- ವಿವಿಐಪಿ ಪಾಸ್‌ಗಳ ಹಪಾಹಪಿ
- ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಇಂದು ಐಪಿಎಲ್ ಫೈನಲ್ ಬೆಂಗಳೂರಿನಿಂದ ಕೈತಪ್ಪಿ ಹೋಗಿದೆ
ವಿವಿಐಪಿ ಪಾಸ್‌ಗಳ ಹಪಾಹಪಿ ಹಾಗೂ ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್ ಪಾಲಾಗಿದೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರಾಜ್ಯದ ನಾಯಕರಿಗೆ ’ಅಭಿನಂದನೆಗಳು’! ಕೇವಲ ತಮ್ಮ ವಿವಿಐಪಿ ಪಾಸ್‌ಗಳ ಹಪಾಹಪಿಯಿಂದಾಗಿ, ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿದ್ದೀರಿ, ಎಂದು ಅವರು ಪ್ರಕಟಣೆಯಲ್ಲಿ ವ್ಯಂಗ್ಯವಾಡಿದ್ದಾರೆ.
ನಾನು ಅಂದೇ ಹೇಳಿದ್ದೆ, ಇಂದೂ ಅದನ್ನೇ ಪುನರುಚ್ಚರಿಸುತ್ತಿದ್ದೇನೆ, ಕ್ರೀಡಾಂಗಣವಿರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ನಮ್ಮ ಕೆಲವು ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಇಂದು ಐಪಿಎಲ್ ಫೈನಲ್ ಬೆಂಗಳೂರಿನಿಂದ ಕೈತಪ್ಪಿ ಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಿಸಿಸಿಐನ ನಿರ್ಧಾರವನ್ನು ಉಲ್ಲೇಖಿಸಿ, ಬಿಸಿಸಿಐ ತೆಗೆದುಕೊಂಡಿರುವ ಈ ನಿರ್ಧಾರ ನಮ್ಮ ಸರ್ಕಾರಕ್ಕೆ ಒಂದು ಎಚ್ಚರಿಕೆ ಗಂಟೆಯಾಗಲಿ. ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡವರ ಬೇಜವಾಬ್ದಾರಿ ವರ್ತನೆಯಿಂದಾಗಿ, ಇಂದು ನಾವು ಕೇವಲ ಒಂದು ಪಂದ್ಯವನ್ನಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲಿ ಬೆಂಗಳೂರಿನ ಘನತೆಯನ್ನೂ ಕಳೆದುಕೊಂಡಿದ್ದೇವೆ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕ್ರಿಕೆಟ್ ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿರುವ ಸರ್ಕಾರದ ನಡೆಯನ್ನು ನಿಖಿಲ್ ಖಂಡಿಸಿದರು.
*ಕ್ರೀಡಾಂಗಣವಿರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ನಮ್ಮ ಕೆಲವು ಶಾಸಕರ ಉಚಿತ ಟಿಕೆಟ್ ವ್ಯಾಮೋಹದಿಂದಾಗಿ ಇಂದು ಐಪಿಎಲ್ ಫೈನಲ್ ಬೆಂಗಳೂರಿನಿಂದ ಕೈತಪ್ಪಿ ಹೋಗಿದೆ
- ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