ದುಬಾರಿ ಕಾರಿನ ಬಾನೆಟ್​ ಮೇಲೆ ಕಾಂಕ್ರೀಟ್​ ಮಿಕ್ಸ್​ ಮಾಡಿ ರಸ್ತೆ ಗುಂಡಿ ಮುಚ್ಚಿದ ಬೆಂಗ್ಳೂರು ಉದ್ಯಮಿ! ಏನಿದರ ಸಂದೇಶ? Businessman  
ರಾಜ್ಯ

ದುಬಾರಿ ಕಾರಿನ ಬಾನೆಟ್​ ಮೇಲೆ ಕಾಂಕ್ರೀಟ್​ ಮಿಕ್ಸ್​ ಮಾಡಿ ರಸ್ತೆ ಗುಂಡಿ ಮುಚ್ಚಿದ ಬೆಂಗ್ಳೂರು ಉದ್ಯಮಿ! ಏನಿದರ ಸಂದೇಶ? Businessman

ಪ್ರಮುಖ ಮುಖ್ಯಾಂಶಗಳು

  • ಯುವ ಉದ್ಯಮಿಯೊಬ್ಬರು ಮಾಡಿದ ವಿನೂತನ ಕೆಲಸ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
  • ಅಖಿಲ್ ಹೇಮಾದ್ರಿ ಎಂಬ ಉದ್ಯಮಿ, ರಸ್ತೆ ಗುಂಡಿ ಮುಚ್ಚಲು ಮಾಡಿದ ಪ್ರಯತ್ನ ಈಗ ಎಲ್ಲರ ಗಮನ ಸೆಳೆದಿದೆ
  • ತಮ್ಮ ಕೆಂಪು ಪೋರ್ಷೆ ಕಾರಿನಲ್ಲಿ ರಸ್ತೆ ಗುಂಡಿ ಇರುವ ಸ್ಥಳಕ್ಕೆ ತಲುಪಿ, ಸ್ವತಃ ತಾವೇ ದುರಸ್ತಿ ಮಾಡಿದ್ದಾರೆ
Businessman : ಬೆಂಗಳೂರಿನ ಯುವ ಉದ್ಯಮಿಯೊಬ್ಬರು ಮಾಡಿದ ವಿನೂತನ ಕೆಲಸವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಖಿಲ್ ಹೇಮಾದ್ರಿ ಎಂಬ ಉದ್ಯಮಿ, ರಸ್ತೆ ಗುಂಡಿಯನ್ನು ಮುಚ್ಚಲು ಮಾಡಿದ ಪ್ರಯತ್ನ ಇದೀಗ ಎಲ್ಲರ ಗಮನ ಸೆಳೆದಿದೆ. ವಿಶೇಷವಾಗಿ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಅಂದಹಾಗೆ, ವೈರಲ್ ವಿಡಿಯೋದಲ್ಲಿ, ಅಖಿಲ್ ಹೇಮಾದ್ರಿ ಅವರು ತಮ್ಮ ಕೆಂಪು ಪೋರ್ಷೆ ಕಾರಿನಲ್ಲಿ ರಸ್ತೆ ಗುಂಡಿ ಇರುವ ಸ್ಥಳಕ್ಕೆ ತಲುಪಿ, ಆ ಗುಂಡಿಯನ್ನು ಸ್ವತಃ ದುರಸ್ತಿ ಮಾಡಿದ್ದಾರೆ.
ತಾವು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಸಿಮೆಂಟ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ, ಕಾರಿನ ಬಾನೆಟ್ ಮೇಲೆಯೇ ಕಾಂಕ್ರೀಟ್​ ಮಿಶ್ರಣವನ್ನು ತಯಾರಿಸಿ, ಸ್ವತಃ ತಾವೇ ರಸ್ತೆ ಗುಂಡಿಯನ್ನು ಮುಚ್ಚುತ್ತಾರೆ. ಅಚ್ಚರಿಯ ಸಂಗತಿ ಏನೆಂದರೆ, ಕಾರಿನ ಬಾನೆಟ್​ ಮೇಲೆಯೇ ಕಾಂಕ್ರೀಟ್​ ಮಿಶ್ರಣವನ್ನು ಮಾಡಿಕೊಳ್ಳುತ್ತಾರೆ. ಇದೊಂದು ಇದುವರೆಗೂ ನೋಡಿರದ ದೃಶ್ಯ ಎನ್ನಬಹುದು.
