ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ನಡೆದಿರುವ ಹಗರಣದ ಪ್ರಮುಖ ಆರೋಪಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಸ್ನೇಹಿತೆಯನ್ನು ಡ್ರಿಲ್ ಮಾಡಿರುವ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದ್ದಾರೆ.
ಅಯೋಧ್ಯೆ ನಿವಾಸಿಯಾಗಿರುವ ಯಾಶಿ ಜೈಸ್ವಾಲ್‌ಗೆ ಜ್ಞಾನೇಂದ್ರ ಕುಮಾರ್ 2022ರಲ್ಲಿ ಪರಿಚಯವಾಗಿದ್ದಾನೆ. 2024ರ ನವೆಂಬರ್‌ನಲ್ಲಿ ಆಕೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಆರೋಪಿ 2027ರಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಎನ್ನಲಾಗಿದೆ. ಆದರೆ, ಪಶುವೈದ್ಯಾಧಿಕಾರಿಗಳ ಹುದ್ದೆ ಸೇರಿ ಆಯೋಗದ ಮೂಲಕ ನಡೆದಿರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಲಂಚ ಹಣವನ್ನು ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಮೂಲಕ ಯಾಶಿ ಜೈಸ್ವಾಲ್ ಖಾತೆಗೆ ವರ್ಗಾವಣೆ ಮಾಡಿರುವ ದಾಖಲೆ ಸಮೇತ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಾಗಿದೆ.
‘ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎಂಬಂತೆ, ಅಭ್ಯರ್ಥಿಗಳಿಂದ ಪಡೆದಿದ್ದ ಲಂಚ ಹಣವನ್ನು ಗಂಗ್ವಾರ್ ಮನಬಂದಂತೆ ಖರ್ಚು ಮಾಡಿದ್ದಾನೆ. ಕಳೆದ 2025ರ ಡಿಸೆಂಬರ್ ತಿಂಗಳಿಂದ ಹಿಡಿದು ಆಗಸ್ಟ್ 2026ರ ವರೆಗೆ ಯುಪಿಐ ಮೂಲಕ ಕನ್ನಾಳೆ ಯಾಶಿ ಜೈಸ್ವಾಲ್‌ಗೆ 99,999, 40,000, 50,000 ಹಾಗೂ ಮತ್ತೊಮ್ಮೆ 99,999 ರೂ. ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ.
ಅಲ್ಲದೇ ನಗರದ ಡಿಕ್ಸನ್ ರಸ್ತೆಯಲ್ಲಿರುವ ಭೀಮಾ ಗೋಲ್ಡ್ ಜ್ಯುವೆಲ್ಲರಿ ಅಂಗಡಿಯಲ್ಲಿ 22 ಲಕ್ಷ ರೂ.ಮೌಲ್ಯದ ವಜ್ರದ ಹಾರ, 29.30 ಲಕ್ಷ ರೂ.ಮೌಲ್ಯದ ್ಯಾನ್ಸಿ ಸರ, 92 ಸಾವಿರ ಮೌಲ್ಯದ ಉಂಗುರವನ್ನು ಗಂಗ್ವಾರ ಖರೀದಿಸಿ ಉಡುಗೊರೆಯಾಗಿ ನೀಡಿದ್ದಾನೆ. ಬಿಲ್‌ನ್ನು ಮೂರನೇ ವ್ಯಕ್ತಿ ಉಮೇಶ್ ಎಂಬುವರ ಹೆಸರಿಗೆ ಮಾಡಿಸಿರುವುದನ್ನು ಇ.ಡಿ ಬಯಲಿಗೆಳೆದಿದೆ.
ಪಶುವೈದ್ಯಾಧಿಕಾರಿಗಳ ನೇಮಕಾತಿ ಪರೀಕ್ಷೆ ವೇಳೆ ಕಲಬುರಗಿ ಜಿಲ್ಲೆಯ ಶಾಂತಾ ಹೊಸಮನಿ ಪರ 9 ಅಭ್ಯರ್ಥಿಗಳು ಆಯ್ಕೆಯಾಗಿರುವುದನ್ನು ಗಂಗ್ವಾರ್ ತನ್ನ ಸ್ನೇಹಿತೆ ಯಾಶಿ ಜೈಸ್ವಾಲ್ ಬಳಿ ಹಂಚಿಕೊಂಡಿದ್ದರು. ಇ.ಡಿ ವಿಚಾರಣೆ ವೇಳೆ ಯಾಶಿ ಬಾಯಿಬಿಟ್ಟಿದ್ದಾರೆ. ಅಕ್ರಮ ಬಯಲಿಗೆ ಬರುವ 2 ತಿಂಗಳು ಮುಂಚೆ ಯಾಶಿ ಜೈಸ್ವಾಲ್ ಬೆಂಗಳೂರಿಗೆ ಆಗಮಿಸಿದ್ದರು. ಆಗ ಶಾಂತಾ ಹೊಸಮನಿ ಊರಿನವರೆ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಅದು ಹೇಗೆ ಎಂಬ ಬಗ್ಗೆ ಗಂಗ್ವಾರ್ ಚಿಂತೆಗೀಡಾಗಿದ್ದ. ಒಂದೇ ಊರಿನವರು ಆಯ್ಕೆಯನ್ನು ಯಾರಾದರೂ ಪ್ರಶ್ನಿಸಿದರೆ ಮುಂದೆ ಸಮಸ್ಯೆಯಾಗಲಿದೆ. ಅಲ್ಲದೇ ಇನ್ನೂ ಅನೇಕ ನಿಯಮ ಬಾಹಿರ ಕೆಲಸವನ್ನು ಮಾಡುವಂತೆ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಮತ್ತು ಇತರೆ ಸದಸ್ಯರು ಒತ್ತಡ ಹೇರುತ್ತಿದ್ದಾರೆ ಎಂದು ಗಂಗ್ವಾರ್ ಅಕ್ರಮದ ಗುಟ್ಟನ್ನು ಸ್ನೇಹಿತೆ ಮುಂದೆ ಹೇಳಿಕೊಂಡಿರುವುದು ಯಾಶಿ ಜೈಸ್ವಾಲ್ ತನಿಖಾಧಿಕಾರಿಗಳು ಮುಂದೆ ಹೇಳಿಕೆ ನೀಡಿದ್ದಾಳೆ.