ ಜವಾಬ್ದಾರಿ, ಹೊಣೆಗಾರಿಕೆ ಮತ್ತು ಸಮಾಜದ ಉಸ್ತುವಾರಿ ಇರುತ್ತದೆ.ದಕ್ಷಿಣ ಕರ್ನಾಟಕದ ಸಿದ್ದಗಂಗಾ ಮತ್ತು ಜೆಎಸ್‌ಎಸ್ ಮಠಗಳು ಈ ದೇಶದ ಹಿರಿಮೆ, ಗರಿಮೆ ಹೆಚ್ಚಿಸಿವೆ ಎಂದು ಶ್ರೀಗಳು ಬಣ್ಣಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ ಮಾತನಾಡಿ, ಸ್ವಾಮೀಜಿ ಅವರು ಮಾತೃ ಹೃದಯ ಹೊಂದಿದ್ದರು. ಒಬ್ಬ ದಾರ್ಶನಿಕನಿಗೆ ತಂತ್ರಜ್ಞಾನಿಯ ಮಿದುಳು, ವಾಕ್- ಚಾತುರ್ಯ, ಪ್ರಾಮಾಣಿಕತೆ ಮತ್ತು ತಾಯಿ ಹೃದಯ ಇರಬೇಕು. ಅಪರೂಪದ ಜಗದ್ಗುರು ಆಗಿದ್ದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗೆ ಈ ನಾಲ್ಕು ಗುಣಗಳಿದ್ದವು. ಅವರೊಬ್ಬರು ದಾರ್ಶನಿಕ ಸಂತರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ.ಕೆ.ವಿ.ನಾಗರಾಜಮೂರ್ತಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರಮೀಳಾ ಗರಡಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಶ್ರೀಗಳ ಚಿಂತನೆ ಸಮಾಜಕ್ಕೆ ದಾರಿದೀಪ:
ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಚಿಂತನೆ, ಆದರ್ಶಗಳು ಸಮಾಜಕ್ಕೆ ದಾರಿದೀಪವಾಗಿವೆ. ಹಾಗಾಗಿ, ಇವುಗಳನ್ನು ಯುವಜನಾಂಗಕ್ಕೆ ತಲುಪಿಸುವ ಕೆಲಸವಾಗಬೇಕಿದೆ. ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ವಿವೇಕ ಕಳೆದುಹೋಗಿದೆ. ಆ ವಿವೇಕದ ಮಳೆ ಬರಬೇಕಿದೆ. ಅಂದಿನ ಕಾಲದಲ್ಲೇ ಶ್ರೀಗಳು ಅನ್ನ, ಅಕ್ಷರ ಮತ್ತು ಜ್ಞಾನಕ್ಕೆ ಒತ್ತು ಕೊಟ್ಟಿದ್ದರು. ಜೆಎಸ್‌ಎಸ್ ಮಠ ಲಕ್ಷಾಂತರ ಜನರಿಗೆ ಆಶ್ರಯ ನೀಡಿದೆ. ಸ್ವಾಮೀಜಿ ಅವರು ಕಟ್ಟಿದ್ದ ವಿದ್ಯಾಸಂಸ್ಥೆಗಳು ಶಿಕ್ಷಣ ಮಾತ್ರವಲ್ಲದೆ ವಿವೇಕದ ಪಾಠದ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದೆ. ಮಠಗಳು ಮಾಡುತ್ತಿರುವ ಒಳ್ಳೆಯ ಕಾರ್ಯಗಳನ್ನು ಸರ್ಕಾರವೂ ಮಾಡಿಲ್ಲ ಎಂದು ಪ್ರಾಧ್ಯಾಪಕಿ ಡಾ.ಎಂ.ಎಸ್.ಆಶಾದೇವಿ ಹೇಳಿದರು.
ನನಿಗೆ ಸುತ್ತೂರು ಮಠಕ್ಕೆ ಬಹಳ ನಂಟಿದೆ. ಮಠಗಳು ಎಂದರೆ ಬೇರೆ ಕಲ್ಪನೆ ಇರುತ್ತದೆ. ಆದರೆ, ಜೆಎಸ್‌ಎಸ್,ಸಿದ್ದಗಂಗಾ ಮಠಗಳು ಕರ್ನಾಟಕದ ಕಿರೀಟಗಳಿದ್ದಂತೆ. ಅಂದಿನ ಕಾಲದಿಂದಲೂ ಈ ಮಠಗಳು ಜಾತಿ, ಮತ ಮೀರಿ ಅಕ್ಷರ, ಅನ್ನ ಮತ್ತು ಜ್ಞಾನಕ್ಕೆ ವಿಶೇಷ ಆದ್ಯತೆ ನೀಡುತ್ತಾ ಬರುತ್ತಿವೆ.