Murder for rejecting love in bengaluru
- ಅಣ್ಣನ ಪ್ರೀತಿ ನಿರಾಕರಿಸಿದಕ್ಕೆ ತಮ್ಮನಿಂದ ಲಾ ಓದುತ್ತಿದ್ದ ಯುವತಿಗೆ ಚಾಕು ಇರಿತ
- ಯುವತಿಯ ಪ್ರಿಯಕರ ಧನುಷ್ ಹಾಗೂ ಚಾಕು ಇರಿದ ಸೂರ್ಯ ವಿರುದ್ಧ ಎಫ್ಐಆರ್
- ಮೂರು ದಿನ ಆಸ್ಪತ್ರೆಯಲ್ಲಿ ನರಳಾಟ, ಕೊನೆಗೂ ಹಾರಿಹೋಯ್ತು ಪ್ರಾಣ ಪಕ್ಷಿ
- ಬೆಂಗಳೂರಿನ ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ಘಟನೆ
ಬೆಂಗಳೂರು: ಅಣ್ಣನ ಪ್ರೀತಿ ನಿರಾಕರಿಸಿದ್ದಕ್ಕೆ ಸಿಟ್ಟಾದ ತಮ್ಮ, ಆತನ ಪ್ರೇಯಸಿಗೆ ನಡು ರಸ್ತೆಯಲ್ಲೇ ಚಾಕು ಇರಿದ ಘಟನೆ ಜುಲೈ 13 ರಂದು ಹೆಚ್ಎಎಲ್ ರಸ್ತೆಯ ಕೋಡಿಹಳ್ಳಿಯಲ್ಲಿ ನಡೆದಿತ್ತು. ಸದ್ಯ ಆಸ್ಪತ್ರೆಗೆ ದಾಖಲಾಗಿದ್ದ ಯುವತಿ 48 ಗಂಟೆಗಳಿಗೂ ಹೆಚ್ಚು ಕಾಲ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಮೃತಪಟ್ಟಿದ್ದಾರೆ.
ಮೃತ ಯುವತಿಯನ್ನು ಅಮೃತ (22) ಎಂದು ಗುರುತಿಸಲಾಗಿದೆ. 4ನೇ ವರ್ಷದ ಕಾನೂನು ವಿದ್ಯಾರ್ಥಿನಿ. ಅಲ್ಲದೇ ಪಿಜ್ಜಾ ಶಾಪ್ನಲ್ಲಿಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಯುವತಿಯ ಪ್ರಿಯಕರ ಧನುಷ್ ಹಾಗೂ ಚಾಕು ಇರಿದ ಸೂರ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಜೀವನಭೀಮಾನಗರ ಪೊಲೀಸರಿಂದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ
ಯುವತಿ ಸಾವು
ಜುಲೈ 13 ರಂದು ಸಂಜೆ 4.30 ರ ಸುಮಾರಿಗೆ ಅಮೃತ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ ಸೇರಿದ್ದರು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ, ಜುಲೈ 15 ರ ಸಂಜೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸಿ.ವಿ.ರಾಮನ್ ಆಸ್ಪತ್ರೆಗೆ ಅಮೃತಾರ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ.
ಪ್ರೀತಿ ಚಿಗುರಿದ್ದು ಹೀಗೆ
ಧನುಷ್, ಸೂರ್ಯ ಹಾಗೂ ಅಮೃತ ಒಂದೇ ಏರಿಯಾದವರಾಗಿದ್ದರು. ಕುಟುಂಬಸ್ಥರು ಓಂ ಶಕ್ತಿ ಮಾಲೆ ಹಾಕುವ ವೇಳೆ ಪರಿಚಯವಾಗಿತ್ತು. ಅದೇ ಪರಿಚಯದಿಂದ ಧನುಷ್ ಮತ್ತು ಅಮೃತ ಆತ್ಮೀಯರಾಗಿದ್ರು. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಮ್ಮೆ ಅಮೃತಾಳಿಗೆ ಧನುಷ್ನ ಹಿಂದಿನ ಘಟನೆ ತಿಳಿದುಬಂತು. ಅದೇನೆಂದರೆ, ಧನುಷ್ ಮದುವೆಯಾಗಿ ವಿಚ್ಛೇದನ ಪಡೆದಿದ್ದ. ಆತನಿಗೆ ಒಂದು ಮಗು ಕೂಡ ಇತ್ತು ಎನ್ನುವುದು.
ಮೊದಲೆ ಮದುವೆಯಾಗಿದ್ದಕ್ಕೆ ರಿಜೆಕ್ಟ್
ಮದುವೆ ಹಾಗೂ ಡಿವೋರ್ಸ್ ವಿಚಾರವನ್ನು ಅಮೃತಳಿಂದ ಮುಚ್ಚಿಟ್ಟಿದ್ದ . ವಿಷಯ ಗೊತ್ತಾಗಿ ಧನುಷ್ನಿಂದ ಅಮೃತ ದೂರವಿದ್ದಳು. ಕ್ರಮೇಣವಾಗಿ ಮಾತು, ಚಾಟಿಂಗ್, ಮೀಟಿಂಗ್ ಎಲ್ಲವೂ ದೂರವಾಯ್ತು. ಇದರಿಂದ ಸಿಟ್ಟಾದ ಧನುಷ್ ತಮ್ಮ ಸೂರ್ಯ, ಅಣ್ಣನ ಪ್ರೀತಿ ನಿರಾಕರಿಸಿದವಳನ್ನ ಉಳಿಸಲ್ಲ ಎಂದು ಬೆದರಿಕೆ ಹಾಕಿದ್ದನಂತೆ.
ಅದರಂತೆ ಜು.13ರಂದು ಯುವತಿ ಮನೆಯ ಬಳಿ ತೆರಳಿ ಗಲಾಟೆ ಮಾಡಿ ಆಕೆಯ ಬೆನ್ನು ಹಾಗೂ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಯುವತಿಯನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಅಮೃತ ಮೃತಪಟ್ಟರು.