ಪತ್ನಿ ಅಗಲಿ 8 ವರ್ಷವಾದರೂ ನಿತ್ಯ ಆಟೋ ಸಿಂಗರಿಸುವ ಬೆಂಗಳೂರಿನ ವೃದ್ಧ ಚಾಲಕ! Bengaluru Auto Driver ಚಿತ್ರ Instagram 
ರಾಜ್ಯ

8 ವರ್ಷಗಳಿಂದ ಮಾಸದ 'ಅನುರಾಗ'!: ದಿವಂಗತ ಪತ್ನಿಯ ಭಾವಚಿತ್ರಕ್ಕೆ ದಿನವೂ ಹೂವಿಟ್ಟು ಸವಾರಿ ಬೆಳೆಸುವ ಬೆಂಗಳೂರಿನ ಆಟೋ ಚಾಲಕ.. Bengaluru Auto Driver

ಪ್ರಮುಖ ಮುಖ್ಯಾಂಶಗಳು

  • ಸಿಲಿಕಾನ್​ ಸಿಟಿಯ ಬೀದಿಗಳಲ್ಲಿ ಪ್ರತಿದಿನ ಸಾವಿರಾರು ಆಟೋಗಳು ಸಂಚರಿಸುತ್ತಲೇ ಇರುತ್ತವೆ
  • ಇಂದಿರಾನಗರದ ಸಿಗ್ನಲ್‌ನಲ್ಲಿ ನಿಲ್ಲುವ ಒಂದು ಆಟೋ ಮಾತ್ರ ಪ್ರಯಾಣಿಕರ ಹಾಗೂ ಹಾದಿಹೋಕರ ಗಮನ ಸೆಳೆಯುತ್ತದೆ
  • ಚಾಲಕ ಪ್ರತಿದಿನ ಸವಾರಿ ಆರಂಭಿಸುವ ಮುನ್ನ ತಮ್ಮ ದಿವಂಗತ ಪತ್ನಿಯ ಭಾವಚಿತ್ರಕ್ಕೆ ತಾಜಾ ಹೂವುಗಳನ್ನಿಟ್ಟು ನಮಸ್ಕರಿಸುತ್ತಾರೆ
ಬೆಂಗಳೂರು: ಸಿಲಿಕಾನ್​ ಸಿಟಿಯ ಬೀದಿಗಳಲ್ಲಿ ಪ್ರತಿದಿನ ಸಾವಿರಾರು (Bengaluru Auto Driver) ಆಟೋಗಳು ಸಂಚರಿಸುತ್ತವೆ. ಆದರೆ ಇಂದಿರಾನಗರದ ಸಿಗ್ನಲ್‌ನಲ್ಲಿ ನಿಲ್ಲುವ ಒಂದು ಆಟೋ ಮಾತ್ರ ಪ್ರಯಾಣಿಕರ ಹಾಗೂ ಹಾದಿಹೋಕರ ಗಮನ ಸೆಳೆಯುವುದರ ಜೊತೆಗೆ ಪ್ರತಿಯೊಬ್ಬರ ಹೃದಯವನ್ನೂ ತಲುಪುತ್ತಿದೆ. ಇದಕ್ಕೆ ಕಾರಣ, ಆ ಆಟೋದ ವೃದ್ಧ ಚಾಲಕ ಕಳೆದ 8 ವರ್ಷಗಳಿಂದ ಪ್ರತಿದಿನವೂ ಅತ್ಯಂತ ಶ್ರದ್ಧೆಯಿಂದ ಅನುಸರಿಸಿಕೊಂಡು ಬರುತ್ತಿರುವ ನಿಸ್ಸೀಮ ಪ್ರೀತಿಯ ಕಾಯಕ.

ಆಟೋದಲ್ಲೇ ಜೀವಂತವಾಗಿವೆ ಪತ್ನಿಯ ನೆನಪುಗಳು

ವಯಸ್ಸಾದ ಈ ಹಿರಿಯ ಆಟೋ ಚಾಲಕ, ಪ್ರತಿದಿನ ಸವಾರಿ ಆರಂಭಿಸುವ ಮುನ್ನ ತಮ್ಮ ದಿವಂಗತ ಪತ್ನಿಯ ಭಾವಚಿತ್ರಕ್ಕೆ ತಾಜಾ ಹೂವುಗಳನ್ನಿಟ್ಟು ನಮಸ್ಕರಿಸುತ್ತಾರೆ. ಪತ್ನಿ ಅಗಲಿ ಎಂಟು ವರ್ಷಗಳು ಕಳೆದಿದ್ದರೂ, ಆಕೆಯ ನೆನಪುಗಳನ್ನು ದಿನನಿತ್ಯ ತಾವಿರುವ ಆಟೋದಲ್ಲೇ ಜೀವಂತವಾಗಿರಿಸಿರುವ ಈ ಹಿರಿಯರ ನಿಷ್ಠಾವಂತ ಪ್ರೀತಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಜನರ ಮನ ಗೆದ್ದಿದೆ.

ವೈರಲ್ ವೀಡಿಯೋದಲ್ಲಿ ಏನಿದೆ?

