- ಲಿವ್ಇನ್ ರಿಲೇಷನ್ ಶಿಪ್ ಬೇಡ ಎಂದಿದ್ದಕ್ಕೆ ತಂದೆ, ತಾಯಿ ಹಾಗೂ ತಂಗಿಯನ್ನು ಕೊಂದ ಯುವತಿ
- ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ
- ಪ್ರಿಯಕರನ ಜೊತೆ ಸೇರಿ ಹೆತ್ತವರು ಹಾಗೂ ತನ್ನ ತಂಗಿಯನ್ನು ಕೊಂದ ಯುವತಿ ನಾಪತ್ತೆ
ಬೆಂಗಳೂರು: ಲಿವ್ಇನ್ ರಿಲೇಷನ್ ಶಿಪ್ ವಿರೋಧಿಸಿದ್ದಕ್ಕೆ ಹೆತ್ತವರು ಹಾಗೂ ಒಡ ಹುಟ್ಟಿದ ತಂಗಿಯನ್ನೇ ಕೊಂದ ಘಟನೆ ಕೆ.ಆರ್. ಪುರಂ ಸಮೀಪದ ಸಿಗೇಹಳ್ಳಿಯ ಡಾಮ್ನಿಕದ ಲೇಔಟ್‌ನಲ್ಲಿರುವ ಸಾಯಿ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ನಡೆದಿದೆ.
ಮೃತರನ್ನು ಸೋಮಸುಂದರ್ (55), ಅವರ ಪತ್ನಿ ಮುತ್ತುಲಕ್ಷ್ಮಿ (48) ಮತ್ತು ಅವರ ಕಿರಿಯ ಮಗಳು ಸುಪ್ರಿಯಾ (20) ಎಂದು ಗುರುತಿಸಲಾಗಿದೆ. ಮಗಳು ಶ್ವೇತಾ (24) ಮತ್ತು ಆಕೆಯ ಪ್ರಿಯಕರ ಕೆನೆತ್ ಸೋಮವಾರ ರಾತ್ರಿ 10 ಗಂಟೆಗೆ ಚಾಕುವಿನಿಂದ ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸೀಗೆಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಕೃತ್ಯ ನಡೆದಿದೆ.
ಶ್ವೇತಾ ಕೆನೆತ್ ಮೂಲತಃ ತಮಿಳುನಾಡು ಮೂಲದ ಸೋಮ ಸುಂದರ್ ಕುಟುಂಬ, 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿತ್ತು. ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪನಿಯಲ್ಲಿ ಸೋಮಸುಂದರ್ ಉದ್ಯೋಗಿಯಾಗಿ ದ್ದರು. ಪತ್ನಿ ಲಕ್ಷ್ಮೀ ಗೃಹಿಣಿ. ದಂಪತಿಗೆ ಶ್ವೇತಾ ಮತ್ತು ಸುಪ್ರಿಯಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ವೈಟ್ ಫೀಲ್ಡ್ ಸಮೀಪದ ನೆಲ್ಲೂರುಹಳ್ಳಿಯಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೆನತ್ ಜತೆ ಲವ್, ಲಿವ್ಇನ್ ರಿಲೇಷನ್ಶಿಪ್
ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಆರೋಪಿತೆ ಶ್ವೇತಾ, 3 ವರ್ಷಗಳಿಂದ ಸಹಪಾಠಿ ಕೆನೆತ್‌ನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಸೋಮಸುಂದರ್, ಪುತ್ರಿಗೆ ಹಲವು ಬಾರಿ ಬುದ್ಧಿವಾದ ಹೇಳಿದ್ದರು. ತಂದೆಯ ಮಾತು ಕೇಳದ ಶ್ವೇತಾ, 2 ವರ್ಷಗಳಿಂದ ಮನೆ ಬಿಟ್ಟು ಪೇಯಿಂಗ್ ಗೆಸ್ಟ್‌ನಲ್ಲಿ ವಾಸವಾಗಿದ್ದಳು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಿಯಕರ ಕೆನೆತ್ ಕೂಡ ಬೇರೊಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಎರಡು ತಿಂಗಳಿಂದ ಸೀಗೆಹಳ್ಳಿಯಲ್ಲಿರುವ ಅಪಾರ್ಟ್ ಮೆಂಟ್‌ನಲ್ಲಿ ಫ್ಲ್ಯಾಟ್‌ವೊಂದನ್ನು ಲೀಸ್ಗೆ ಪಡೆದು ಸಹಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಇಬ್ಬರೂ ಕೆಲಸ ಬಿಟ್ಟಿದ್ದರು ಎನ್ನಲಾಗಿದೆ.
