ಬೆಂಗಳೂರು : ಡಾ.ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯವು ಬಿ.ಎಡ್ 4ನೇ ಸೆಮಿಸ್ಟರ್ ಪರೀಕ್ಷೆಗಳು ಮುಕ್ತಾಯಗೊಂಡ ಕೇವಲ ಎರಡು ದಿನಗಳಲ್ಲೇ ಫಲಿತಾಂಶವನ್ನು ಪ್ರಕಟಿಸಿ ದಾಖಲೆ ನಿರ್ಮಿಸಿದೆ.
ನ.12ರಂದು ಪರೀಕ್ಷೆಗಳು ಮುಕ್ತಾಯಗೊಂಡಿದ್ದು, ನ.14ರಂದು ಅಧಿಕೃತವಾಗಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ಒಟ್ಟು 1,699 ವಿದ್ಯಾರ್ಥಿಗಳಿಗೆ ಸೇರಿದ 6,612 ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ವಿಶ್ವವಿದ್ಯಾಲಯವು ಅಲ್ಪಾವಧಿಯಲ್ಲೇ ಪೂರ್ಣಗೊಳಿಸಿದೆ.
ಕರ್ನಾಟಕದಲ್ಲಿ ಖಾಲಿ ಇರುವ 15000 ಶಿಕ್ಷಕರು ಮತ್ತು 683 ಹಾಸ್ಟೆಲ್ ವಾರ್ಡನ್ಗಳ ನೇಮಕಾತಿಗೆ ನ.16 ಕೊನೆಯ ದಿನವಾಗಿದ್ದು, ಈ ಬಾರಿ ಲಿತಾಂಶ ಪಡೆದ ವಿಶ್ವವಿದ್ಯಾನಿಲಯದ ಪದವೀಧರರು ಸಹ ಅರ್ಜಿ ಸಲ್ಲಿಸಲು ಅನುವಾಗುವಂತೆ ಮೌಲ್ಯಮಾಪನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಫಲಿತಾಂಶವನ್ನು ಪ್ರಕಟಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ರಮೇಶ್ ತಿಳಿಸಿದ್ದಾರೆ.
ಅತಿಶೀಘ್ರವಾಗಿ ಫಲಿತಾಂಶವನ್ನು ಪ್ರಕಟಿಸಲು ಸಹಕರಿಸಿದ ಎಲ್ಲಾ ಬಿ.ಎಡ್ ಕಾಲೇಜುಗಳ ಅಧ್ಯಾಪಕರಿಗೆ, ಮೌಲ್ಯಮಾಪನ ಘಟಕದ ಸಂಯೋಜಕರಿಗೆ ಹಾಗೂ ವಿಶ್ವವಿದ್ಯಾನಿಲಯದ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ, ಮೌಲ್ಯಮಾಪನ ಕುಲಸಚಿವರಿಗೆ ಕುಲಪತಿಗಳು ಅಭಿನಂದನೆ ಸಲ್ಲಿಸಿದ್ದಾರೆ.