Flu Alert ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಮುಂದುವರೆಯುತ್ತಿದ್ದಂತೆ ಶೀತ, ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿರುವವರ ಸಂಖ್ಯೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ನಗರದ ಕ್ಲಾರೆನ್ಸ್ ಹೈಸ್ಕೂಲ್‌ನ ಹಲವು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದು, ಇಬ್ಬರು ಸಿಬ್ಬಂದಿಗೆ H1N1 ದೃಢಪಟ್ಟಿತ್ತು. ಈ ಹಿನ್ನಲೆಯಲ್ಲಿ ಶಾಲೆ ಮುನ್ನಚ್ಚರಿಕೆ ವಯಿಸಿದ್ದು, ತಾತ್ಕಾಲಿಕವಾಗಿ ಆಫ್ಲೈನ್ ತರಗತಿಗಳನ್ನು ರದ್ದುಗೊಳಿಸಿತ್ತು. ಆದರೆ, ಸಾರ್ವಜನಿಕರು ಆತಂಕಗೊಳ್ಳುವ ಅಗತ್ಯವಿಲ್ಲ, ಬದಲಿಗೆ ಅಗತ್ಯ ಮುನ್ನೆಚ್ಚರಿಕೆ
ವಹಿಸಬೇಕು ಎಂದು ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ 2,200ಕ್ಕೂ ಹೆಚ್ಚು ಇನ್‌ಫ್ಲುಯೆಂಜಾ ಪ್ರಕರಣಗಳು ದೃಢ
ಕರ್ನಾಟಕ ರಾಜ್ಯ ಸರ್ವೆಲೆನ್ಸ್ ಯುನಿಟ್ ಸಂಗ್ರಹಿಸಿರುವ ದತ್ತಾಂಶದ ಪ್ರಕಾರ, ಈವರೆಗೆ ಪರೀಕ್ಷಿಸಲಾದ 6,937 ಮಾದರಿಗಳಲ್ಲಿ 2,214 ಇನ್‌ಫ್ಲುಯೆಂಜಾ ಪ್ರಕರಣಗಳು ಪತ್ತೆಯಾಗಿವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಮುಂಗಾರು ಅವಧಿಯಲ್ಲಿ ಇಂತಹ ಉಸಿರಾಟದ ಸೋಂಕುಗಳು ಹೆಚ್ಚಾಗುವುದು ಸ್ವಾಭಾವಿಕ. 2025ರ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಕೇವಲ H1N1 ಎಂದಷ್ಟೇ ವರ್ಗೀಕರಿಸುವುದು ತಪ್ಪು: ತಜ್ಞರ ಸ್ಪಷ್ಟನೆ
ಬೆಂಗಳೂರಿನಲ್ಲಿ ಕಂಡುಬರುತ್ತಿರುವ ಈ ಸೋಂಕಿನ ಕುರಿತು ಮಾತನಾಡಿದ ವೈದ್ಯೆ ಡಾ. ಹಲೀಮಾ ಯೆಜ್ದಾನಿ, ಕಳೆದ 15 ದಿನಗಳಿಂದ ಮಕ್ಕಳಲ್ಲಿ ಜ್ವರದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಅವರಿಂದ ಕುಟುಂಬದ ಇತರ ಸದಸ್ಯರಿಗೂ ಹರಡುತ್ತಿದೆ ಎಂದಿದ್ದಾರೆ.
ಶಾಲೆಯೊಂದರಲ್ಲಿ ಇಬ್ಬರಿಗೆ H1N1 ಬಂದ ತಕ್ಷಣ ಅದನ್ನೇ ದೊಡ್ಡ ಮಟ್ಟದಲ್ಲಿ ಹರಡುತ್ತದೆ ಎಂದು ಕರೆಯಲಾಗುವುದಿಲ್ಲ. ಬದಲಾಗಿ ಲ್ಯಾಬ್ ಪರೀಕ್ಷೆಗೆ ಒಳಪಡಿಸದ ಇತರ ನೂರಾರು ಪ್ರಕರಣಗಳು ಆರ್‌ಎಸ್‌ವಿ (RSV), ಇನ್‌ಫ್ಲುಯೆಂಜಾ B, ಅಡೆನೋವೈರಸ್ ಅಥವಾ ಸಾಮಾನ್ಯ ಶೀತವೂ ಆಗಿರಬಹುದು. ಆದ್ದರಿಂದ ಇದನ್ನು ಉಸಿರಾಟದ ವೈರಲ್ ಕ್ಲಸ್ಟರ್ ಎನ್ನಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರು ಭೀತಿಗೆ ಒಳಗಾಗುವ ಅಗತ್ಯವಿಲ್ಲ: ನಿಮ್ಹಾನ್ಸ್ ವೈದ್ಯರು
ಇದೇ ವಿಷಯವಾಗಿ ನಿಮ್ಹಾನ್ಸ್ (NIMHANS) ಸಂಸ್ಥೆಯ ನ್ಯೂರೋವೈರಾಲಜಿ ವಿಭಾಗದ ಮುಖ್ಯಸ್ಥೆ ಡಾ. ರೀಟಾ ಎಸ್. ಮಣಿ ಪ್ರತಿಕ್ರಿಯಿಸಿದ್ದು, ಮುಂಗಾರು ಮುಗಿಯುವ ಅವಧಿಯಲ್ಲಿ ಈ ಪ್ರಕರಣಗಳು ಏರಿಕೆಯಾಗಿವೆ. ಲಭ್ಯವಿರುವ ಮಾಹಿತಿಯ ಪ್ರಕಾರ ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಜಾಗರೂಕರಾಗಿದ್ದರೆ ಸಾಕಾಗುತ್ತದೆ ಎಂದು ಅಭಯ ನೀಡಿದ್ದಾರೆ.
