Bengaluru emerges as India's most tea-obsessed city after Mumbai, Hyderabad  
ರಾಜ್ಯ

ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು; ಈಗ ಭಾರತದ 'ಚಹಾ' ರಾಜಧಾನಿ..Bengaluru tea lovers

ಪ್ರಮುಖ ಮುಖ್ಯಾಂಶಗಳು

  • ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿದ ಬೆಂಗಳೂರು ಈಗ ಭಾರತದ ಟೀ ರಾಜಧಾನಿ
  • ಜೂನ್ 2025 ರಿಂದ ಜೂನ್ 2026 ನಡೆಸಿದ ವರದಿಯಿಂದ ಮಾಹಿತಿ ಬಹಿರಂಗ
  • ಮುಂಬೈ ಮತ್ತು ಹೈದರಾಬಾದ್ ನಗರಗಳು ಚಹಾಕ್ಕೆ ಭಾರೀ ಫೇಮಸ್‌
ಸಾಮಾನ್ಯವಾಗಿ ಕರ್ನಾಟಕದ ದಕ್ಷಿಣ ಭಾಗದಲ್ಲಿರುವ ಮೈಸೂರು, ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ನಾನಾ ಜಿಲ್ಲೆಯ ಜನರು ಕಾಫಿ ಪ್ರಿಯರು. ಬೆಳಗೆದ್ದ ಕೂಡಲೇ ಕಾಫಿಯ ಘಮಲು ಮೂಗಿನ ಹೊಳ್ಳೆ ಮೂಲಕ ದೇಹಕ್ಕೆ ಸೇರುವ ಹೊತ್ತಿಗೆ ಫ್ರೆಶ್ ಆಗಿ ಪೇಪರ್​ ಹಿಡಿದು ಕಾಫಿ ಸವಿಯುತ್ತಾ ಪ್ರಕೃತಿ ನೋಡುವುದರ ಮಜಾನೆ ಬೇರೆ. ಆದರೆ ಈಗ ಅಚ್ಚರಿ ಪಡಬೇಕಾದ ವಿಚಾರವೊಂದು ಬೆಳಕಿಗೆ ಬಂದಿದೆ. ಬೆಂಗಳೂರು ಈಗ ಕಾಫಿ ಪ್ರಿಯರ ನಾಡಲ್ಲ ಟೀ ಪ್ರಿಯರ ರಾಜಧಾನಿಯಾಗಿ ಹೊರಹೊಮ್ಮಿದೆ.
ಹೌದು ನೀವು ಇದನ್ನು ನಂಬಲೇ ಬೇಕು. ಬೆಂಗಳೂರಿನಲ್ಲಿ ಕಾಫಿಗಿಂತ ಟೀ ಪ್ರಿಯರು ಹೆಚ್ಚಾಗುತ್ತಿದ್ದಾರೆ ಎಂದು ವರದಿಯೊಂದರಿಂದ ಬೆಳಕಿಗೆ ಬಂದಿದೆ. ಚಳಿ ಇರಲಿ, ಮಳೆ ಇರಲಿ, ಬಿಸಿಲೇ ಇರಲಿ ಅಥವಾ ತಲೆನೋವು ಇರಲಿ ಟೀ ಬೇಕು. ಬೆಳಗೆದ್ದ ಕೂಡಲೇ ಚಹ ಜೊತೆಗೆ ಪತ್ರಿಕೆ ಓದಬೇಕು. ಸ್ಟ್ರೆಸ್ ಫೀಲ್​ ಆಗ್ತಿದ್ರೆ ಟೀ ಬೇಕು. ಬೋರ್​ ಆಗುತ್ತಿದ್ದರೂ ಟೀ ಬೇಕು. ಖುಷಿಯಾಗಿದ್ದರೂ ಟೀ ಬೇಕು.. ಇಂತಹ ರೀಲ್ಸ್​ಗಳು ಇತ್ತೀಚೆಗೆ ಜಾಸ್ತಿಯಾಗಿದೆ, ಇದು ಸತ್ಯ ಕೂಡ.

