ಸೋಮವಾರಪೇಟೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಡಾ.ಮಂತರ್‌ಗೌಡ ಮಾತನಾಡಿದರು. ಕೃಷ್ಣಮೂರ್ತಿ, ಪರಮೇಶ ಕುಮಾರ್, ಅಬ್ದುಲ್ ನಬಿ, ಕಾಂತರಾಜು ಇದ್ದರು.
ಸೋಮವಾರಪೇಟೆ: ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ ಅನೇಕರ ವೃದ್ಧಾಪ್ಯ ವೇತನ ಸ್ಥಗಿತಗೊಂಡಿರುವುದರಿಂದ ಸಂಕಷ್ಟದಲ್ಲಿದ್ದಾರೆ ಎಂದು ಕೆಡಿಪಿ ಸದಸ್ಯೆ ಸಬಿತಾ ಚನ್ನಕೇಶವ, ಸೂಡ ಅಧ್ಯಕ್ಷ ಕೆ.ಎ.ಆದಂ ಅವರು ಶಾಸಕ ಡಾ.ಮಂತರ್‌ಗೌಡ ಗಮನಕ್ಕೆ ತಂದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಅಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು. ವೃದ್ಧಾಪ್ಯ ವೇತನ ಸ್ಥಗಿತಗೊಳ್ಳಲು ಯಾವ ಕಾರಣವೂ ಗೊತ್ತಿಲ್ಲ. ವೃದ್ಧರು ಹಣಕ್ಕಾಗಿ ಬ್ಯಾಂಕ್‌ಗಳಿಗೆ ಹೋಗಿ ವಾಪಾಸ್ ಬರುತ್ತಿದ್ದಾರೆ. ಕೆಲವರಿಗೆ ಔಷಧಿ ಮಾತ್ರೆಗಳನ್ನು ಕೊಂಡು ಕೊಳ್ಳುವುದಕ್ಕೂ ಸಾಧ್ಯವಾಗದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಹೇಳಿದರು.
ತಹಸೀಲ್ದಾರ್ ಕೃಷ್ಣಮೂರ್ತಿ ಮಾತನಾಡಿ, ತಾಲೂಕಿನಲ್ಲಿ 17,553 ಮಂದಿ ಸಂಧ್ಯಾ ಸುರಕ್ಷಾ ಯೋಜನೆಯ ಫಲಾನುಭವಿಗಳಿದ್ದು, 5,053 ಮಂದಿ ಫಲಾನುಭವಿಗಳ ಪೆನ್ಶನ್ ಸ್ಥಗಿತಗೊಂಡಿದೆ. ಸಂಧ್ಯಾ ಸುರಕ್ಷಾ ಯೋಜನೆ ಫಲಾನುಭವಿಗಳಿಗೆ 32ಸಾವಿರ ರೂ. ಗಳ ವಾರ್ಷಿಕ ಆದಾಯ ಮಿತಿಯನ್ನು ಸರ್ಕಾರ ಮಾಡಿದ್ದು, ಅದಕ್ಕಿಂತ ಹೆಚ್ಚಿನ ಅದಾಯವಿರುವ ಫಲಾನುಭವಿಗಳಿಗೆ ಪೆನ್ಶನ್ ಸ್ಥಗಿತಗೊಂಡಿದೆ ಎಂದು ಹೇಳಿದರು. 32 ಸಾವಿರ ರೂ., ಅದಾಯವಿರುವವರಿಗೆ ಯೋಜನೆ ಮುಂದುವರಿಯಲಿದೆ ಎಂದು ಹೇಳಿದರು. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲಾಗುವುದು ಎಂದು ಶಾಸಕರು ಹೇಳಿದರು.
ಕೆಲ ಇಲಾಖೆಯವರು ಅನುಪಾಲನ ವರದಿ ನೀಡದ ಹಿನ್ನೆಲೆಯಲ್ಲಿ ಶಾಸಕರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸರ್ಕಾರದ ನಾಮ ನಿರ್ದೇಶಿತ ಸದಸ್ಯರಿಗೆ ಕೆಡಿಪಿ ಸಭೆಯ ಮಾಹಿತಿಯೇ ಇಲ್ಲ ಎಂದು ಸದಸ್ಯರಾದ ಜೌರಂಗಜೇಬ್, ವೇದಕುಮಾರ್, ಶರತ್‌ಶೇಖರ್, ಸಬಿತಾ ಚನ್ನಕೇಶವ, ಜಗದೀಶ್, ಗಂಗಾಧರ್ ನೇರ ಅರೋಪ ಮಾಡಿದರು. ಅನುಪಾಲನ ವರದಿಯ ಬಗ್ಗೆ ಮಾಹಿತಿಯಿಲ್ಲದೆ ನಮ್ಮಿಂದ ಚರ್ಚೆ ಮಾಡಲು ಸಾಧ್ಯವಿಲ್ಲ. ಕೆಡಿಪಿ ಸಭೆಯನ್ನು ಮುಂದೂಡುವಂತೆ ಶಾಸಕರಿಗೆ ಮನವಿ ಮಾಡಿದರು.
