ಸವದತ್ತಿ ತಾಲೂಕಿನ ಕಾರಿಮಣಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಶು ಸಂಗೋಪನೆ ಕುರಿತ ಜಾಗೃತಿ ಕಾರ್ಯಕ್ರಮವನ್ನು ಡಾ.ಗುರುರಾಜ ಕೌಜಲಗಿ, ಡಾ.ಮಲ್ಲಪ್ಪ ಸಜ್ಜನ, ಡಾ.ಸುದರ್ಶನ ಗಡಾದ ಉದ್ಘಾಟಿಸಿದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಉತ್ತಮ ತಳಿ ಆಯ್ಕೆ, ಸಮತೋಲಿತ ಪಶು ಆಹಾರ, ಹಸಿರು ಮತ್ತು ಒಣ ಮೇವಿನ ನಿರ್ವಹಣೆ, ಪಶುಗಳ ಆರೋಗ್ಯ ಸಂರಕ್ಷಣೆ, ಲಸಿಕೆ ನೀಡುವಿಕೆ, ರೋಗಗಳ ನಿಯಂತ್ರಣದ ಮೂಲಕ ರೈತರು ಹಾಲಿನ ಉತ್ಪಾದನೆ ಹೆಚ್ಚಿಸುವ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮತ್ತಿಕೊಪ್ಪದ ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನ ವಿಷಯ ತ ಡಾ.ಗುರುರಾಜ ಕೌಜಲಗಿ ಹೇಳಿದರು.
ಸವದತ್ತಿ ತಾಲೂಕಿನ ಕಾರಿಮಣಿ ಗ್ರಾಮದಲ್ಲಿ ತೆನಿಕೊಳ್ಳದ ಕೆಎಲ್ಇ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯ, ಮತ್ತಿಕೊಪ್ಪದ ಐಸಿಎಆರ್&ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಹಾಗೂ ಬೈಲಹೊಂಗಲ ಪಶುವೈದ್ಯಕಿಯ ಹಾಗೂ ಪಶುಸಂಗೋಪನೆ ಇಲಾಖೆಯಿಂದ ಶುಕ್ರವಾರ ಏರ್ಪಡಿಸಿದ್ದ ವೈಜ್ಞಾನಿಕ ಪಶುಸಂಗೋಪನೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪಶು ವೈದ್ಯಕಿಯ ಹಾಗೂ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ.ಮಲ್ಲಪ್ಪ ಸಜ್ಜನ ಮಾತನಾಡಿ, ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯಗಳು, ಪಶು ಆರೋಗ್ಯ ಸೇವೆಗಳು, ಲಸಿಕಾ ಕಾರ್ಯಕ್ರಮ ಹಾಗೂ ಪಶುಸಂಗೋಪನೆಗೆ ಸಂಬಂಧಿಸಿದ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ನೇಸರಗಿ ಹಿರಿಯ ಪಶುವೈದ್ಯಾಧಿಕಾರಿ ಡಾ.ಸುದರ್ಶನ ಗಡಾದ, ಪಶುಗಳ ನಿಯಮಿತ ಆರೋಗ್ಯ ತಪಾಸಣೆ, ರೋಗಗಳ ಆರಂಭಿಕ ಪತ್ತೆ ಹಾಗೂ ಸೂಕ್ತ ಪಶು ವೈದ್ಯಕಿಯ ಸೇವೆಯನ್ನು ಸಮಯಕ್ಕೆ ಸರಿಯಾಗಿ ಪಡೆಯುವ ಮಹತ್ವದ ಕುರಿತು ರೈತರಿಗೆ ತಿಳಿಸಿದರು. ಕೆಎಲ್ಇ ಕೃಷಿ ವಿಜ್ಞಾನಗಳ ಮಹಾವಿದ್ಯಾಲಯದಿಂದ ಆಯೋಜಿಸಲಾದ 8 ದಿನಗಳ ಎನ್ಎಸ್ಎಸ್ ಶಿಬಿರದಲ್ಲಿ ಗ್ರಾಮೀಣ ಜನರಲ್ಲಿ ವೈಜ್ಞಾನಿಕ ಕೃಷಿ ಮತ್ತು ಪಶುಸಂಗೋಪನಾ ಪದ್ಧತಿಗಳ ಬಗ್ಗೆ ಅರಿವು ಮೂಡಿಸಲಾಯಿತು.