Bengaluru Couple Kills 11-Month-Old Baby During Fight 
ರಾಜ್ಯ

ದಂಪತಿ ಜಗಳಕ್ಕೆ ಬಲಿಯಾದ 11 ತಿಂಗಳ ಕಂದಮ್ಮ: ನೆಲಕ್ಕೆ ಕುಕ್ಕಿ, ಒದ್ದು ಕೊಲೆ ಮಾಡಿ ಆಕಸ್ಮಿಕ ಸಾವು ಎಂದು ಹೈಡ್ರಾಮಾ..Bengaluru

ಬೆಂಗಳೂರು: ಗಂಡ ಹೆಂಡತಿ ಜಗಳದ ಮಧ್ಯೆ 11 ತಿಂಗಳ ಕಂದಮ್ಮನನ್ನು ನೆಲಕ್ಕೆ ಕುಕ್ಕಿ ಕೊಲೆ ಮಾಡಿ, ಬಳಿಕ ಅದನ್ನೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ ತಂದೆ ಶೇಖಪ್ಪ(22) ಬಂಧಿಸಿದ್ದು, ತಾಯಿ ವಿಜಯಲಕ್ಷ್ಮಿಗಾಗಿ ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪೂರ್ವ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತಗನೂರು ಗ್ರಾಮದಲ್ಲಿ ಜೂನ್ 9 ರಂದು ಈ ಭೀಕರ ಘಟನೆ ನಡೆದಿದೆ.
ಯಾದಗಿರಿ ಮೂಲದವರಾದ ವಿಜಯಲಕ್ಷ್ಮಿ, ಶೇಖಪ್ಪಗೆ ಇಬ್ಬರು ಮಕ್ಕಳಿದ್ದಾರೆ. ಜೂನ್ 9 ರಂದು ದಂಪತಿ ಮಧ್ಯೆ ನಡೆದ ಜಗಳದಲ್ಲಿ ಎರಡನೇ ಮಗು ರೇಣುಕಾಳನ್ನು ಕೊಲೆ ಮಾಡಿದ ಬಳಿಕ ಪೋಷಕರೇ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು.

ಆ ವೇಳೆ ತಂದೆ ಶೇಖಪ್ಪ ಹೇಳಿದ್ದು ಹೀಗೆ,

ಪತ್ನಿ ವಿಜಯಲಕ್ಷ್ಮಿ ಮಗುವಿಗೆ ಹಾಲುಣಿಸುವಾಗ ನಿದ್ರೆಗೆ ಜಾರಿದ್ದಾಳೆ, ಈ ವೇಳೆ ಮಗು ಮಂಚದಿಂದ ಕೆಳಗೆ ಬಿದ್ದು ಮೃತಪಟ್ಟಿದೆ. ತಕ್ಷಣ ಮಗುವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದ್ದರು ಎಂದು ತಂದೆ ಶೇಕಪ್ಪ ಪೊಲೀಸರಿಗೆ ತಿಳಿಸಿದ್ದ. ತಂದೆಯ ದೂರಿನ ಮೇರೆಗೆ ಪೊಲೀಸರು ಇದನ್ನು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಮರಣೋತ್ತರ ಪರೀಕ್ಷೆಯಿಂದ ಅಸಲಿ ಕತೆ ಬಯಲು

