Bengaluru ಸಾಂದರ್ಭಿಕ ಚಿತ್ರ 
ರಾಜ್ಯ

ಆಸ್ಪತ್ರೆ ಕಾರಿಡಾರ್‌ನಲ್ಲಿ ಲೈವ್ ಮ್ಯೂಸಿಕ್ ಪಾರ್ಟಿ: ಇದು ಚಿಕಿತ್ಸಾ ಕೇಂದ್ರವೋ, ಪಾರ್ಟಿ ಹಾಲ್? ಎಂದ ನೆಟ್ಟಿಗರು! Bengaluru

ಬೆಂಗಳೂರು: ಬೆಂಗಳೂರಿನ ಸೂಪರ್​ ಹೆಲ್ತ್​ ಆಸ್ಪತ್ರೆಯೊಂದು ತನ್ನ ವೈದ್ಯಕೀಯೇತರ ವಿಭಾಗದ ಮಹಡಿಗಳಲ್ಲಿ 'ಲೈವ್ ಮ್ಯೂಸಿಕ್ ನೈಟ್' ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಲೊಕಲ್ ಹೋಸ್ಟ್ ಹೆಚ್‌ಕ್ಯೂ ಜೊತೆಗೂಡಿ ನಡೆಸಿದ ಈ ಕಾರ್ಯಕ್ರಮದ ವೀಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಆಸ್ಪತ್ರೆಯಂತಹ ಜಾಗದಲ್ಲಿ ಸಂಗೀತ ಕೂಟ ಅಗತ್ಯವೇ ಎಂಬ ಪ್ರಶ್ನೆಗಳು ಎದ್ದಿವೆ.

ಸಂಘಟಕರ ವಾದ ಮತ್ತು ಹೊಸ ಪ್ರಯೋಗ

ಈ ಕಾರ್ಯಕ್ರಮದ ವೀಡಿಯೋ ಹಂಚಿಕೊಂಡ ಗೌರಂಗ್ ದೇಸಾಯಿ ಎಂಬ ಬಳಕೆದಾರರು, ನಾವು ಆಸ್ಪತ್ರೆಗಳಿಗೆ ಹೆದರುತ್ತೇವೆ, ಆದರೆ ನಾವೆಲ್ಲರೂ ಜನಿಸಿದ್ದೇ ಆಸ್ಪತ್ರೆಯಲ್ಲಿ ಎಂಬುದನ್ನು ಮರೆಯುತ್ತೇವೆ ಎಂದು ಬರೆದುಕೊಂಡಿದ್ದಾರೆ. ಆದಾಗ್ಯೂ, ಆಸ್ಪತ್ರೆಗಳ ಬಗ್ಗೆ ಜನರಲ್ಲಿದ್ದ ಭಯದ ಕಲ್ಪನೆಯನ್ನು ಬದಲಾಯಿಸುವ ಸಲುವಾಗಿ ಹೋಸ್ಪಿಟಾಲಿಟಿ ಹೆಸರಿನಲ್ಲಿ ಈ ಸಂಗೀತ ಸಂಜೆಯನ್ನು ಆಯೋಜಿಸಲಾಗಿತ್ತು. ಹೊರರೋಗಿ ವಿಭಾಗ (OPD) ಮುಗಿದ ನಂತರ, ಕೇವಲ ಬಿಸಿನೆಸ್ ಮತ್ತು ವೈದ್ಯಕೀಯೇತರ ವಿಭಾಗಗಳಲ್ಲಿ ಮಾತ್ರ ಈ ಈವೆಂಟ್ ನಡೆಸಲಾಗಿತ್ತು.
ಆಕ್ಷೇಪಣೆಗಳು ಬರುತ್ತವೆ ಎಂದು ಊಹಿಸಿದ್ದ ಸಂಘಟಕರು ಮುಂಜಾಗ್ರತಾ ಕ್ರಮವಾಗಿ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದರು. ಒಳರೋಗಿ ವಿಭಾಗಗಳಿಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗಿತ್ತು ಹಾಗೂ ತುರ್ತು ಚಿಕಿತ್ಸಾ ರಸ್ತೆಗಳನ್ನು ಸಂಪೂರ್ಣವಾಗಿ ತೆರೆದಿಡಲಾಗಿತ್ತು ಎಂದು ಹೇಳಿದ್ದಾರೆ.
ಆಸ್ಪತ್ರೆಯ ವಾತಾವರಣಕ್ಕೆ ಯಾವುದೇ ಧಕ್ಕೆಯಾಗದಂತೆ ಶಬ್ದದ ಮಟ್ಟವನ್ನು ಮಿತಿಯಲ್ಲಿಟ್ಟು ನಿರಂತರ ನಿಗಾ ವಹಿಸಲಾಗಿತ್ತು. ಅಷ್ಟೇ ಅಲ್ಲದೆ, ಈ ಕಾರ್ಯಕ್ರಮದಲ್ಲಿ ಮದ್ಯಪಾನ, ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಿ, ಕೊಂಬುಚಾ (Kombucha) ಸೇರಿದಂತೆ ಆರೋಗ್ಯಕರ ಪಾನೀಯಗಳನ್ನು ಮಾತ್ರ ವಿತರಿಸಲಾಗಿತ್ತು. ಈ ಕಾರಣಕ್ಕಾಗಿಯೇ ಇದನ್ನು ಕೆಲವರು ಸಾತ್ವಿಕ ಪಾರ್ಟಿ ಎಂದೂ ಬಣ್ಣಿಸಿದ್ದರು.

ನೆಟ್ಟಿಗರ ಆಕ್ರೋಶಕ್ಕೆ ಕಾರಣವೇನು?

ಆಸ್ಪತ್ರೆಯು ಎಷ್ಟೇ ನಿಯಮಗಳನ್ನು ಪಾಲಿಸಿದ್ದೇವೆ ಎಂದರೂ ನೆಟ್ಟಿಗರು ಈ ಪ್ರಯೋಗವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿಲ್ಲ. ಆಸ್ಪತ್ರೆ ಎಂಬುದು ರೋಗಿಗಳು, ಅವರ ಕುಟುಂಬಸ್ಥರು ಆತಂಕ, ದುಃಖ ಮತ್ತು ಚಿಕಿತ್ಸೆಯ ಹಂತದಲ್ಲಿರುವ ಅತ್ಯಂತ ಸೂಕ್ಷ್ಮವಾದ ಸ್ಥಳ. ಅಂತಹ ಜಾಗದಲ್ಲಿ ಮನರಂಜನಾ ಪಾರ್ಟಿಗಳನ್ನು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ, ಆಸ್ಪತ್ರೆಯ ಮೂಲ ಉದ್ದೇಶ ಮತ್ತು ಗಂಭೀರತೆಗೆ ಧಕ್ಕೆ ತರುವ ಇಂತಹ ಈವೆಂಟ್‌ಗಳು ಸೂಕ್ತವಲ್ಲ ಎಂಬುದು ಬಹುತೇಕರ ಅಭಿಪ್ರಾಯವಾಗಿದೆ (ಏಜೆನ್ಸೀಸ್).