Become good people and repay your debt to society.
ತುರುವೇಕೆರೆ: ವಿದ್ಯೆ ಎಂಬುದು ಸಾಧಕನ ಸ್ವತ್ತೇ ವಿನಾ, ಸೋಮಾರಿಯ ಸ್ವತ್ತಲ್ಲ. ಹಠ, ಛಲದಿಂದ ಸಂಪಾದಿಸಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಪಿ.ಪಾಪಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಹಾಗೂ ಇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಸಾಧನೆ ಇಲ್ಲದೇ ಸತ್ತರೆ ಸಾವಿಗೆ ಅವಮಾನ, ಉತ್ತಮವಾಗಿ ಬಾಳದೇ ಸತ್ತರೆ ಬದುಕಿಗೆ ಅವಮಾನ. ದೇಶ ನಮಗೇನು ಕೊಟ್ಟಿದೆ ಎಂದು ಪ್ರಶ್ನಿಸುವುದಕ್ಕಿಂತ ನಾವು ದೇಶಕ್ಕೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ನಾವು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಭಾರವಾಗದೇ ನಮ್ಮಿಂದ ಆಗುವ ಉಪಕಾರಗಳನ್ನು ಮಾಡಿ ಸಮಾಜದ ಋಣ ತೀರಿಸಿದರೆ ಅದುವೇ ದೇಶಕ್ಕೆ ನಾವು ಕೊಡುವ ಕೊಡುಗೆಯಾಗಿದೆ ಎಂದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿ.ಎನ್.ನಂಜೇಗೌಡ ಮಾತನಾಡಿ, ಶಿಸ್ತಿರುವ ಕಡೆ ಶಿಕ್ಷಣ ಸಿಗಲಿದೆ. ಇಂದು ಪ್ರಪಂಚ ವಿಶಾಲವಾಗಿದೆ. ಕೈ ಬೆರಳ ತುದಿಯಲ್ಲೇ ವಿಶ್ವವನ್ನು ಕಾಣಬಹುದಾಗಿದೆ. ವಿದ್ಯಾರ್ಥಿಗಳು ಹೆಚ್ಚೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು. ವಿಷಯಾಧಾರಿತ ಶಿಕ್ಷಣದಲ್ಲಿ ಆಸಕ್ತಿ ತೋರಬೇಕು. ಸರ್ಕಾರಿ ಶಾಲೆಗಳೆಂದರೆ ಜನರಲ್ಲಿ ತಾತ್ಸಾರ ಮನೋಭಾವ ಮೂಡಿದೆ. ಸರ್ಕಾರಿ ಶಾಲೆಗಳಲ್ಲಿ ಉತ್ತಮ ಜ್ಞಾನ ಹೊಂದಿರುವ ಶಿಕ್ಷಕರು, ಉಪನ್ಯಾಸಕರು ಇದ್ದಾರೆ. ಹಲವಾರು ಸೌಲಭ್ಯಗಳು ಉಚಿತವಾಗಿ ದೊರೆಯುತ್ತಿದೆ. ಹಾಗಾಗಿ ತಾತ್ಸಾರ ಬಿಟ್ಟು ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ಮನವಿ ಮಾಡಿದರು.
ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಈ.ರಾಜು, ಕನ್ನಡ ಉಪನ್ಯಾಸಕ ಡಾ.ಚಂದ್ರಯ್ಯ, ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಬಿ.ಜಿ.ವೆಂಕಟೇಶ್, ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ನರೇಂದ್ರಬಾಬು, ಇತಿಹಾಸ ಉಪನ್ಯಾಸಕ ವಿಜಯಕುಮಾರ್, ರಾಷ್ಟ್ರೀಯ ಸೇವಾ ಯೋಜನೆಯ ಯತೀಶ್ ಕುಮಾರ್, ಮನೋರಂಜನ್, ಕೃಷ್ಣವೇಣಿ, ಯುವ ರೆಡ್ ಕ್ರಾಸ್ ಸಂಸ್ಥೆಯ ವೆಂಕಟೇಶ್, ರಾಘವೇಂದ್ರ, ರಾಜೇಂದ್ರ, ಸಾಂಸತಿಕ ಕಾರ್ಯದರ್ಶಿ ಪಿ.ಬಿ.ಕುಮಾರ್ ಇದ್ದರು.