Child in cab (ಸಾಂದರ್ಭಿಕ ಚಿತ್ರ)
ಬೆಂಗಳೂರು: ಪೋಷಕರು ಎಷ್ಟು ಜವಬ್ದಾರಿಯಿಂದ ಇದ್ದರೂ ಕೂಡಾ ಕೆಲವೊಂದು ಸಂದರ್ಭದಲ್ಲಿ ಮಕ್ಕಳ ವಿಚಾರಕ್ಕೆ ಬಂದರೆ, ಸ್ವಲ್ಪ ಯಾಮಾರಿದರೂ ದೊಡ್ಡ ಅನಾಹುತಗಳು ಸಂಭವಿಸುವುದು ಗ್ಯಾರಂಟಿ ಎನ್ನುವ ಮಾತುಗಳು ಆಗ್ಗಾಗ ಕೇಳಿಬರುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ದಂಪತಿ ತಮ್ಮ ಮಗುವನ್ನು ಕ್ಯಾಬ್‌ನಲ್ಲೇ (Child in cab) ಬಿಟ್ಟು ಮನೆಗೆ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಘಟನೆ ಏನು?
ಶನಿವಾರ (ಫೆ.15) ರಾತ್ರಿ ಕುಟುಂಬವೊಂದು ಇಸ್ಕಾನ್ ದೇವಸ್ಥಾನದಿಂದ ಪೊನ್ನಪ್ಪ ಲೇಔಟ್ನಲ್ಲಿರುವ ತಮ್ಮ ಮನೆಗೆ ಕ್ಯಾಬ್ ಬುಕ್ ಮಾಡಿಕೊಂಡಿದ್ದರು. ಈ ವೇಳೆ ಮಗುವು ನಿದ್ರಿಸುತ್ತಿರುವುದನ್ನು ಕುಟುಂಬಸ್ಥರು ಗಮನಿಸದೆ, ಮನೆ ಬಂದ ಕೂಡಲೇ ಇಳಿದು ಹೋಗಿದ್ದಾರೆ.
ಇದಾದ ಕೆಲ ಹೊತ್ತಿನ ಬಳಿಕ ಮಗು ಕಾಣದಿರುವ ವಿಷಯ ಗಮನಕ್ಕೆ ಬಂದಿದ್ದು, ಆತಂಕಗೊಂಡ ಪೋಷಕರು ಕ್ಯಾಬ್‌ನಲ್ಲೇ ಬಿಟ್ಟು ಬಂದಿರುವುದಾಗಿ ನೆನಪಿಸಿಕೊಂಡಿದ್ದಾರೆ. ನಂತರ ಕಾಲ್ ಸೆಂಟರ್ ಮೂಲಕ ಕ್ಯಾಬ್ ಚಾಲಕನನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಪ್ರಯತ್ನ ವಿಫಲವಾದಾಗ ತುರ್ತು ಸಹಾಯವಾಣಿ ನಮ್ಮ 112 ಗೆ ಕರೆ ಮಾಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಕ್ಯಾಬ್ ಪತ್ತೆ ಹಚ್ಚಿ ಮಗು ಇರುವುದನ್ನು ಖಾತ್ರಿ ಪಡೆದುಕೊಂಡಿದ್ದು, ಚಾಲಕನಿಗೆ ಮಗುವಿನ ಮನೆಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. ಅವರೆಲ್ಲರ ಕೋರಿಕೆಯ ಮೇರೆಗೆ ಬಾಲಕನನ್ನು ಡ್ರೈವರ್ ಸುರಕ್ಷಿತವಾಗಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ.
ಭವಿಷ್ಯದಲ್ಲಿ ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ, ಅದರಲ್ಲೂ ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವಾಗ ಜಾಗರೂಕರಾಗಿಬೇಕೆಂದು ಪೊಲೀಸರು ಸೂಚನೆ ನೀಡಿದ್ದಾರೆ (ಏಜೆನ್ಸೀಸ್).