ಯಾದಗಿರಿ ನಗರದ ಹೃದಯ ಭಾಗದಲ್ಲಿರುವ ಕೇಂದ್ರೀಯ ಬೀಡಿ ಕಾರ್ಮಿಕರ ಆಸ್ಪತ್ರೆ ಕಟ್ಟಡದ ನೋಟ.
ಹಿಂದುಳಿದ ಗಿರಿಜಿಲ್ಲೆಯ ಬೀಡಿ ಕಟ್ಟುವ ಕಾರ್ಮಿಕರಿಗಾಗಿಯೇ ಕಳೆದ 15 ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ನಿರ್ಮಿಸಿದ್ದ ಕೇಂದ್ರೀಯ 15 ಹಾಸಿಗೆಯುಳ್ಳ ಬೀಡಿ ಕಾರ್ಮಿಕ ಆಸ್ಪತ್ರೆಗೆ ಕೊನೆಮಳೆ ಹೊಡೆಯುವ ಸ್ಥಿತಿ (ಮುಚ್ಚುವ)ಬಂದಿದ್ದರೂ ಸಂಬಂಧಪಟ್ಟವರು ಕ್ಯಾರೆ ಎನ್ನುತ್ತಿಲ್ಲ. ಇದರಿಂದಾಗಿ ಇರುವ ನೂರಾರು ಬೀಡಿ ಕಾರ್ಮಿಕರು ಸೂಕ್ತ ಚಿಕಿತ್ಸೆಗಾಗಿ ಪರದಾಟ ನಡೆಸುತ್ತಿದ್ದರೇ ಅಗತ್ಯ ಸಿಬ್ಬಂದಿ ಇಲ್ಲದೆ ಆಸ್ಪತ್ರೆ ಬಿಕೋ ಎನ್ನುತ್ತಿದೆ.
2011ರಲ್ಲಿ ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಹಾಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ರ್ಖಗೆ ಅವರ ಅನೇಕ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಗಳಲ್ಲಿ ಈ ಕೇಂದ್ರೀಯ ಬೀಡಿ ಕಾರ್ಮಿಕರ ಆಸ್ಪತ್ರೆ ಕೂಡ ಒಂದಾಗಿತ್ತು. ಅದರಂತೆ ನಗರದ ಹೃದಯ ಭಾಗದಲ್ಲಿ ನಾಲ್ಕು ಎಕರೆ ಜಾಗದಲ್ಲಿ 4 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ಕಟ್ಟಡ ಮತ್ತು ಅಗತ್ಯ ಉಪಕರಣ ಹಾಗೂ 5 ಕೋಟಿ ರೂ.ವೆಚ್ಚದಲ್ಲಿ ಸಿಬ್ಬಂದಿ ವಸತಿ ಗೃಹಗಳು ನಿರ್ಮಾಣಗೊಂಡಿತ್ತು.
ಆಗಿನ ಕಾಲದಲ್ಲಿ ಜಿಲ್ಲೆಯಲ್ಲಿ ಬೀಡಿ ಉತ್ಪಾದನೆ ಜೋರಾಗಿತ್ತು. ಇದಕ್ಕಾಗಿಯೇ ಸುಮಾರು 15 ಸಾವಿರ ಕಾರ್ಮಿಕರ ಜತೆ ಇತರೆ ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು. ಇವರ ಆರೋಗ್ಯದ ದೃಷ್ಟಿಯಿಂದ ಕಾರ್ಮಿಕ ಸಚಿವರಾಗಿದ್ದ ರ್ಖಗೆ ಅವರು ಬೀಡಿ ಕಾರ್ಮಿಕರ ಕಲ್ಯಾಣ ವಿಭಾಗದಿಂದ ಇಲ್ಲಿ ಆಸ್ಪತ್ರೆ ಮಂಜೂರು ಮಾಡಿಸಿ, ಅದನ್ನು ಸೂಸಜ್ಜಿತವಾಗಿ ನಿರ್ಮಿಸಿ ಅವರೇ 2011ರ ಅ.2ರಂದು ಲೋಕಾರ್ಪಣೆ ಕೂಡ ಮಾಡಿದ್ದರು.
