ಬಿಯರ್​ 
ರಾಜ್ಯ

ಸತತ 8 ತಿಂಗಳು ಆದಾಯ ಕುಸಿತ: ಬಿಯರ್ ಒಲ್ಲೆ ಎಂದ ಮದ್ಯವಸನಿಗಳು-beer

ಹರೀಶ್​​ ಕೆ.ಸಿ.
ಬೆಂಗಳೂರು: ಮದ್ಯ ವ್ಯಾಪಾರ ಹೆಚ್ಚಿಸುವಂತೆ ಅಬಕಾರಿ ಇಲಾಖೆಯಲ್ಲಿ ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಸತತ 8 ತಿಂಗಳು ಬಿಯರ್ ಮಾರಾಟ ಕುಸಿತವಾಗಿದೆ. ಅಲ್ಲದೆ, ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್)ನಲ್ಲಿಯೂ ಆದಾಯ ಇಳಿಮುಖವಾಗಿರುವುದು ಇಲಾಖೆ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.
2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 407 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮಾರಾಟವಾಗಿತ್ತು. ಪ್ರಸಕ್ತ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 403 ಲಕ್ಷ ಬಾಕ್ಸ್ ಐಎಂಎಲ್ ಸೇಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ ಶೇ.5 ಐಎಂಎಲ್ ಮಾರಾಟ ಇಳಿಮುಖವಾಗಿದೆ.2024ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 278 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು. ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 227 ಲಕ್ಷ ಬಾಕ್ಸ್ ಬಿಯರ್ ಸೇಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಇದೇ ಅವಧಿಯಲ್ಲಿ ಶೇ.51 ಮಾರಾಟ ಕುಸಿತವಾಗಿದೆ. ಸತತ 8 ತಿಂಗಳು ಬಿಯರ್ ಮಾರಾಟ ಅರ್ಧಕ್ಕರ್ಧ ಇಳಿಕೆಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಮದ್ಯ ಆದಾಯ ಗುರಿಯನ್ನು 43 ಸಾವಿರ ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ಸರ್ಕಾರ 40 ಸಾವಿರ ಕೋಟಿ ರೂ.ರಾಜಸ್ವ ಗುರಿಯನ್ನು ಸರ್ಕಾರ, ಇಲಾಖೆಗೆ ನೀಡಿತ್ತು. ಆದರೆ, ಇದೀಗ 3 ಸಾವಿರ ರೂ. ಹೆಚ್ಚಿಸಿ 43 ಸಾವಿರ ಕೋಟಿ ರೂ.ಗೆ ನಿಗದಿಪಡಿಸಿದೆ. ಆದರೆ, ನಿರಂತರವಾಗಿ ಮದ್ಯ ಆದಾಯ ಕುಂಠಿತವಾಗಿರುವ ಪರಿಣಾಮ ಇಲಾಖೆಗೆ ರಾಜಸ್ವ ಗುರಿ ಮುಟ್ಟುವ ಸವಾಲು ಎದುರಾಗುವಂತಾಗಿದೆ. ಅಲ್ಲದೆ, ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ತುಂಬಿಸುವಲ್ಲಿ ಅಬಕಾರಿ ಇಲಾಖೆ, ಇತರ ಇಲಾಖೆಗಿಂತ ಮುಂದಿದ್ದರೂ ಪ್ರಸಕ್ತ ಸಾಲಿನಲ್ಲಿ ಮದ್ಯ ಆದಾಯ ಇಳಿಮುಖವಾಗಿರುವುದು ಅಧಿಕಾರಿಗಳು ಚಿಂತೆಗೀಡಾಗಿದ್ದಾರೆ.
ಆರು ತಿಂಗಳು ವಾಲಿಡಿಟಿ:
ಸಾಮಾನ್ಯವಾಗಿ ಬೇಸಿಗೆಗಾಲದಲ್ಲಿ ಬಿಯರ್ ಮಾರಾಟ ಜಾಸ್ತಿ ಇರುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಕಡಿಮೆ ಇರುತ್ತದೆ. ಈ ಬಾರಿ ಮಾನ್ಸೂನ್ ಅವಧಿಯಲ್ಲಿ ಬಿಯರ್ ಖರೀದಿಸುವವರ ಸಂಖ್ಯೆ ಕಡಿಮೆಯಾಗಿದೆ. ಇದೀಗ ಚಳಿಗಾಲ ಇರುವುದರಿಂದ ಕೆಲವರು ಬಿಯರ್ ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ.ರಾಜ್ಯದಲ್ಲಿ ತಯಾರಿಸಿದ ಬಿಯರ್‌ಗೆ 6 ತಿಂಗಳು ಹಾಗೂ ವಿದೇಶಗಳಿಂದ ಆಮದು ಆಗುವ ಬಿಯರ್‌ಗಳಿಗೆ ವರ್ಷ ವಾಲಿಡಿಟಿ ಇರುತ್ತದೆ. ಸಂಗ್ರಹಿಸಿಟ್ಟಿರುವ ಬಿಯರ್‌ಗಳು ಆರು ತಿಂಗಳದೊಳಗೆ ಮಾರಾಟವಾಗದಿದ್ದರೆ ಅವುಗಳನ್ನು ನಾಶಪಡಿಸಬೇಕು.