ಟೀ ಪ್ರಿಯರಾದ ಬೆಂಗಳೂರಿಗರು

ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ಕಳೆದ ಒಂದು ವರ್ಷದಲ್ಲಿ (ಜೂನ್ 2025 ರಿಂದ ಜೂನ್ 2026) ದೇಶದ 130ಕ್ಕೂ ಹೆಚ್ಚು ನಗರಗಳಲ್ಲಿ ನಡೆದ ಟೀ ಆರ್ಡರ್‌ಗಳನ್ನು ವಿಶ್ಲೇಷಿಸಿ ವರದಿಯೊಂದನ್ನು ನೀಡಿದೆ. ಅದರ ಪ್ರಕಾರ ಭಾರತದಲ್ಲಿ ಕಾಫಿ ಪ್ರಿಯರಿಗಿಂತ ಟೀ ಪ್ರಿಯರೇ ಹೆಚ್ಚಿದ್ದಾರೆ. ಆದರೆ, ಈ 'ಟೀ ಪ್ರೇಮಿ'ಗಳ ಪೈಕಿ ನಮ್ಮ ಬೆಂಗಳೂರಿಗರೇ ಇಡೀ ದೇಶದಲ್ಲಿ ಮುಂದಿದ್ದಾರೆ!

ಭಾರತದ ಟೀ ರಾಜಧಾನಿಯಾದ ಬೆಂಗಳೂರು

ಮುಂಬೈ ಮತ್ತು ಹೈದರಾಬಾದ್ ನಗರಗಳು ಚಹಾಕ್ಕೆ ಭಾರೀ ಫೇಮಸ್‌. ಆದರೆ ಇವೆರಡೂ ನಗರಗಳನ್ನು ಹಿಂದಿಕ್ಕಿರುವ ನಮ್ಮ ಉದ್ಯಾನ ನಗರಿ ಭಾರತದ ಅತಿ ಹೆಚ್ಚು ಚಹಾ ಕುಡಿಯುವವರ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರಿನ ನಂತರದ ಸ್ಥಾನಗಳಲ್ಲಿ ಮುಂಬೈ ಮತ್ತು ಹೈದರಾಬಾದ್ ಇವೆ. ಇನ್ನು ವಾರದ 7 ದಿನಗಳಲ್ಲಿ 'ಭಾನುವಾರ'ದಂದು ಅತಿ ಹೆಚ್ಚು ಟೀ ಆರ್ಡರ್ ಆಗುತ್ತಿದ್ದು, ನಂತರದ ಸ್ಥಾನದಲ್ಲಿ ಶನಿವಾರ ಮತ್ತು ಗುರುವಾರ ಇವೆ.

ಮೆಟ್ರೋ ನಗರಗಳಲ್ಲೂ ಟೀ ಕ್ರೇಜ್

ಮೆಟ್ರೋ ನಗರಗಳು ಮಾತ್ರವಲ್ಲ, ಸಣ್ಣ ನಗರಗಳಲ್ಲೂ ಇನ್‌ಸ್ಟಾಮಾರ್ಟ್ ಮೂಲಕ ಟೀ ಆರ್ಡರ್ ಮಾಡುವುದು ಹೆಚ್ಚಾಗಿದೆ. ಒಡಿಶಾದ ಭುವನೇಶ್ವರ ನಗರವು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ 'ಟೀ ಸಿಟಿ'ಯಾಗಿದ್ದು, ಇಲ್ಲಿನ ಆರ್ಡರ್‌ಗಳಲ್ಲಿ ಶೇ. 64ರಷ್ಟು ಏರಿಕೆ ಕಂಡುಬಂದಿದೆ. ಭುವನೇಶ್ವರದ ನಂತರ ತಿರುವನಂತಪುರಂ ಮತ್ತು ಕೊಚ್ಚಿ ನಗರಗಳಿವೆ, (ಏಜೆನ್ಸೀಸ್).