ಬೆಂಗಳೂರು: ರಸ್ತೆಗಳಲ್ಲಿನ ಗುಂಡಿಗಳು ವಾಹನ ಸವಾರರಿಗೆ ನಿರಂತರ ಕಿರಿಕಿರಿ ಉಂಟುಮಾಡುವುದರ ಜೊತೆಗೆ ಅಪಘಾತಗಳಿಗೂ ಕಾರಣವಾಗುತ್ತವೆ. ಈ ದಿನನಿತ್ಯದ ಸಮಸ್ಯೆಗೆ ತಾಂತ್ರಿಕ ಪರಿಹಾರ ಕಂಡುಕೊಂಡಿರುವ ಬೆಂಗಳೂರಿನ ಎಂಜಿನಿಯರ್ ಗೌರವ್ ಸೇನ್, ರಸ್ತೆ ಗುಂಡಿಗಳನ್ನು ಗುರುತಿಸಿ, ಅವುಗಳ ದುರಸ್ತಿಗೆ ಹೊಣೆಗಾರರಾದ ಅಧಿಕಾರಿ ಅಥವಾ ಗುತ್ತಿಗೆದಾರರನ್ನು ಪತ್ತೆ ಹಚ್ಚುವ ಹೊಸ ಕೃತಕ ಬುದ್ಧಿಮತ್ತೆ ಆಧಾರಿತ (AI Technology) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಗೌರವ್ ಸೇನ್ ತಮ್ಮ ಕಾರಿನಲ್ಲಿ ಡ್ಯಾಶ್‌ಕ್ಯಾಮ್, ಜಿಪಿಎಸ್ (GPS) ಹಾಗೂ ಆಕ್ಸಿಲರೋಮೀಟರ್ ಅಳವಡಿಸಿಕೊಂಡು ಚಾಲನೆ ಮಾಡುವಾಗ ರಸ್ತೆಯ ದತ್ತಾಂಶವನ್ನು ಸಂಗ್ರಹಿಸುತ್ತಾರೆ. ಇದಾದ ಬಳಿಕ Codex ನೆರವಿನಿಂದ ಅಭಿವೃದ್ಧಿಪಡಿಸಿದ ಆ್ಯಪ್ ಮೂಲಕ AI ವಿಷನ್ ಮಾಡೆಲ್ ಬಳಸಿ ರಸ್ತೆ ಗುಂಡಿಗಳನ್ನು ನಿಖರವಾಗಿ ಪತ್ತೆಹಚ್ಚುತ್ತಾರೆ. ಆದಾಗ್ಯೂ, ದೂರದಿಂದ ಸ್ಪಷ್ಟವಾಗಿ ಕಾಣಿಸದ ಅಥವಾ ಸ್ಪೀಡ್ ಬ್ರೋಕರ್ಗಳಂತೆ ಗೊಂದಲ ಉಂಟುಮಾಡುವ ಗುಂಡಿಗಳನ್ನು ಸಹ ಈ ಸಿಸ್ಟಮ್ ಸುಲಭವಾಗಿ ಪತ್ತೆ ಮಾಡುತ್ತದೆ.
ಗುತ್ತಿಗೆದಾರರ ಪತ್ತೆ ಹಾಗೂ ನೆರವು
ಗುಂಡಿಗಳನ್ನು ಗುರುತಿಸುವುದು ಮಾತ್ರವಲ್ಲದೆ, ಆ ರಸ್ತೆಯ ನಿರ್ವಹಣೆ ಯಾರದ್ದು ಎಂಬುದನ್ನು ಪತ್ತೆಹಚ್ಚಲು ಸೇನ್ ಈ ಆ್ಯಪ್‌ಗೆ ಸರ್ಕಾರ ಹೊರಡಿಸಿದ ಸುಮಾರು 2,900 ಗುತ್ತಿಗೆ ಒಪ್ಪಂದಗಳ ಮಾಹಿತಿಯನ್ನು ಸೇರಿಸಿದ್ದಾರೆ. ರಸ್ತೆಯು ವಾರಂಟಿ ಅವಧಿಯಲ್ಲಿದ್ದರೆ, ಸರ್ಕಾರಕ್ಕೆ ಹೆಚ್ಚುವರಿ ವೆಚ್ಚವಿಲ್ಲದೇ ಸಂಬಂಧಪಟ್ಟ ಗುತ್ತಿಗೆದಾರನೇ ಅದನ್ನು ದುರಸ್ತಿ ಮಾಡಬೇಕಾಗುತ್ತದೆ.
ಈ ವಿಧಾನವು ಕೇವಲ 4 ಸೆಕೆಂಡುಗಳಲ್ಲಿ ರಸ್ತೆ ಗುಂಡಿಯ ಭಾವಚಿತ್ರ, ನಿಖರವಾದ ಸ್ಥಳ, ಟೆಂಡರ್ ಸಂಖ್ಯೆ ಹಾಗೂ ಜವಾಬ್ದಾರಿಯುತ ಅಧಿಕಾರಿಯ ವಿವರಗಳನ್ನೊಳಗೊಂಡ ವರದಿಯನ್ನು ಸಿದ್ಧಪಡಿಸುತ್ತದೆ. ಗೌರವ್ ಅವರು ತಮ್ಮ ಕಚೇರಿಯ ಹಾದಿಯಲ್ಲಿ ಈ ವ್ಯವಸ್ಥೆಯನ್ನು ಪರೀಕ್ಷಿಸಿದಾಗ ಒಟ್ಟು 12 ಗುಂಡಿಗಳು ಪತ್ತೆಯಾಗಿದ್ದು, ನಾಗರಿಕ ಸಂಸ್ಥೆಗಳಿಗೆ ದೂರು ನೀಡಲು ಅಗತ್ಯ ದಾಖಲೆಗಳು ದೊರೆತಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರಿಂದ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರು ನೈಜ ಜೀವನದ ಬಗ್‌ಗಳನ್ನು ಸರಿಪಡಿಸುವ ಪ್ರಯತ್ನ ಹಾಗೂ ಉತ್ತಮ ಕಲ್ಪನೆ ಮತ್ತು ಅನುಷ್ಠಾನ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ (ಏಜೆನ್ಸೀಸ್).