ಈ  ಭಾವನಾತ್ಮಕ ಕ್ಷಣವನ್ನು ಆಶಿಶ್ ಮ್ಯಾಥ್ಯೂ ಎಂಬ ಇನ್‌ಸ್ಟಾಗ್ರಾಮ್ ಕಂಟೆಂಟ್ ಕ್ರಿಯೇಟರ್ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ. ಇಂದಿರಾನಗರ ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಯುತ್ತಿದ್ದಾಗ, ವೃದ್ಧ ಆಟೋ ಚಾಲಕರೊಬ್ಬರು ಆಟೋದೊಳಗೆ ಅತ್ಯಂತ ಕಾಳಜಿಯಿಂದ ತಾಜಾ ಹೂವುಗಳನ್ನು ಜೋಡಿಸುತ್ತಿರುವುದು ಆಶಿಶ್ ಅವರ ಗಮನ ಸೆಳೆಯಿತು.
ಕೂಡಲೇ ಅವರನ್ನು ವಿಚಾರಿಸಿದಾಗ, ಚಾಲಕರು ಆಟೋದ ಸ್ಟೀರಿಂಗ್ ಹ್ಯಾಂಡಲ್ ಬಳಿ ಸಾಲಾಗಿ ಜೋಡಿಸಿಟ್ಟಿದ್ದ ಫೋಟೋಗಳನ್ನು ತೋರಿಸಿ, "ಇದು ನನ್ನ ಹೆಂಡತಿ" ಎಂದು ಮುಗುಳ್ನಗುತ್ತಾ ಉತ್ತರಿಸಿದ್ದಾರೆ. "ನನ್ನ ಪತ್ನಿ ತೀರಿಕೊಂಡು ಎಂಟು ವರ್ಷಗಳಾಯ್ತು, ಆದರೆ ಆಕೆ ಈಗಲೂ ನನ್ನ ದೈನಂದಿನ ಜೀವನದ ಭಾಗವಾಗಿದ್ದಾಳೆ ಎಂದು ಅವರು ಭಾವಪೂರ್ಣವಾಗಿ ಹೇಳಿಕೊಂಡಿದ್ದಾರೆ. ಆಟೋದ ಸುತ್ತಲೂ ಪತ್ನಿಯ ಹಲವು ಛಾಯಾಚಿತ್ರಗಳನ್ನು ಜೋಡಿಸಲಾಗಿದ್ದು, ಅವರು ಎಲ್ಲೇ ಹೋದರೂ ಪತ್ನಿಯ ನೆನಪುಗಳು ಅವರೊಂದಿಗೆ ಪಯಣಿಸುತ್ತವೆ.

ನಿವೃತ್ತಿ ಬೇಡ ಎಂದಿದ್ದೇಕೆ ಹಿರಿಯ ಚಾಲಕ?

ಮಾತುಕತೆಯ ವೇಳೆ, ನನಗೆ ಒಬ್ಬ ಮಗ, ಸೊಸೆ ಹಾಗೂ ಆರು ಜನ ಮೊಮ್ಮಕ್ಕಳಿದ್ದಾರೆ. ಆದರೂ ಪತ್ನಿ ಅಗಲಿದ ಮೇಲೆ ಅನುಭವಿಸಿದ ಒಂಟಿತನವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ತಮ್ಮ ಮನದ ನೋವನ್ನು ಹಂಚಿಕೊಂಡಿದ್ದಾರೆ.
ಮಗ ಮನೆಯಲ್ಲೇ ವಿಶ್ರಾಂತಿ ಪಡೆಯುವಂತೆ ವಿನಂತಿಸಿದರೂ ನೀವು ಇನ್ನೂ ಆಟೋ ಓಡಿಸುತ್ತಿರುವುದು ಏಕೆ ಎಂದು ಆಶಿಶ್ ಕೇಳಿದಾಗ, ಮನೆಯಲ್ಲೇ ಕುಳಿತರೆ ಆಕೆಯ ನೆನಪುಗಳು ಮತ್ತು ದುಃಖ ನನ್ನನ್ನು ಹೆಚ್ಚು ಕಾಡುತ್ತವೆ. ಹೀಗೆ ಹೊರಗೆ ಬಂದು ಹೊಸ ಜನರನ್ನು ಭೇಟಿಯಾಗುತ್ತಾ, ಕೆಲಸದಲ್ಲಿ ನಿರತನಾಗಿದ್ದರೆ ದುಃಖವನ್ನು ಮರೆಯಲು ಸಹಾಯವಾಗುತ್ತದೆ ಎಂದು ಉತ್ತರಿಸಿದ್ದಾರೆ.
ಪ್ರೀತಿ, ಅಗಲಿಕೆಯ ನೋವು ಮತ್ತು ಜೀವನವನ್ನು ಧೈರ್ಯವಾಗಿ ಮುನ್ನಡೆಸುವ ಅವರ ಈ ಸರಳ ಜೀವನಪ್ರೀತಿ ನೆಟ್ಟಿಗರ ಕಣ್ಣಾಲಿಗಳನ್ನು ಒದ್ದೆಯಾಗಿಸಿದ್ದು, ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

ಇಂಟರ್ನೆಟ್​ ಪ್ರತಿಕ್ರಿಯೆ

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರ ಗಮನ ಸೆಳೆಯಿತು. ಕೆಲವು ಬಳಕೆದಾರರು ಚಾಲಕನ ಈ ಸನ್ನೆಯು ಕಾಲ ಕಳೆದರೂ ಉಳಿದುಕೊಂಡಿದ್ದ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ಒಬ್ಬ ವ್ಯಕ್ತಿ ಹೋದ ನಂತರವೂ ದೀರ್ಘಕಾಲ ಉಳಿಯುವ ಪ್ರೀತಿ ಇದು ಎಂದು ಅಭಿಪ್ರಾಯ ಪಟ್ಟಿದ್ದಾರೆ (ಏಜೆನ್ಸೀಸ್​).