ಮದ್ಯ ಕುಸಿತಕ್ಕೆ ಕಾರಣವೇನು?
ಮದ್ಯ ಬೆಲೆಯನ್ನು ತರ್ಕಬದ್ಧಗೊಳಿಸುವಿಕೆ ವೇಳೆ ಡಿಸ್ಟಿಲರಿ ಉತ್ಪಾದನಾ ಘಟಕಗಳು ಸೆಮಿ ಪ್ರೀಮಿಯಂ/ಪ್ರೀಮಿಯಂ ಮದ್ಯದ ಉತ್ಪಾದನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದ ಪರಿಣಾಮ 2 ತಿಂಗಳು ಎಣ್ಣೆ ಕೊರತೆಯಾಗಿತ್ತು. ಅಬಕಾರಿ ನೀತಿ ಪರಿಷ್ಕರಿಸಿದ ಸರ್ಕಾರ, ಮದ್ಯದ ಮೇಲೆ ಸತತವಾಗಿ ದರ ಹೆಚ್ಚಳ ಮಾಡಿತ್ತು. ಅಬಕಾರಿ ನೀತಿ ಪರಿಷ್ಕರಿಸಿದ ಪರಿಣಾಮ ಆಂಧ್ರಪ್ರದೇಶ ಸರ್ಕಾರ, ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿಭಾಗದ ಪ್ರದೇಶಗಳಲ್ಲಿ ವ್ಯಾಪಕವಾಗಿ ಸನ್ನದು ನೀಡಿರುವುದು, ಖಾಸಗಿ ವ್ಯಕ್ತಿಗಳನ್ನು ನೇಮಿಸಿಕೊಂಡು ಕರ್ನಾಟಕದಿಂದ ಆಂಧ್ರಕ್ಕೆ ಮಾರಾಟವಾಗುತ್ತಿದ್ದ ಮದ್ಯವನ್ನು ತಡೆದಿರುವುದು ಹಾಗೂ ಹೊರ ರಾಜ್ಯದ ಗ್ರಾಹಕರು ನಮ್ಮ ರಾಜ್ಯದ ಮದ್ಯವನ್ನು ಖರೀದಿಸಲು ಬರುವುದನ್ನು ನಿಯಂತ್ರಿಸಿರುವುದೂ ಸೇರಿ ವಿವಿಧ ಕಾರಣಗಳಿಂದ ಆದಾಯ ಖೋತಾವಾಗಿದೆ.ಗೋವಾದಿಂದ ಅನಧಿಕೃತವಾಗಿ ಖಾಸಗಿ ವಾಹನ, ಬೋಟ್, ದೋಣಿ ಹಾಗೂ ಯಾಂತ್ರೀಕೃತ ಬೋಟ್‌ಗಳ ಮೂಲಕ ಮದ್ಯ ಸಾಗಿಸಿ ರಾಜ್ಯದಲ್ಲಿ ಮಾರಾಟ ಮಾಡುತ್ತಿರುವುದು ಸರ್ಕಾರಕ್ಕೆ ಹತ್ತಾರು ಕೋಟಿ ರೂ.ಆದಾಯ ನಷ್ಟವಾಗುತ್ತಿದೆ.
ಜಾಸ್ತಿ ಕೇಸ್ ದಾಖಲಿಸಿ
ಪ್ರತಿ ಮದ್ಯದಂಗಡಿಯಲ್ಲಿ ವಾರಕ್ಕೆ ಇಂತಿಷ್ಟು ಬಾಕ್ಸ್ ಸೇಲ್‌ವಾಗುವಂತೆ ಮೇಲಾಧಿಕಾರಿಗಳು, ಕೆಳಹಂತದ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ‘ಟಾರ್ಗೆಟ್ ಸಂಸ್ಕೃತಿ’ದಿಂದ ಅಬಕಾರಿ ಆಯುಕ್ತ, ಅಧೀಕ್ಷಕ, ಉಪ ಆಧೀಕ್ಷಕ, ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಮತ್ತು ಪೇದೆಗಳು ರೋಸಿ ಹೋಗಿದ್ದಾರೆ. ಅನಧಿಕೃತ ಮದ್ಯ ಮಾರಾಟ ಹೆಸರಿನಲ್ಲಿ ಮದ್ಯದಂಗಡಿಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸುವಂತೆ ಕೆಳಹಂತದ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗುತ್ತಿದೆ. ಪ್ರತಿ ಬಾರಿ ಮೀಟಿಂಗ್‌ನಲ್ಲಿ ಕಡಿಮೆ ಕೇಸ್ ದಾಖಲಿಸುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ.