bengaluru homeless man kicked off by bmtc conductor suspended
- ಮನುಷತ್ವ ಮರೆತು ಬಸ್ ಹತ್ತುತ್ತಿದ್ದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್.
- ನೆಲಮಂಗಲಕ್ಕೆ ತೆರಳುತ್ತಿದ್ದ ಬಸ್ನಲ್ಲಿ ನಡೆದಿರೋ ಘಟನೆ.
- ಬಸ್ ಕಂಡಕ್ಟರ್ ಕೃಷ್ಣಮೂರ್ತಿ ಬಿಲ್ಲೆ ಎಂಬಾತನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ ಬಿಎಂಟಿಸಿ.
ಬೆಂಗಳೂರು: ಬಸ್ ಹತ್ತುತ್ತಿದ್ದ ಭಿಕ್ಷುಕನಿಗೆ ಕಂಡಕ್ಟರ್ವೊಬ್ಬರು ಕಾಲಿನಿಂದ ಒದ್ದು, ಕೆಳಕ್ಕೆ ತಳ್ಳಿದ ದೃಶ್ಯಾವಳಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ, ಎಚ್ಚೆತ್ತ ಬೆಂಗಳೂರು ರಸ್ತೆ ಸಾರಿಗೆ ನಿಗಮವು, ಕೃಷ್ಣಮೂರ್ತಿ ಬಿಲ್ಲೆ ಎಂಬಾತನನ್ನು ಹುದ್ದೆಯಿಂದ ಅಮಾನತುಗೊಳಿಸಿದೆ.
ಏನಿದು ಘಟನೆ
ಆಗಸ್ಟ್2ರಂದು ನೆಲಮಂಗಲ ಟೋಲ್ ಬಳಿ ಈ ಅಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ. ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ದ್ವಿಚಕ್ರ ವಾಹನ ಸವಾರರೊಬ್ಬರು ಈ ಘಟನೆಯನ್ನು ಮೊಬೈಲ್ ಕ್ಯಾಮೇರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ನಿರಾಶ್ರಿತ ವ್ಯಕ್ತಿಯೊಬ್ಬ ಹಳದಿ ಬಣ್ಣದ ಟಾರ್ಪಲ್ ಅನ್ನು ಕಂಕುಳಿನಲ್ಲಿ ಹಿಡದು ಬಸ್ ಹತ್ತಲು ಯತ್ನಿಸುತ್ತಾನೆ ಈ ವೇಳೆ ಬಸ್ ಹಿಂಬದಿ ಮೆಟ್ಟಿಲಿನಿಂದ ಇಳಿದ ಕಂಡಕ್ಟರ್ ಬೂಟಿನ ಕಾಲಿನಿಂದ ಆತನಿಗೆ ಒದ್ದ, ಮತ್ತೆ ನಿರಾಶ್ರಿತನ ಕಪಾಳಕ್ಕೆ ಹೊಡೆದಾಗ ಆತ ಒಂದಷ್ಟು ದೂರ ಹೋಗಿ ಉರುಳಿ ಬೀಳುತ್ತಾನೆ. ಮತ್ತೆ ಮೇಲೆ ಏಳದೇ ಇರುವ ಆತನಿಗೆ ಏನಾಯಿತು ಎಂದು ನೋಡದೇ ಬಸ್ ಚಲಿಸುತ್ತಿರುವ ದೃಶ್ಯಗಳು ಹರಿದಾಡುತ್ತಿವೆ
ನೆಟ್ಟಿಗರು ಏನಂದ್ರು?
ಭೈರತಿ ಸುರೇಶ್ ಅವರನ್ನು, ಬಿಎಂಟಿಸಿಯನ್ನು ಉಲ್ಲೇಖಿಸಿ ಎಕ್ಸ್ ಸೇರಿದಂತೆ ಫೇಸ್ಬುಕ್ನಲ್ಲಿ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಇಲಾಖೆ ಅಮಾನತುಗೊಳಿಸಿ ಪ್ರಕಟಣೆಯನ್ನು ಹೊರಡಿಸಿದೆ. ಬಿಎಂಟಿಸಿಯಲ್ಲಿ ಇದು ಸಾಮಾನ್ಯ ದೃಶ್ಯ. ಸುಮಾರು 10-20% ಕಂಡಕ್ಟರ್‌ಗಳು ಈ ರೀತಿ ವರ್ತಿಸುತ್ತಾರೆ. ನಾನು ವೈಯಕ್ತಿಕವಾಗಿ ಇಂತಹ ಘಟನೆಗಳನ್ನು ಎದುರಿಸಿದ್ದೇನೆ. ನಾನು ಬಿಎಂಟಿಸಿಗೆ ದೂರು ನೀಡಿದ್ದೇನೆ, ಆದರೆ ಬಿಎಂಟಿಸಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಘಟಕ-43ಕ್ಕೆ ಸೇರಿದ ವಾಹನ ಸಂಖ್ಯೆ KA-57 F-1104, ಮಾರ್ಗ ಸಂಖ್ಯೆ 258SD/1ರಲ್ಲಿ ದಿನಾಂಕ 02.08.2026ರಂದು ಕರ್ತವ್ಯ ನಿರ್ವಹಿಸುತ್ತಿದ್ದ ನಿರ್ವಾಹಕರಾದ ಕೃಷ್ಣಮೂರ್ತಿ ಬಿಲ್ಲೆ ವರ್ತನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಸಂಸ್ಥೆಯು ಗಂಭೀರವಾಗಿ ಪರಿಗಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿರುವ ವಿಡಿಯೋ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತಕ್ಷಣವೇ ಇಲಾಖಾ ಮಟ್ಟದ ವಿಚಾರಣೆಗೆ ಆದೇಶಿಸಲಾಗಿದ್ದು, ಸತ್ಯಾಂಶವನ್ನು ನಿಷ್ಪಕ್ಷಪಾತವಾಗಿ ಪರಿಶೀಲಿಸಲು ಸಂಬಂಧಿತ ನಿರ್ವಾಹಕರನ್ನು ದಿನಾಂಕ 04-08-2026 ಅಪರಾಹ್ನದಿಂದ ಜಾರಿಗೆ ಬರುವಂತೆ ವಿಚಾರಣಾಪೂರ್ವ ಅಮಾನತ್ತಿನಲ್ಲಿ ಇರಿಸಲಾಗಿದೆ.
ತನಿಖೆ ನಡೆಸಲಾಗುತ್ತದೆ
ಘಟನೆಯ ನಿಖರವಾದ ವಾಸ್ತವಾಂಶವನ್ನು ತಿಳಿದುಕೊಳ್ಳುವ ಉದ್ದೇಶದಿಂದ ಸಂಬಂಧಿತ ನಿರ್ವಾಹಕ, ಪ್ರಯಾಣಿಕ, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು, ಬಸ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿ (ಲಭ್ಯವಿದ್ದಲ್ಲಿ) ಹಾಗೂ ಇತರೆ ಸಂಬಂಧಿತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಸಮಗ್ರ ತನಿಖೆ ನಡೆಸಲಾಗುವುದು.
ಸಾರ್ವಜನಿಕರು ವ್ಯಕ್ತಪಡಿಸಿರುವ ಕಳವಳವನ್ನು ಸಂಸ್ಥೆಯು ಗೌರವದಿಂದ ಪರಿಗಣಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಪ್ರಯಾಣಿಕ ಸ್ನೇಹಿ ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