ಜ್ವರವಿದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ: ಪೋಷಕರಿಗೆ ಸಲಹೆ
ಮಕ್ಕಳಿಗೆ ಜ್ವರ ಅಥವಾ ಉಸಿರಾಟದ ಸಮಸ್ಯೆ ಇದ್ದರೆ ಯಾವುದೇ ಕಾರಣಕ್ಕೂ ಶಾಲೆಗೆ ಕಳುಹಿಸಬಾರದು ಎಂದು ವೈದ್ಯರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜ್ವರದ ಮಾತ್ರೆ ತಿಂದ ನಂತರ ತಾತ್ಕಾಲಿಕವಾಗಿ ಜ್ವರ ಕಡಿಮೆಯಾಗಿದೆ ಎಂದು ಶಾಲೆಗೆ ಕಳುಹಿಸುವುದು ಸೂಕ್ತವಲ್ಲ. ಮಾತ್ರೆ ನೀಡದೆಯೂ ಕನಿಷ್ಠ 24 ಗಂಟೆಗಳ ಕಾಲ ಜ್ವರ ಬಾರದೆ ಸಂಪೂರ್ಣ ಸುಧಾರಣೆ ಕಂಡ ನಂತರ ಮಗುವನ್ನು ಶಾಲೆಗೆ ಕಳುಹಿಸಬೇಕು. ಅಲ್ಲದೇ, ಶಾಲಾ ಕೊಠಡಿಗಳಲ್ಲಿ ಗಾಳಿ-ಬೆಳಕಿನ ವ್ಯವಸ್ಥೆ ಚೆನ್ನಾಗಿರಬೇಕು ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಲಾಗಿದೆ.
ರೋಗನಿರ್ಣಯದಲ್ಲಿ ವಿಳಂಬ ಮಾಡದಿರಿ, ಲಸಿಕೆ ಪಡೆದುಕೊಳ್ಳಿ
ಸಾಮಾನ್ಯವಾಗಿ ಪೋಷಕರು "ಇದು ಸಾಮಾನ್ಯ ವೈರಲ್ ಜ್ವರ" ಎಂದು ನಿರ್ಲಕ್ಷಿಸಿ ಸೂಕ್ತ ಚಿಕಿತ್ಸೆ ನೀಡಲು ದಿನಗಟ್ಟಲೆ ವಿಳಂಬ ಮಾಡುತ್ತಾರೆ. ಮಗುವಿನಲ್ಲಿ ತೀವ್ರ ಜ್ವರ, ಅತಿಯಾದ ಸುಸ್ತು, ಕೆಮ್ಮು ಅಥವಾ ಮೈಕೈ ನೋವು ಕಂಡುಬಂದ ತಕ್ಷಣ ವೈದ್ಯರ ಬಳಿ ತೋರಿಸಬೇಕು. ಆರಂಭದ 48 ಗಂಟೆಗಳ ಒಳಗೆ ಅಗತ್ಯ ಚಿಕಿತ್ಸೆ ನೀಡಿದರೆ ಬೇಗ ಗುಣಮುಖರಾಗಬಹುದು. ಇದರೊಂದಿಗೆ, ಅಪಾಯದ ಹಂತದಲ್ಲಿರುವವರು ಹಾಗೂ ಅರ್ಹ ವ್ಯಕ್ತಿಗಳು ಋತುಮಾನ ಆಧಾರಿತ ಫ್ಲೂ ಲಸಿಕೆ ಪಡೆದುಕೊಳ್ಳುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡಿದ್ದಾರೆ (ಏಜೆನ್ಸೀಸ್).