ಎಲ್ಲ ಇಲಾಖೆಯವರ ಪ್ರಗತಿ ಪಟ್ಟಿ ಇಟ್ಟುಕೊಂಡು ಚರ್ಚೆ ಮಾಡಬೇಕಿದೆ. ಕೆಲ ಇಲಾಖೆಯಿಂದ ಅನುಪಾಲನ ವರದಿ ಸಿಕ್ಕಿಲ್ಲ. ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲ. ಕೆಡಿಪಿ ಸಭೆಯ ಮುಂದಿನ ದಿನವನ್ನು ನಿಗದಿಪಡಿಸುವಂತೆ ಇಒ ಪರಮೇಶ ಕುಮಾರ್ ಅವರಿಗೆ ಸೂಚಿಸಿದ ಶಾಸಕರು, ಮಳೆಗಾಲದಲ್ಲಿ ಕೈಗೊಳ್ಳಬೇಕಾದ ಮುಂಜಾಗೃತೆ ವಿಷಯದ ಚರ್ಚಿಸುವಂತೆ ತಿಳಿಸಿದರು.
ವರ್ಕ್‌ಶಾಪ್‌ನವರು ರಸ್ತೆಯ ಬದಿಯಲ್ಲಿ ಗುಜರಿ ವಾಹನಗಳನ್ನು ನಿಲ್ಲಿಸಿದ್ದಾರೆ. ಇದರಿಂದ ದೊಡ್ಡ ಸಮಸ್ಯೆಯಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸುವಂತೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಜಿ.ಎಂ.ಕಾಂತರಾಜು ಹೇಳಿದರು. ಪಿಡಿಒಗಳು ಕೂಡಲೆ ನೋಟಿಸ್ ಜಾರಿಗೊಳಿಸಿ ವಾಹನಗಳನ್ನು ತೆಗೆಸಬೇಕು. ಸ್ಪಂದಿಸದ ವರ್ಕ್‌ಶಾಪ್ ಮಾಲೀಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.
ಗ್ರಾಮ-1 ಕೇಂದ್ರಗಳಲ್ಲಿ ಆರ್‌ಟಿಸಿ, ಎಂಸಿ ಸೇರಿದಂತೆ ದಾಖಲೆಗಳನ್ನು ಪಡೆದುಕೊಳ್ಳಲು ರೈತರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತ ಶೋಷಣೆ ಮಾಡುತ್ತಿದ್ದಾರೆ. ಎಲ್ಲ ಗ್ರಾಮ-1 ಶಾಖೆಗಳಲ್ಲಿ ದಾಖಲೆಗಳ ದರಪಟ್ಟಿಯನ್ನು ಹಾಕಬೇಕು. ತಪ್ಪಿದಲ್ಲಿ ಅಂತಹವರ ಲೈಸನ್ಸ್ ರದ್ದುಪಡಿಸಬೇಕು ಎಂದು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದು ಶಾಸಕರು ಹೇಳಿದರು.
ಅರಣ್ಯ ಇಲಾಖೆಯೂ ಸಕಾಲದಂತೆ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ರೈತರು ಆರ್‌ಎಫ್‌ಒ ಕಚೇರಿಯಲ್ಲಿ ಅರ್ಜಿಗಳನ್ನು ನೀಡಿದರೆ, ಅಲ್ಲಿಯೇ ಅವರಿಗೆ ಸೌಲಭ್ಯ ದೊರೆಯಬೇಕು. ರೈತರನ್ನು ಡಿಎಫ್‌ಒ, ಎಸಿಎಫ್ ಕಚೇರಿಗೆ ಹೋಗಿ ಅರ್ಜಿಗಳನ್ನು ಪರಿಶೀಲಿಸಲು ಕಳುಹಿಸಬಾರದು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಕರ್ನಾಟಕದಲ್ಲಿ ಅರಣ್ಯ ಇಲಾಖೆ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಮೀಸಲು ಅರಣ್ಯದೊಳಗೆ ನೂರಾರು ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಲಾಗಿದೆ. ಆದರೆ ಅರಣ್ಯ ರಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ. ಮೇಲಾಧಿಕಾರಿಗಳ ವಿರುದ್ಧ ಕ್ರಮವಿಲ್ಲ. ಇದ್ಯಾವ ನ್ಯಾಯ ಎಂದು ಸದಸ್ಯರಾದ ಔರಂಗಜೇಬ್, ವೇದಕುಮಾರ್, ಸಬಿತಾ, ಆದಂ ಪ್ರಶ್ನಿಸಿದರು. ತಪ್ಪಿಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಲೋಕಾಯಕ್ತ ಸುಮೊಟೊ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಲಿದೆ ಎಂದು ಶಾಸಕರು ತಿಳಿಸಿದರು. ಸಭೆಯಲ್ಲಿ ಆಡಳಿತಾಧಿಕಾರಿ ಅಬ್ದುಲ್ ನಬಿ ಇದ್ದರು.