ಬೆಳಗಾವಿ ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕನ್ನಡಪರ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿ ವಿರೋಧ ಪಕ್ಷದ ಸದಸ್ಯರು ಬಾವಿಗಳಿದು ಧರಣಿ ನಡೆಸಿದರು.
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಎಂಬ ಗೊತ್ತುವಳಿ ಕೈಗೊಳ್ಳುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
ಪಾಲಿಕೆ ಪರಿಷತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಪಾಲಿಕೆ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ನಲ್ಲಿ ಗಡಿ ಪ್ರಕರಣ ವಿಚಾರಣೆ ಹಂತದಲ್ಲಿರುವ ವೇಳೆ ನಿರ್ಣಯ ಕೈಗೊಳ್ಳಬಾರದು ಎಂದು ವಾದಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷ ಕಾಂಗ್ರೆಸ್ ಸದಸ್ಯರು, ಈ ಕುರಿತು ಸರ್ಕಾರದ ನಿರ್ಣಯಕ್ಕಾಗಿ ಕಾಯುವ ಅವಶ್ಯಕತೆ ಇಲ್ಲ. ನಾಡಿನ ಹಿತಕ್ಕಿಂತ ರಾಜಕೀಯ ಹಿತವೇ ಮುಖ್ಯವಾದರೆ ಸರ್ಕಾರದ ಸೌಲಭ್ಯ ಏಕೆ ಪಡೆದುಕೊಳ್ಳುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಪ್ರೀತಿ ಕಾಮಕರ್ ಮಾತನಾಡಿ, ನಾವು ಕನ್ನಡ ವಿರೋಧಿಗಳಲ್ಲ. ಬೆಳಗಾವಿ ಅಭಿವೃದ್ಧಿಗಾಗಿ ಮೇಯರ್ ಸ್ಥಾನ ಅಲಂಕರಿಸಿದ್ದೇವೆ. ಎಲ್ಲ ಭಾಷಿಕರೂ ಒಗ್ಗಟ್ಟಿನಿಂದ ಬದುಕುತ್ತಿದ್ದೇವೆ. ಕನ್ನಡಪರ ಗೊತ್ತುವಳಿ ಕೈಗೊಳ್ಳುವ ಕುರಿತು ಸರ್ಕಾರ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಉಪಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಈಗಾಗಲೇ ಕನ್ನಡಪರ ಗೊತ್ತುವಳಿ ಕೈಗೊಳ್ಳುವ ಕುರಿತು ನಿರ್ಣಯ ಕೈಗೊಂಡು ಸರ್ಕಾರಕ್ಕೆ ವರದಿ ಕಳುಹಿಸಿ ಮೂರು ತಿಂಗಳು ಕಳೆದಿದೆ. ಸರ್ಕಾರದ ನಿರ್ದೇಶನ ಬಂದ ನಂತರ ಎಲ್ಲ ಸದಸ್ಯರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಪಾಲಿಕೆ ಸಭೆಯಲ್ಲಿ ಸರ್ಕಾರದಿಂದ ಬರುವ ಅನುದಾನ ವಿಚಾರವೂ ಸದಸ್ಯರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. ರಾಜ್ಯ ಸರ್ಕಾರ ಇದುವರೆಗೆ ಪಾಲಿಕೆಗೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಯಡಿಯೂರಪ್ಪ ಸರ್ಕಾರ ಪಾಲಿಕೆಗೆ 100 ಕೋಟಿ ರೂ. ಅನುದಾನ ನೀಡಿತ್ತು ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಅನುದಾನವಿಲ್ಲದೆ ಹೇಗೆ ಆಡಳಿತ ನಡೆಸುತ್ತಿದ್ದೀರಿ. ನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡಿದರೆ ಅವರನ್ನು ಗೌರವಿಸುವ ಸಾಮಾನ್ಯ ಪರಿಜ್ಞಾನವೂ ನಿಮಗಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.