ರಾಜ್ಯ ಸರ್ಕಾರದ ಆಗಿನ ಆರೋಗ್ಯ ಮಂತ್ರಿ ಡಾ.ಎ.ಬಿ.ಮಲಕರೆಡ್ಡಿ ಅವರು ಇದಕ್ಕೆ ಬೇಕಾದ ಸೌಲಭ್ಯ ಸಹ ರಾಜ್ಯ ಸರ್ಕಾರದಿಂದ ಒದಗಿಸಿದ್ದರು. ಸುಮಾರು 10&12ವರ್ಷಗಳ ಕಾಲ ಈ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿತ್ತು. ಪ್ರಮುಖ ಒಂಭತ್ತು ರೋಗಗಳನ್ನು ಗುರುತಿಸಿ ಅವುಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರತಿ ಕಾರ್ಮಿಕರಿಗೂ 1 ಲದಿಂದ ರೂ. 3 ಲ ರೂವರೆಗೆ ಧನ ಸಹಾಯ ನೀಡಲಾಗುತ್ತಿತ್ತು. ರೋಗಕ್ಕೆ ತುತ್ತಾದ ಕಾರ್ಮಿಕರಿಗೆ ಏಳು ನೂರರಿಂದ ಒಂದು ಸಾವಿರ ಮಾಸಾಸನ ಕೂಡ ಕೊಡುವ ವ್ಯವಸ್ಥೆ ಇತ್ತು.
ಕೇಮಕ ಮಾಡದ ಕೇಂದ್ರ ಕಾರ್ಮಿಕ ಇಲಾಖೆ
ಒಟ್ಟು ಇರಬೇಕಾದ ಐದು ಜನ ವೈದ್ಯರಲ್ಲಿ ಇಬ್ಬರಿದ್ದಾರೆ. ಇವರಲ್ಲಿ ಓರ್ವ ಮಹಿಳಾ ವೈದ್ಯರು ಕಡ್ಡಾಯವಾಗಿ ಇರಬೇಕು. ಹೀಗಾಗಿ ಮೂರು ಜನ ವೈದ್ಯರ ಕೊರತೆ ಮತ್ತು ಮುಖ್ಯವಾಗಿ ನಾಲ್ಕು ಕಾಯಂ ನರ್ಸ್ ಹುದ್ದೆಗಳಿದ್ದು, ಕಳೆದ ಒಂದೆರಡು ವರ್ಷಗಳಿಂದ ಕೇವಲ ಒಬ್ಬರೇ ನರ್ಸ್ ಕರ್ತವ್ಯದಲ್ಲಿದ್ದಾರೆ. ಅವರು ಪೂರ್ಣ ಪ್ರಮಾಣದ ನರ್ಸ್ ಸಿಬ್ಬಂದಿ ಅಲ್ಲ. (ಸಿಸ್ಟರ್ಇನ್ ಎಂಬ ಹುದ್ದೆಯಲ್ಲಿ ಇರುವ ಸಿಬ್ಬಂದಿ), ಇದ್ದ ಓರ್ವ ಲ್ಯಾಬ್ ತಂತ್ರಜ್ಞನನ್ನು ಮೈಸೂರಿಗೆ ವರ್ಗಾಯಿಸಲಾಗಿದೆ. ಹೀಗಾಗಿ ಈ ಹುದ್ದೆಯೂ ಖಾಲಿ ಇದೆ. ಬಹುತೇಕ ಇಲ್ಲಿ ಅಗತ್ಯವಾಗಿ ಇರಬೇಕಾದ ಹುದ್ದೆಗಳೆಲ್ಲವೂ ಖಾಲಿ ಇದ್ದು, ನೇಮಕ ಮಾಡುವ ಗೋಜಿಗೆ ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ ಮಾಡುತ್ತಿಲ್ಲ. ಹೊರಗುತ್ತಿಗೆ ಆಧಾರದ ಮೇಲೂ ಬೇಕಾದ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಅವಕಾಶ ಇದ್ದರೂ ಇತ್ತ ಕಣ್ಣೆತ್ತಿ ಸಹ ಯಾರು ನೋಡುತ್ತಿಲ್ಲ ಎಂದು ದೂರುಗಳು ಕೇಳಿಬರುತ್ತಿವೆ.
