Bengaluru Cab Driver (ಚಿತ್ರ X)
ಬೆಂಗಳೂರು: ಜನನಿಬಿಡ ಹಾಗೂ ಯಾಂತ್ರಿಕ ಬದುಕಿನ ಬೆಂಗಳೂರು ನಗರದಲ್ಲಿಯೂ ಸಹ ಪ್ರಾಮಾಣಿಕತೆಯ ಕಾರ್ಯಗಳು ಮಾನವೀಯತೆಯ ಮೇಲಿನ ಭರವಸೆಯನ್ನು ಹೆಚ್ಚಿಸುತ್ತವೆ. ಇತ್ತೀಚೆಗೆ ನಗರದ ಕ್ಯಾಬ್ (Bengaluru Cab Driver) ಚಾಲಕನೊಬ್ಬ, ಪ್ರಯಾಣಿಕರೊಬ್ಬರು ವಾಹನದಲ್ಲಿ ಬಿಟ್ಟುಹೋಗಿದ್ದ ಬೆಲೆಬಾಳುವ ಪರ್ಸ್ ಅನ್ನು ಹಲವಾರು ದಿನಗಳ ನಂತರವೂ ಸುರಕ್ಷಿತವಾಗಿ ಹಿಂತಿರುಗಿಸುವ ಮೂಲಕ ವ್ಯಾಪಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಘಟನೆ ಏನು?
ಸಾಮಾಜಿಕ ಜಾಲತಾಣ 'ರೆಡ್ಡಿಟ್' (Reddit) ಬಳಕೆದಾರರೊಬ್ಬರು ತಮಗಾದ ಈ ವಿಶೇಷ ಅನುಭವವನ್ನು ಹಂಚಿಕೊಂಡಿದ್ದಾರೆ. "ನಾಲ್ಕು ದಿನಗಳ ಹಿಂದೆ ನಾನು ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಮರೆತು ಪರ್ಸ್ ಅನ್ನು ವಾಹನದಲ್ಲೇ ಬಿಟ್ಟು ಬಂದಿದ್ದೆ. ಆದರೆ ಮನೆಗೆ ತಲುಪಿದ ನಾಲ್ಕು ದಿನಗಳ ನಂತರವಷ್ಟೇ ಪರ್ಸ್ ಕಳೆದುಹೋಗಿರುವ ವಿಷಯ ನೆನಪಿಗೆ ಬಂತು, ಎಂದು ಅವರು ವಿವರಿಸಿದ್ದಾರೆ.
ತಕ್ಷಣವೇ ಜಾಗರೂಕರಾದ ಪ್ರಯಾಣಿಕರು ತಾವೇ ಕ್ಯಾಬ್ ಚಾಲಕನನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಚಾಲಕನು ವಾಹನವನ್ನು ತಪಾಸಣೆ ಮಾಡಿ ಹುಡುಕಿಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಕೆಲವು ಗಂಟೆಗಳ ನಂತರ ಚಾಲಕನೇ ಪ್ರಯಾಣಿಕರನ್ನು ಮರಳಿ ಸಂಪರ್ಕಿಸಿ ನಿಮ್ಮ ಪರ್ಸ್ ಸಿಕ್ಕಿದೆ ಎಂದು ತಿಳಿಸಿ ಸುರಕ್ಷಿತವಾಗಿ ತಲುಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಶ್ಲಾಘನೆಯ ಮಹಾಪೂರ!
ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ನೆಟ್ಟಿಗರ ಗಮನ ಸೆಳೆಯಿತು. ಬಳಕೆದಾರರೊಬ್ಬರು ಪ್ರತಿಕ್ರಿಯಿಸಿ, ನಿಮಗೆ ನಿಜಕ್ಕೂ ಅದೃಷ್ಟವಿತ್ತು. ಇಂದಿನ ದಿನಗಳಲ್ಲಿ ಇಂತಹ ಪ್ರಾಮಾಣಿಕ ಘಟನೆಗಳು ನಡೆಯುವುದು ಬಹಳ ಅಪರೂಪ," ಎಂದು ಬರೆದುಕೊಂಡಿದ್ದಾರೆ.
ಮತ್ತೆ ಕೆಲವರು ಪ್ರಯಾಣಿಕನಿಗೆ ಚಾಲಕನ ನಿಷ್ಠೆಯನ್ನು ಗೌರವಿಸುವಂತೆ ಸಲಹೆ ನೀಡಿದರು. "ಅವರಿಗೆ ಖಂಡಿತವಾಗಿಯೂ ಸಣ್ಣ ಬಹುಮಾನ ಅಥವಾ ಸನ್ಮಾನ ನೀಡಿ," ಎಂದು ಒಬ್ಬರು ಒತ್ತಾಯಿಸಿದರೆ, ಇನ್ನೊಬ್ಬರು "ಕ್ಯಾಬ್ ಆಪ್‌ನಲ್ಲಿ ಅವರಿಗೆ ತಪ್ಪದೇ 5-ಸ್ಟಾರ್ ರೇಟಿಂಗ್ ನೀಡಿ," ಎಂದು ನೆನಪಿಸಿದ್ದಾರೆ.
ಇನ್ನು ಕೆಲವು ಬಳಕೆದಾರರು "ಅಬ್ಬಾ, ಚಾಲಕರು ಎಷ್ಟೊಂದು ಪ್ರಾಮಾಣಿಕರಲ್ಲವೇ!" ಎಂದು ಆಶ್ಚರ್ಯ ವ್ಯಕ್ತಪಡಿಸಿದರೆ, ಮತ್ತೊಬ್ಬರು ಅವರು ನನ್ನ ಸಂಪೂರ್ಣ ಗೌರವಕ್ಕೆ ಪಾತ್ರರಾಗಿದ್ದಾರೆ, ಅವರಿಗೆ ಹ್ಯಾಟ್ಸ್ ಆಫ್! ಎಂದಿದ್ದಾರೆ. ಈ ಘಟನೆಯು ಅನೇಕರಲ್ಲಿ ಮಾನವೀಯತೆಯ ಮೇಲಿನ ನಂಬಿಕೆಯನ್ನು ಮರುಕಳಿಸುವಂತೆ ಮಾಡಿದೆ (ಏಜೆನ್ಸೀಸ್)