ಜೂನ್​22ರಂದು ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆಯ ಸಿಕ್ಕಿತ್ತು. ಮಗುವಿನ ದೇಹ ಮತ್ತು ಮುಖ, ಎದೆ, ಕಾಲುಗಳು ಮತ್ತು ಗುಪ್ತಾಂಗಗಳೂ ಸೇರಿದಂತೆ ಹಲವು ಕಡೆ ತೀವ್ರ ಗಾಯಗಳಾಗಿರುವುದು ಪತ್ತೆಯಾಗಿದೆ. ಅತಿಯಾದ ಆಂತರಿಕ ರಕ್ತಸ್ರಾವ ಹಾಗೂ ಉಸಿರಾಟದ ತೊಂದರೆಯಿಂದ ಮಗು ಸಾವನ್ನಪ್ಪಿದೆ ಎಂದು ವರದಿ ಬಹಿರಂಗಪಡಿಸಿದೆ.
ಇಷ್ಟೇ ಅಲ್ಲದೆ ಮನೆಯನ್ನು ಪರಿಶೀಲಿಸಿದ ಪೊಲೀಸರಿಗೆ ಮಂಚದ ಎತ್ತರ ಮಗು ಮೃತಪಡುವಷ್ಟು ಇಲ್ಲ ಎನ್ನುವುದು ತಿಳಿದುಬಂತು. ಮಂಚ ಎತ್ತರ ಕೇವಲ ಎರಡು ಅಡಿ ಮಾತ್ರ ಅಷ್ಟು ಕಡಿಮೆ ಎತ್ತರದಿಂದ ಬಿದ್ದರೆ ಹೇಗೆ ಮಗು ಸಾಯುತ್ತೆ ಎನ್ನುವ ಅನುಮಾನ ಶುರುವಾಯಿತು. ಹೀಗಾಗಿ ಇಬ್ಬರನ್ನು ಸ್ಟೇಷನ್​ಗೆ ಕರೆಸಿ ವಿಚಾರಣೆ ನಡೆಸಿದಾಗ, ಆರೋಪಿಗಳು ತಪ್ಪನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಜೂನ್ 9 ರ ಮಧ್ಯಾಹ್ನ ಶೇಕಪ್ಪ ಊಟಕ್ಕೆ ಮನೆಗೆ ಬಂದಾಗ ದಂಪತಿ ನಡುವೆ ಜೋರು ಜಗಳ ಆರಂಭವಾಗಿದೆ. ಆಗ ಮಗು ಅಳುತ್ತಿತ್ತು. ಇದೇ ಸಿಟ್ಟಲ್ಲಿ ಕಾಲಿನಿಂದ ಒದ್ದಿದ್ದಾಳೆ. ಪತಿಯೂ ಮಗುವನ್ನು ನೆಲಕ್ಕೆ ಕುಕ್ಕಿದ್ದಾನೆ ಇದರಿಂದಾಗಿ ಮಗುವಿನ ಆಂತರಿಕ ಅಂಗಾಂಗಗಳಿಗೆ ತೀವ್ರ ಪೆಟ್ಟಾಗಿ ಮಗು ಕೊನೆಯುಸಿರೆಳೆದಿದೆ.

ಅಕ್ರಮ ಸಂಬಂಧಕ್ಕೆ ಜಗಳ

ಸ್ಥಳೀಯ ಸಾಕ್ಷಿಗಳನ್ನು ವಿಚಾರಣೆ ನಡೆಸಿದಾಗ ದಂಪತಿಗಳು ಪ್ರತಿದಿನ ಗಲಾಟೆ ಮಾಡಿಕೊಳ್ಳುತ್ತಿದ್ದರು ಎಂಬ ವಿಷಯ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ತಾಯಿ ವಿಜಯಲಕ್ಷ್ಮಿಗೆ ನೆರೆಹೊರೆಯವರೊಂದಿಗೆ ಅಕ್ರಮ ಸಂಬಂಧವಿತ್ತು ಮತ್ತು ಆಕೆಗೆ ತನ್ನ ಮಗುವಿನ ಮೇಲೆ ಯಾವುದೇ ಪ್ರೀತಿ-ಮಮತೆ ಇರಲಿಲ್ಲ ಎನ್ನುವುದು ತನಿಖೆಯಿಂದ ಬಯಲಾಗಿದೆ.
ಸದ್ಯ ಪೊಲೀಸರು ಮಗುವಿನ ತಂದೆ ಶೇಕಪ್ಪ ಮತ್ತು ತಾಯಿ ವಿಜಯಲಕ್ಷ್ಮಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 103(1) ಮತ್ತು ಸೆಕ್ಷನ್ 3(5) ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).