ಚಿಕಿತ್ಸೆಗಾಗಿ ಕಾರ್ಮಿಕರ ಪರದಾಟ
ಈಗ ಜಿಲ್ಲೆಯಲ್ಲಿ ಬೀಡಿ ಕಾರ್ಮಿಕರು ಅಂತ ಉಳಿದಿರುವವರು ಕೇವಲ ಒಂದು ಸಾವಿರ ಮಾತ್ರ. ಅವರೆಲ್ಲ ತಮ್ಮ ಆರೋಗ್ಯ ಕೆಟ್ಟರೆ ಇದೇ ಆಸ್ಪತ್ರೆಯನ್ನೇ ನೆಚ್ಚಿಕೊಂಡು ಬರುತ್ತಾರೆ. ಕಾರ್ಮಿಕರ ಜತೆಗೆ ಕುಟುಂಬದವರು ಸಹ ಇಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿರುವುದರಿಂದ ನಿತ್ಯ ನೂರಾರು ಜನರು ಚಿಕಿತ್ಸೆಗಾಗಿ ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ ವೈದ್ಯರಿಲ್ಲದೇ, ಕಾಯಂ ನರ್ಸ್ಗಳು ಇಲ್ಲದೆ ಮತ್ತು ಲ್ಯಾಬ್ ತಂತ್ರಜ್ಞನಿಲ್ಲದೇ ನಿತ್ಯವೂ ಪರದಾಟ ನಡೆದಿದೆ.
ಮೈಸೂರು ಬಿಟ್ಟರೆ ಯಾದಗಿರಿಯಲ್ಲಿ
ಕೇಂದ್ರೀಯ ಬೀಡಿ ಕಾರ್ಮಿಕರ ಆಸ್ಪತ್ರೆ ಎಂದರೆ ರಾಜ್ಯದಲ್ಲಿ ಎರಡು ಕಡೆ ಮಾತ್ರ. ಒಂದು ಯಾದಗಿರಿ ಮತ್ತೊಂದು ಮೈಸೂರು. ಹಿಂದುಳಿದ ಜಿಲ್ಲೆಗೆ ರ್ಖಗೆ ಅವರು ಮಹತ್ವದ ಕೊಡುಗೆ ಅಂದು ಕೊಟ್ಟಿದ್ದಾರೆ. ಆದರೆ ಅದನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿದೆ. ಆದರೆ ಕಳೆದ ಐದಾರು ವರ್ಷಗಳಿಂದ ನೂರಕ್ಕೆ ನೂರಷ್ಟು ರ್ನಿಲಕ್ಷಕ್ಕೆ ಈ ಆಸ್ಪತ್ರೆ ಒಳಗಾಗಿದೆ. ಆದರೆ ಮೈಸೂರಿನ ಆಸ್ಪತ್ರೆ ಸಕಲ ಸೌಲಭ್ಯ ಹೊಂದಿದೆ.
"
ಮಲ್ಲಿಕಾರ್ಜುನ ರ್ಖಗೆ ಅವರು ಅಂದು ಮಾಡಿರುವ ಈ ಬಹುದೊಡ್ಡ ಕೆಲಸವಾದ ಬೀಡಿ ಕಾರ್ಮಿಕರ ಆಸ್ಪತ್ರೆಗೆ ಬೇಕಾದ ಸಿಬ್ಬಂದಿ ಮತ್ತು ಇತರೆ ಸೌಲಭ್ಯಗಳಿಗಾಗಿ ಕೂಡಲೇ ಕೇಂದ್ರ ಸರ್ಕಾರದ ಕಾರ್ಮಿಕ ಸಚಿವರೊಂದಿಗೆ ಮಾತುಕತೆ ಮಾಡುವೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವೆ.
— ಜಿ.ಕುಮಾರ ನಾಯಕ ಸಂಸದ ಯಾದಗಿರಿ-ರಾಯಚುರು