ತಾಯಿ ಹೆಸರಲ್ಲಿ ಸಾಲ
ಮನೆ ಬಿಟ್ಟು ಹೋಗಿದ್ದ ಶ್ವೇತಾ, ತನ್ನ ತಾಯಿಯ ಹೆಸರಿನಲ್ಲಿ 32 ಲಕ್ಷ ರೂ. ಸಾಲ ಮಾಡಿಕೊಂಡಿದ್ದಳು. ಜತೆಗೆ ಚಿನ್ನಾಭರಣ ಅಡವಿಟ್ಟಿದ್ದಳು. ಸರಿಯಾಗಿ ಇಎಂಐ ಪಾವತಿ ಮಾಡದ ಹಿನ್ನೆಲೆಯಲ್ಲಿ ತಾಯಿ ಲಕ್ಷ್ಮೀಗೆ ನೋಟಿಸ್‌ಗಳು ಬಂದಿದ್ದವು. ಅಲ್ಲದೆ, ಆಸ್ತಿಯಲ್ಲಿ ಪಾಲು ಕೊಡುವಂತೆ ತಂದೆಗೆ ಶ್ವೇತಾ ಒತ್ತಾಯಿಸುತ್ತಿದ್ದಳು ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಕೊಲೆ ಮಾಡಿದ ಬಳಿಕ ಶ್ವೇತಾ ಮತ್ತು ಕೆನೆತ್, ಪೊಲೀಸರಿಗೆ ಸಿಕ್ಕಿ ಬೀಳುವ ಆತಂಕದಲ್ಲಿ ಫ್ಲ್ಯಾಟ್‌ನಿಂದ ಅಪಾರ್ಟ್‌ಮೆಂಟ್ ಟೆರೇಸ್ ಮೇಲೆ ಹೋಗಿ, ಮತ್ತೊಂದು ಅಪಾರ್ಟ್ ಮೆಂಟ್ ಗೆ ಜಿಗಿದು ಪರಾರಿ ಯಾಗಿದ್ದಾರೆ. ಆರೋಪಿಗಳು ಕಟ್ಟಡದಿಂದ ಹೊರಗಡೆ ಹೋಗುತ್ತಿರುವ ದೃಶ್ಯ, ಸಮೀಪದ ರಸ್ತೆಯೊಂದರಲ್ಲಿ ಆತುರದಿಂದ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ.
ಜಗಳ ಕೊಲೆಯಲ್ಲಿ ಅಂತ್ಯ
ಸೋಮವಾರ ರಾತ್ರಿ 7 ಗಂಟೆಗೆ ಶ್ವೇತಾ ವಾಸವಿದ್ದ ಫ್ಲ್ಯಾಟ್‌ಗೆ ಸೋಮಸುಂದರ್, ಲಕ್ಷ್ಮೀ ಹಾಗೂ ಸುಪ್ರಿಯಾ ಹೋಗಿದ್ದರು. ತಾಯಿ ಹೆಸರಲ್ಲಿ 32 ಲಕ್ಷ ರೂ. ಸಾಲ ಮಾಡಿರುವುದು ಹಾಗೂ ಕೆನೆತ್ ಜತೆ ಲಿವಿಂಗ್ ಟುಗೆದರ್‌ನಲ್ಲಿರುವುದನ್ನು ಪ್ರಶ್ನಿಸಿದ್ದರು. ಇದೇ ವಿಚಾರವಾಗಿ ತಂದೆ-ತಾಯಿ ಹಾಗೂ ಪುತ್ರಿಯ ನಡುವೆ ಜಗಳ ನಡೆದಿದೆ. ಸೋಮಸುಂದರ್ ಹಾಗೂ ಸುಪ್ರಿಯಾ ಮನೆಯಿಂದ ಹೊರಬಂದಿದ್ದಾರೆ. ಈ ವೇಳೆ ಮನೆಯಲ್ಲಿದ್ದ ತಾಯಿ ಲಕ್ಷ್ಮೀ ಅವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಗೆ 15ಕ್ಕೂ ಹೆಚ್ಚು ಬಾರಿ ಶ್ವೇತಾ ಚಾಕುವಿನಿಂದ ಇರಿದಿದ್ದಾಳೆ.
