ಬೆಂಗಳೂರು: ಇಲ್ಲಿನ ಹೊರವಲಯದಲ್ಲಿರುವ ಹೆಬ್ಬಗೋಡಿ ಸಮೀಪದ ಅನಂತನಗರದಲ್ಲಿ ರಸ್ತೆಗುಂಡಿಯಿಂದಾಗಿ(
) ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ಕೇರಳ ಮೂಲದ 32 ವರ್ಷದ ಮೇಧಾ ಪೃಥ್ವಿರಾಜ್ ಮೃತ ಮಹಿಳೆ ಎಂದು ಗುರುತಿಸಲಾಗಿದೆ.
ಏನಾಗಿತ್ತು?
ಮೇಧಾ ಅವರು ಉದ್ಯೋಗಿಗಳ ಭವಿಷ್ಯನಿಧಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ಬೆಳಿಗ್ಗೆ ಸುಮಾರು 9 ಗಂಟೆಗೆ ಕಚೇರಿಗೆ ತನ್ನ, ಸ್ನೇಹಿತ ಅಜಯ್ ಗುರು ಜೊತೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ವರ್ಷಗಳಿಂದ ಡಾಂಬರು ಕಾಣದೆ, ಗುಂಡಿಗಳಿಂದ ತುಂಬಿರುವ ರಸ್ತೆಯಲ್ಲಿ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ. ಈ ವೇಳೆ ಹಿಂದೆಯಿಂದ ಬಂದ ಮೇಧಾ ಅವರಿದ್ದ ಗಾಡಿ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದಿದೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ಗಾಡಿ, ಮೇಧಾ ಅವರ ಕತ್ತಿನ ಮೇಲೆ ಹರಿದಿದೆ ಎನ್ನಲಾಗಿದೆ.
ಘಟನಾ ಸ್ಥಳದಲ್ಲೇ ಸಾವು
ತೀವ್ರ ಗಾಯಗೊಂಡ ಮೇಧಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿತ್ತು. ಆದರೆ, ಅವರು ಘಟನಾ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದರು ಎನ್ನಲಾಗಿದೆ. ಅವರ ಮೃತದೇಹವನ್ನು ಸಂತ ಜೋಸೆಫರ ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಆನಂತರ ಕೇರಳದ ಸ್ವಂತ ನಿವಾಸಕ್ಕೆ ಸಾಗಿಸಲಾಗುತ್ತದೆ ಎಂದು ಹೆಬ್ಬಗೋಡಿ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಸ್ಥಳೀಯರ ಪ್ರತಿಭಟನೆ
ಅಪಘಾತಕ್ಕೆ ನಿಖರವಾದ ಕಾರಣ ಏನು ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಇಲ್ಲಿನ ಸ್ಥಳೀಯರು ಇದು ರಸ್ತೆ ಗುಂಡಿಯಿಂದಲೇ ಆದ ಅಪಘಾತ. ಗುಂಡಿ ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡ ಪರಿಣಾಮ ಜೀವ ಬಲಿಯಾಗಿದೆ ಎಂದು ಪ್ರತಿಭಟನೆ ನಡೆಸಿದ್ದಾರೆ.
ದೂರು ದಾಖಲು
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೇಧಾ ಅವರ ಸಾವಿಗೆ ಕಾರಣ ಏನೂ ಎಂಬುದರ ನಿಖರ ಮಾಹಿತಿಯನ್ನು ಪತ್ತೆ ಹಚ್ಚುತ್ತಿದ್ದೇವೆ. ಗುಂಡಿಯಿಂದ ಸಮಸ್ಯೆಯುಂಟಾಗಿದ್ದಾ ಅಥವಾ ಬೈಕ್ ಓಡಿಸುವಾಗ ಉಂಟಾದ ಯಾಂತ್ರಿಕ ದೋಷವೋ ಎಂದು ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಮುಂದುವರೆದ ಸಮಸ್ಯೆ
ಬೆಂಗಳೂರಿನ ಪ್ರತಿ ಗಲ್ಲಿಗಳಲ್ಲಿಯೂ ರಸ್ತೆಗುಂಡಿಗಳಿವೆ. ಈ ಬಗ್ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಗಮನ ಹರಿಸಬೇಕು ಎಂದು ಆಗಾಗ್ಗೆ ಮನವಿ ಮಾಡಿಕೊಳ್ಳಲಾಗುತ್ತದೆ. ಜೊತೆಗೆ ಎಕ್ಸ್ನಲ್ಲಿ ಟೀಕೆ ಮಾಡಲಾಗುತ್ತದೆ. ಇಷ್ಟಾಗಿಯೂ, ಸಮಸ್ಯೆ ಮುಂದುವರೆದ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).