Bengaluru FC look to dent Jamshedpur FC’s title hopes in their penultimate game of the season
ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡವು ಈ ಸೀಸನ್‌ನ ತನ್ನ ಅಂತಿಮ ಪಂದ್ಯಕ್ಕೂ ಮುನ್ನ, ಜಮ್‌ಶೆಡ್‌ಪುರ ಎಫ್‌ಸಿಯ ಪ್ರಶಸ್ತಿಯ ಕನಸಿಗೆ ಅಡ್ಡಿಯಾಗಲು ಸಜ್ಜಾಗಿದೆ. ಇತ್ತೀಚಿನ ಪಂದ್ಯಗಳಲ್ಲಿ ಅಲ್ಪ ಹಿನ್ನಡೆ ಅನುಭವಿಸಿರುವ ಬೆಂಗಳೂರು ತಂಡವು ಮತ್ತೆ ಗೆಲುವಿನ ಹಾದಿಗೆ ಮರಳಲು ಎದುರು ನೋಡುತ್ತಿದ್ದರೆ, ಅಂಕಪಟ್ಟಿಯ ಅಗ್ರಸ್ಥಾನದ ಹತ್ತಿರವಿರುವ ಜಮ್‌ಶೆಡ್‌ಪುರ ಎಫ್‌ಸಿ ಪ್ರಶಸ್ತಿ ರೇಸ್‌ನಲ್ಲಿ ಭದ್ರವಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆ.
ಜೆಆರ್‌ಡಿ ಟಾಟಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಐಎಸ್‌ಎಲ್ ಪಂದ್ಯಗಳ ಇತಿಹಾಸದಲ್ಲಿ ಜಮ್‌ಶೆಡ್‌ಪುರ ತಂಡವು ಅಲ್ಪ ಮುನ್ನಡೆ ಹೊಂದಿದೆ. ಇಲ್ಲಿ ನಡೆದ 8 ಪಂದ್ಯಗಳಲ್ಲಿ ಆತಿಥೇಯರು 3 ರಲ್ಲಿ ಗೆದ್ದಿದ್ದರೆ, ಬೆಂಗಳೂರು ಎಫ್‌ಸಿ 2 ರಲ್ಲಿ ಜಯಗಳಿಸಿದೆ ಮತ್ತು ಉಳಿದ 3 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಒಟ್ಟಾರೆಯಾಗಿ, ಬೆಂಗಳೂರು ಎಫ್‌ಸಿ ಎಲ್ಲಾ ಸ್ಪರ್ಧೆಗಳಲ್ಲಿ ನಡೆದ 18 ಪಂದ್ಯಗಳ ಪೈಕಿ 9 ರಲ್ಲಿ ಜಯ ದಾಖಲಿಸಿರುವುದು ಗಮನಾರ್ಹ.
ಪಂದ್ಯದ ಸಿದ್ಧತೆಗಳ ಕುರಿತು ಮಾತನಾಡಿದ ಬಿಎಫ್‌ಸಿ ಮುಖ್ಯ ತರಬೇತುದಾರ ಪೆಪ್ ಮುನ್ನೋಜ್, "ತಂಡವು ಮೈದಾನದಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಆಟಗಾರರು ಈಗ ಹೆಚ್ಚು ಸ್ಪಷ್ಟ ಉದ್ದೇಶದೊಂದಿಗೆ ಆಡುತ್ತಿದ್ದು, ನಾವು ರಕ್ಷಣೆ ಮತ್ತು ಆಕ್ರಮಣ ಎರಡರಲ್ಲೂ ಇನ್ನು ಸುಧಾರಿಸಬೇಕಿದೆ. ಗೋಲು ಬರದಂತೆ ತಡೆಯುವಲ್ಲಿ ಮತ್ತು ಸಿಕ್ಕ ಅವಕಾಶಗಳನ್ನು ನಿಖರವಾಗಿ ಬಳಸಿಕೊಳ್ಳುವಲ್ಲಿ ನಾವು ಹೆಚ್ಚು ಆಕ್ರಮಣಕಾರಿಯಾಗಬೇಕಿದೆ," ಎಂದರು.
ಜಮ್‌ಶೆಡ್‌ಪುರ ತಂಡವು ಮೊಹಮ್ಮದ್ ಸನನ್ ಮತ್ತು ಮಾದಿಹ್ ತಲಾಲ್ ಅವರ ವೇಗವನ್ನು ನಂಬಿಕೊಂಡಿದೆ. ಇತ್ತ ಬೆಂಗಳೂರು ತಂಡದ ಭರವಸೆಯ ಆಟಗಾರ ನೌರೆಮ್ ರೋಷನ್ ಸಿಂಗ್ ಮಾತನಾಡಿ, "ನಾವು ಚೆಂಡನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದೇವೆ, ಆದರೆ ಅಂತಿಮ ಹಂತದಲ್ಲಿಗೋಲು ಗಳಿಸುವಲ್ಲಿ ಹೆಚ್ಚು ನಿಖರತೆ ಬೇಕು. ಸಣ್ಣ ತಪ್ಪುಗಳನ್ನು ತಡೆದರೆ ಗೆಲುವು ಖಂಡಿತ ನಮ್ಮದೇ," ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆಶಿಕ್ ಕುರುನಿಯನ್ ಮತ್ತು ನಿಖಿಲ್ ಪೂಜಾರಿ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಪೆಪ್, ನಿಖಿಲ್ ಚೇತರಿಸಿಕೊಳ್ಳಲು ಕನಿಷ್ಠ 10 ದಿನ ಬೇಕು ಹಾಗೂ ಆಶಿಕ್ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿಸಿದರು. ನಾಳೆ 'ದಿ ಫರ್ನೇಸ್' ಕ್ರೀಡಾಂಗಣದಲ್ಲಿ ಉಭಯ ತಂಡಗಳ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.