ಪತ್ನಿಯ ಚೀರಾಟ ಕೇಳಿಸಿಕೊಂಡ ಸೋಮಸುಂದರ್, ತಕ್ಷಣ ಮನೆಯೊಳಗೆ ಬಂದಿದ್ದಾರೆ. ಆಗ ಅವರ ಮೇಲೂ ಶ್ವೇತಾ ಮತ್ತು ಕೆನೆತ್ ಇಬ್ಬರೂ ಸೇರಿ ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ. ಅವರಿಂದ ತಪ್ಪಿಸಿಕೊಂಡ ಸೋಮಸುಂದರ್, ಚೀರಿಕೊಂಡು ಮನೆಯಿಂದ ಹೊರ ಓಡಿಬಂದಿದ್ದಾರೆ. ಹೊರಗಿದ್ದ ಸುಪ್ರಿಯಾ ಮನೆ ಒಳಗೆ ಹೋಗಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯನ್ನು ಕಂಡು ಕೆರಳಿದ ಸುಪ್ರಿಯಾ, ಶ್ವೇತಾ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಆಗ ಶ್ವೇತಾ ಮತ್ತು ಕೆನೆತ್ ಇಬ್ಬರೂ ಸುಪ್ರಿಯಾಳಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.
ಕೂಗಾಟ ಕೇಳಿಸಿಕೊಂಡ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್, ಹೊಯ್ಸಳ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಕೊನೆಯುಸಿರೆಳೆದಿದ್ದಾರೆ.
ಬದುಕಿನ ನಡುವೆ ಹೋರಾಡುತ್ತಿದ್ದ ಸೋಮಸುಂದರ್ ಅವರು ಸಾವಿಗೀಡಾಗುವ ಮುನ್ನ ಕೆ.ಆರ್.ಪುರ ಠಾಣೆ ಇನ್‌ಸ್ಪೆಕ್ಟರ್ ರಾಮಮೂರ್ತಿ ಅವರಿಗೆ ಇಡೀ ಘಟನೆ ಬಗ್ಗೆ ವಿವರಿಸಿದ್ದಾರೆ. ಪುತ್ರಿ ಶ್ವೇತಾ ಮತ್ತು ಆಕೆಯ ಸ್ನೇಹಿತ ಕೆನೆತ್ ಈ ರೀತಿ ಮಾಡಿದ್ದಾರೆ. ಅವರಿಬ್ಬರೂ ಪ್ರೀತಿಸುತ್ತಿದ್ದರು. ಕೆಲ ತಿಂಗಳಿಂದ ಒಂದೇ ಮನೆಯಲ್ಲಿ ವಾಸವಾಗಿದ್ದರು. ನಮ್ಮ ಹೆಸರಿನಲ್ಲಿ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದು, ಅದನ್ನು ಪ್ರಶ್ನಿಸಿದಾಗ ಈ ರೀತಿ ಮಾಡಿದ್ದಾಳೆ. ಅಲ್ಲದೆ, ಆಸ್ತಿಯಲ್ಲಿ ಪಾಲು ನೀಡುವಂತೆಯೂ ಶ್ವೇತಾ ಒತ್ತಾಯಿಸುತ್ತಿದ್ದಳು ಎಂದು ಸಾಯುವ ಮುನ್ನ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ., (ಏಜೆನ್ಸೀಸ್).