ಬೆಂಗಳೂರು: ಪ್ರೀತಿ ಮತ್ತು ನಂಬಿಕೆಯ ಹೆಸರಿನಲ್ಲಿ ಜತೆಯಾಗಿ ಬಾಳಿದವನೇ ಈಗ ಯುವತಿಯೊಬ್ಬಳ ಬದುಕಿಗೆ ಕೊಳ್ಳಿ ಇಡಲು ಮುಂದಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಲಿವಿಂಗ್ ಟುಗೆದರ್ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ, ಮಾಜಿ ಪ್ರಿಯತಮೆಯ ಖಾಸಗಿ ವಿಡಿಯೋಗಳನ್ನು ಪೋರ್ನ್ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಮೂಲಕ ಯುವಕನೊಬ್ಬ ( Bengaluru Man ) ವಿಕೃತಿ ಮೆರೆದಿದ್ದಾನೆ.
ಅಭ್ಯುದಯ್ ಪುರೋಹಿತ್ ಎಂಬಾತನೇ ಈ ನೀಚ ಕೃತ್ಯ ಎಸಗಿದ ಆರೋಪಿಯಾಗಿದ್ದು, ನಂಬಿಕೆ ದ್ರೋಹಕ್ಕೆ ಒಳಗಾದ ಸಂತ್ರಸ್ತ ಯುವತಿ ನ್ಯಾಯಕ್ಕಾಗಿ ಆಗ್ನೇಯ ವಿಭಾಗದ ಸಿಇಎನ್ (CEN) ಪೊಲೀಸರ ಮೊರೆ ಹೋಗಿದ್ದಾರೆ.
2023ರಿಂದ 2024ರವರೆಗೆ ಈ ಜೋಡಿ ಪರಸ್ಪರ ಪ್ರೀತಿಸಿ ಒಂದೇ ಸೂರಿನಡಿ ಸಹಜೀವನ ನಡೆಸುತ್ತಿತ್ತು. ಆ ಪ್ರೇಮದ ದಿನಗಳಲ್ಲಿ ಅವರಿಬ್ಬರ ನಡುವಿನ ಅತ್ಯಂತ ಖಾಸಗಿ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿತ್ತು. ಆದರೆ, ಕಾಲಾನಂತರ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಸಂಬಂಧಕ್ಕೆ ಅಂತ್ಯ ಹಾಡಲಾಗಿತ್ತು. ಬ್ರೇಕಪ್ ಆದ ಸಂದರ್ಭದಲ್ಲಿ, ತಮ್ಮ ಬಳಿಯಿರುವ ಎಲ್ಲಾ ಖಾಸಗಿ ವಿಡಿಯೋಗಳನ್ನು ಸಂಪೂರ್ಣವಾಗಿ ಅಳಿಸಿಹಾಕುವಂತೆ ಯುವತಿ ಕೇಳಿಕೊಂಡಿದ್ದರು. ಅಂದು ಸರಿ ಎಂದು ತಲೆಯಾಡಿಸಿ ಒಪ್ಪಿಕೊಂಡಿದ್ದ ಅಭ್ಯುದಯ್, ಮನಸ್ಸಿನಲ್ಲಿ ಸೇಡಿನ ಕಿಚ್ಚನ್ನೇ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಕೊಟ್ಟ ಮಾತಿನಂತೆ ವಿಡಿಯೋಗಳನ್ನು ಡಿಲೀಟ್ ಮಾಡದ ಆರೋಪಿ, ಇತ್ತೀಚೆಗೆ ಅವುಗಳನ್ನು ಅಶ್ಲೀಲ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವ ಮೂಲಕ ಯುವತಿಯ ಮಾನಹಾನಿಗೆ ಯತ್ನಿಸಿದ್ದಾನೆ. ತನಗೆ ಅರಿವಿಲ್ಲದಂತೆಯೇ ತನ್ನ ಖಾಸಗಿ ದೃಶ್ಯಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವಿಷಯ ತಿಳಿಯುತ್ತಿದ್ದಂತೆಯೇ ಯುವತಿ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಆದರೂ ಧೃತಿಗೆಡದ ಸಂತ್ರಸ್ತೆ, ತಕ್ಷಣವೇ ಆ ಅಶ್ಲೀಲ ವೆಬ್‌ಸೈಟ್‌ನ ಲಿಂಕ್‌ಗಳನ್ನು ಸಾಕ್ಷ್ಯವಾಗಿ ಸಂಗ್ರಹಿಸಿ ಪೊಲೀಸರ ಮುಂದಿಟ್ಟಿದ್ದಾರೆ.
ಸಂತ್ರಸ್ತೆಯ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರಿನ ಆಗ್ನೇಯ ವಿಭಾಗದ ಸೈಬರ್ ಕ್ರೈಂ (ಸಿಇಎನ್) ಪೊಲೀಸರು, ಆರೋಪಿ ಅಭ್ಯುದಯ್ ಪುರೋಹಿತ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತಾಂತ್ರಿಕ ಸಾಕ್ಷ್ಯಗಳು ಹಾಗೂ ವೆಬ್‌ಸೈಟ್ ಲಿಂಕ್‌ಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ವಿಡಿಯೋಗಳನ್ನು ಇಂಟರ್‌ನೆಟ್‌ನಿಂದ ತೆಗೆದುಹಾಕುವ ಜೊತೆಗೆ ಆರೋಪಿಗೆ ತಕ್ಕ ಪಾಠ ಕಲಿಸಲು ಬಲೆ ಬೀಸಿದ್ದಾರೆ.