ದುಬಾರಿ ಕಾರಿನ ಬಾನೆಟ್​ ಮೇಲೆ ಕಾಂಕ್ರೀಟ್​ ಮಿಶ್ರಣ ತಯಾರಿಸಿ, ಅದನ್ನು ರಸ್ತೆ ಗುಂಡಿಗೆ ಸುರಿದು ಮುಚ್ಚುತ್ತಾರೆ. ನೋಡುಗರಿಗೆ ಈ ವೇಳೆ ಒಂದು ಪ್ರಶ್ನೆ ಮೂಡುತ್ತದೆ. ಅದೇನೆಂದರೆ, ಕಾರಿನ ಬಾನೆಟ್​ಗೆ ಏನು ಆಗುವುದಿಲ್ಲವೇ? ಅನ್ನೋದು. ಆದರೆ, ಆ ಪ್ರಶ್ನೆಗೆ ಅದೇ ವಿಡಿಯೋದಲ್ಲಿ ಉತ್ತರ ಸಿಕ್ಕಿದೆ. ರಸ್ತೆ ಗುಂಡಿಯನ್ನು ಮುಚ್ಚಿದ ಬಳಿಕ, ಬಾನೆಟ್ ಮೇಲೆ ಅಂಟಿಸಲಾಗಿದ್ದ ಪ್ಲಾಸ್ಟಿಕ್​ ಹಾಳೆಯನ್ನು ಉದ್ಯಮಿ ತೆಗೆದುಹಾಕುತ್ತಾರೆ. ಬಳಿಕ ನೋಡಿದಾಗ ಬಾನೆಟ್​ ಮೇಲೆ ಒಂದು ಸಣ್ಣ ಗೆರೆಯು ಕೂಡ ಆಗಿರುವುದಿಲ್ಲ. ಆದಾಗ್ಯೂ, ಇದು ಕಾರಿನ ರಕ್ಷಣೆಗಾಗಿ ಬಳಸುವ ಪಿಪಿಎಫ್ (ಪೇಂಟ್ ಪ್ರೊಟೆಕ್ಷನ್ ಫಿಲ್ಮ್) ಬಗ್ಗೆ ವಿವರಿಸುವ ಪ್ರಯತ್ನವಾಗಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋಗೆ ನೀಡಿರುವ ಶೀರ್ಷಿಕೆಯಲ್ಲಿ, ಹೇಮಾದ್ರಿ ಅವರು ವೈಯಕ್ತಿಕ ಜವಾಬ್ದಾರಿಯ ಕುರಿತು ಸಂದೇಶವನ್ನು ನೀಡಿದ್ದಾರೆ. ನಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಎಲ್ಲದಕ್ಕೂ ಸರ್ಕಾರವನ್ನೇ ಅವಲಂಬಿಸಿರಬಾರದು ಎಂದು ಹೇಳಿದ್ದಾರೆ.
ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಈ ದೇಶದಲ್ಲಿ ಬದಲಾವಣೆಯಾಗಬೇಕಾದರೆ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಪಾತ್ರವನ್ನು ನಿರ್ವಹಿಸಬೇಕು ಎಂಬ ಸಂದೇಶವನ್ನು ಹೇಮಾದ್ರಿ ಸಾರಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ತಮ್ಮ ಕಂಪನಿಯ ಬ್ರ್ಯಾಂಡ್ ಪ್ರಚಾರಕ್ಕಾಗಿಯೂ ಮಾಡಲಾಗಿದೆ ಎಂದು ಹೇಮಾದ್ರಿ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ, ವ್ಯವಹಾರ ಪ್ರಚಾರದ ಜೊತೆಗೆ, ಸಮಾಜಕ್ಕೆ ಉಪಯುಕ್ತವಾದ ಸಂದೇಶವನ್ನು ನೀಡುವ ಉದ್ದೇಶವೂ ಇದೆ ಎಂದಿದ್ದಾರೆ.
ಬೆಂಗಳೂರಿನ ರಸ್ತೆಗಳ ಸ್ಥಿತಿಯ ಬಗ್ಗೆ ಅನೇಕ ಸ್ಥಳಗಳಲ್ಲಿ ಜನರಲ್ಲಿ ಅಸಮಾಧಾನವಿದೆ. ಗುಂಡಿಗಳು ಮತ್ತು ಹಾನಿಗೊಳಗಾದ ರಸ್ತೆಗಳ ಬಗ್ಗೆ ಆಗಾಗ್ಗೆ ದೂರುಗಳು ಬರುತ್ತಿವೆ. ಇದರಿಂದಾಗಿ, ಈ ವಿಡಿಯೋ ಇದೀಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ, (ಏಜೆನ್ಸೀಸ್​).