CM Siddaramaiah  
ರಾಜ್ಯ

ಬಳ್ಳಾರಿ ಬ್ಯಾನರ್ ಗಲಾಟೆ; ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್​ ವಿಚಾರಕ್ಕೆ ಜ.1ರಂದು ರಾತ್ರಿ ನಡೆದ ಗಲಭೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಘಟನೆ ಬಗ್ಗೆ ತನಿಖೆ ಮಾಡಲು ಗೃಹ ಇಲಾಖೆಗೆ ಸೂಚಿದ್ದೇನೆ ಎಂದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಬಿಜೆಪಿಯವರ ಗನ್​ನಿಂದ ಬುಲೆಟ್​ ಹಾರಿದೆಯೋ ಅಥವಾ ಕಾಂಗ್ರೆಸ್​ನರ ಕಡೆಯಿಂದ ಹಾರಿದೆಯೇ ಎಂದು ತಿಳಿಯಬೇಕಿದೆ. ಹೀಗಾಗಿ, ತನಿಖೆ ಮಾಡಿ ವರದಿ ನೀಡವಂತೆ ಅದೇಶಿಸಲಾಗಿದೆ ಎಂದು ಹೇಳಿದರು.
ಬಳ್ಳಾರಿ ನಗರ ಶಾಸಕ ಭರತ್​ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಅವರು ಭದ್ರತೆಗೆ ಗನ್​ ಇಟ್ಟುಕೊಂಡಿದ್ದಾರೆ. ಗಲಾಟೆ ವೇಳೆ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬುಲೆಟ್​ ತಗುಲಿ ಕಾರ್ಯಕರ್ತ ರಾಜಶೇಖರ್​ ಮೃತಪಟ್ಟಿದ್ದಾರೆ. ಗುಂಡು ಯಾರ ಗನ್​ನಿಂದ ಹೋಗಿದೆ ಎಂದು ಗೊತ್ತಾಗಬೇಕಿದೆ ಎಂದರು.

ಬೆಂಬಲಿಗರ ನಡುವೆ ಘರ್ಷಣೆ

ಬಳ್ಳಾರಿಯಲ್ಲಿ ಜನವರಿ 3ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಪುತ್ತಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬ್ಯಾನರ್ ಅಳವಡಿಕೆ ವಿಚಾರಕ್ಕೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಬಿಜೆಪಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿ ಹಿಂಸಾಚಾರಕ್ಕೆ ತಿರುಗಿದೆ.
ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ಹಾಕಲು ಭರತ್ ರೆಡ್ಡಿ ಬೆಂಬಲಿಗರು ಮುಂದಾದಾಗ ವಿರೋಧ ವ್ಯಕ್ತವಾಗಿ ಕಲ್ಲು ತೂರಾಟ, ಗುಂಡಿನ ದಾಳಿ ನಡೆದಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಗುಂಡೇಟಿಗೆ ಬಲಿಯಾಗಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಿಸಿದ್ದು, ಜನಾರ್ದನ ರೆಡ್ಡಿ, ಶ್ರೀರಾಮುಲು ಸೇರಿ 11 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.