Huskur Road Metro Station Suicide Attempt
- ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಸಂಜೆ 5:50ಕ್ಕೆ ಆತ್ಮಹತ್ಯೆಗೆ ಯತ್ನ
- ವ್ಯಕ್ತಿ ಹಳಿಗೆ ಹಾರಲು ಯತ್ನಿಸುತ್ತಿದ್ದಂತೆ ವಿದ್ಯುತ್ ಸರಬರಾಜು ತಾತ್ಕಾಲಿಕ ಸ್ಥಗಿತಗೊಳಿಸಿದ ಭದ್ರತಾ ಸಿಬ್ಬಂದಿ
- ಹಳದಿ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ, ಸಾಮಾನ್ಯ ಸೇವೆ ಶೀಘ್ರ ಪುನರಾರಂಭಕ್ಕೆ ಕ್ರಮ
ಬೆಂಗಳೂರು: ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ಹಳಿಗೆ ಹಾರಿ ಆತ್ಮಹತ್ಯೆ(Huskur Road Metro Station Suicide Attempt)ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಸದ್ಯ ಹಳದಿ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಪ್ರಯಾಣಿಕರು ಪರ್ಯಾಯ ಯೋಜನೆ ರೂಪಿಸಿಕೊಳ್ಳಲು ಬಿಎಂಆರ್‌ಸಿಎಲ್ ಮನವಿ ಮಾಡಿಕೊಂಡಿದೆ.
ಸೋಮವಾರ ಜು.27ರ ಸಂಜೆ 5:50ಕ್ಕೆ 30ರಿಂದ35 ವರ್ಷದ ವ್ಯಕ್ತಿಯೊಬ್ಬ ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭದ್ರತಾ ಸಿಬ್ಬಂದಿ ಕೂಡಲೇ ಸುರಕ್ಷತಾ ಕ್ರಮ ಕೈಗೊಂಡು, ವಿದ್ಯುತ್ ಸರಬರಾಜು ತಾತ್ಕಾಲಿಕ ಸ್ಥಗಿತಗೊಳಿಸಿದರಾದರೂ, ಬದುಕುಳಿಯಲಿಲ್ಲ. ಸದ್ಯ ಹಳಿ ಹಾಗೂ ಮೆಟ್ರೋ ಮಧ್ಯೆ ವ್ಯಕ್ತಿ ಸಿಲುಕಿದ್ದು, ಆತನ ಮೃತದೇಹ ಹೊರ ತೆಗೆಯಲು ಭದ್ರತಾ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.
ಸಂಚಾರ ಸ್ಥಗಿತ
ಘಟನೆಯಿಂದಾಗಿ ಆರ್.ವಿ. ರಸ್ತೆ–ಎಲೆಕ್ಟ್ರಾನಿಕ್ ಸಿಟಿ(RV Road to Electronic City Metro) ನಡುವೆ ಮಾತ್ರ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಆದರೆ, ಹುಸ್ಕೂರು ರಸ್ತೆ ಭಾಗದಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರು ಪರ್ಯಾಯ ಯೋಜನೆ ರೂಪಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ. ಶೀಘ್ರದಲ್ಲೇ ಸಾಮಾನ್ಯ ಸೇವೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ನಿಗಮವು ವಿಷಾದ ವ್ಯಕ್ತಪಡಿಸಿದೆ.
ನೆಟ್ಟಿಗರಿಂದಲೂ ಮಾಹಿತಿ ಲಭ್ಯ
ಸೋಮವಾರ ಸಂಜೆ 5.50 ಕ್ಕೆ ಹಳದಿ ಮಾರ್ಗದ ಹುಸ್ಕೂರ್ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಮೆಟ್ರೋ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಅದೇ ಮಾರ್ಗದಲ್ಲಿ ಸಂಚರಿಸುವ ಸಾವಿರಾರು ಪ್ರಯಾಣಿಕರು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡು, ಇತರ ಪ್ರಯಾಣಿಕರಿಗೆ ಮಾಹಿತಿ ನೀಡುತ್ತಿದ್ದಾರೆ.
ಬಿಎಂಆರ್‌ಸಿಎಲ್ ಹೇಳಿದ್ದೇನು?
ಇಂದು ಸಂಜೆ ಸುಮಾರು 5:50 ಗಂಟೆಗೆ ಹಳದಿ ಮಾರ್ಗದ ಹುಸ್ಕೂರು ರಸ್ತೆ ಮೆಟ್ರೋ ನಿಲ್ದಾಣದ ಅಪ್‌ಲೈನ್‌ನಲ್ಲಿ ಆತ್ಮಹತ್ಯೆ ಶಂಕಿತ ಘಟನೆ ಸಂಭವಿಸಿದೆ. ಕರ್ತವ್ಯದಲ್ಲಿದ್ದ ನಿಲ್ದಾಣ ನಿಯಂತ್ರಕರು ಹಾಗೂ ಭದ್ರತಾ ಸಿಬ್ಬಂದಿ ತಕ್ಷಣವೇ ನಿಗದಿತ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಲಾಗಿದೆ.ಇದರ ಪರಿಣಾಮವಾಗಿ, ಹಳದಿ ಮಾರ್ಗದ ಮೆಟ್ರೋ ರೈಲು ಸೇವೆಗಳು ತಾತ್ಕಾಲಿಕವಾಗಿ ಆರ್.ವಿ. ರಸ್ತೆ ಮತ್ತು ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಕಾರ್ಯಾಚರಿಸುತ್ತಿವೆ. ಪ್ರಯಾಣಿಕರು ಇದನ್ನು ಗಮನಿಸಿ, ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಿಕೊಳ್ಳುವಂತೆ ಕೋರಲಾಗಿದೆ. ಸಾಮಾನ್ಯ ರೈಲು ಸೇವೆಗಳನ್ನು ಶೀಘ್ರವಾಗಿ ಪುನರಾರಂಭಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ ಎಂದು ಎಕ್ಸ್ನ ಅಧಿಕೃತ ಖಾತೆಯಲ್ಲಿ ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದೆ.