ಆಳಂದ ತಾಲೂಕಿನ ಹಳ್ಳಿಸಲಗರದಲ್ಲಿ ಮಂಗಳವಾರ ನಡೆದ ಸದ್ಭಾವನಾ ಪಾದಯಾತ್ರೆಯಲ್ಲಿ ಕೊಪ್ಪಳದ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ, ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಇತರರಿದ್ದರು.
- ಕೊಪ್ಪಳ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹಿತೋಪದೇಶ
- ಹಳ್ಳಿಸಲಗರದಲ್ಲಿ ಸದ್ಭಾವನಾ ಪಾದಯಾತ್ರೆ
ಆಳಂದ: ಬಾಲ್ಯದಿಂದಲೇ ಮಕ್ಕಳಿಗೆ ಉತ್ತಮನಾಗುವ ಜತೆ ಉಪಕಾರಿಯಾಗಬೇಕು ಎಂಬ ತಿಳಿವಳಿಕೆ ನೀಡಿದರೆ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯ ಎಂದು ಕೊಪ್ಪಳ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಶ್ರೀ ಮಲ್ಲಿಕಾರ್ಜುನ ಜಾತ್ರೋತ್ಸವ ನಿಮಿತ್ತ ಹಳ್ಳಿಸಲಗರದಲ್ಲಿ ಮಂಗಳವಾರ ಸದ್ಭಾವನಾ ಪಾದಯಾತ್ರೆಯಲ್ಲಿ ನೇತೃತ್ವ ವಹಿಸಿದ್ದ ಅವರು ಬಸವೇಶ್ವರ ಪುತ್ಥಳಿ ಬಳಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ದೇಶದ ಅಪ್ರತಿಮ ಜ್ಞಾನಿ ಶ್ರೀ ವ್ಯಾಸ ಮಹರ್ಷಿಗಳು 18 ಪುರಾಣ ಬರೆದಿದ್ದಾರೆ. ಒಂದು ದಿವಸ ಒಬ್ಬ ರೈತ ನೀವು 18 ಪುರಾಣ ಬರೆದಿದ್ದೀರಿ. ಅದರಲ್ಲಿನ ಸಾರಾಂಶ ಕೇವಲ ಎರಡು ಮಾತಿನಲ್ಲಿ ಹೇಳಬಹುದೇ ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ಮಹರ್ಷಿಗಳು 18 ಪುರಾಣಗಳ ಸಾರಾಂಶವಿಷ್ಟೆ ಪರೋಪಕಾರ ಪುಣ್ಯಂ, ಪಾಪಾಯ ಪರಮೀಡನಾ.. ಇನ್ನೂ ಉತ್ತಮನಾಗು ಲೋಕಕ್ಕೆ ಉಪಕಾರಿಯಾಗು ಎಂರ್ಬಥ ಎಂದು ಉತ್ತರಿಸಿದರು ಎಂದರು.
ಮನುಷ್ಯ ಬೇಡಿದ್ದನ್ನು ನಿಸರ್ಗ ಕೊಡುತ್ತೆ. ಮರಕ್ಕೆ ಮಣ್ಣು ಹಾಕಿದರೆ ಹಣ್ಣು ಕೊಡುತ್ತದೆ. ಆಕಳು ಮುಸರಿ ನೀರು ಕುಡಿದು ಹಾಲು ಕೊಡುತ್ತದೆ. ಟೆಂಗಿನ ಗಿಡಕ್ಕೆ ಬಚ್ಚಲು ನೀರು ಬಿಟ್ಟರೆ ತಿಳಿನೀರು ಕೊಡುತ್ತದೆ. ಆದರೆ ಮನುಷ್ಯ ಹಾಗಲ್ಲ. ಮುಸರಿ ನೀರು ಕುಡಿದು ಹುಲ್ಲು ತಿಂದು ಆಕಳು ಹಾಲು ಕೊಟ್ಟರೆ, ಅದನ್ನು ಕುಡಿದ ಮನುಷ್ಯ ಕೊಟ್ಟಿದ್ದನ್ನು ತೆಗೆದುಕೊಂಡು ನಿಸರ್ಗ ಒಳ್ಳೆಯದನ್ನು ನೀಡುತ್ತದೆ ಎಂದ ಪೂಜ್ಯರು, ಪಾಲಕರು ದೇವರ ಗುಡಿಗೆ ಹೋಗಿ ಹರಕೆ ಹೊತ್ತು ದೊಡ್ಡವನಾಗಿಸುವುದು ಬೇಡ. ಸಂಸ್ಕಾರವೇ ಸಂಪತ್ತು. ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯಾಗಿ ಮಾಡಬೇಕು. ನೀವು ಕೊಟ್ಟ ಸಂಪತ್ತು ಯಾವ ರೀತಿ ಬಳಸಬೇಕು ಎಂಬ ಸಂಸ್ಕಾರ ಕೊಡುವುದು ಅತಿ ಅವಶ್ಯಕ ಎಂದು ತಿಳಿಹೇಳಿದರು.
ಇಂದಿನ ದಿನಗಳಲ್ಲಿ ಹೆಚ್ಚು ಮಕ್ಕಳು ಮೊಬೈಲ್ಗೆ ಆದ್ಯತೆ ಕೊಡುತ್ತಾರೆ. ಅದನ್ನು ಬಿಡಿಸಬೇಕಾದರೆ ಮೊದಲು ಪಾಲಕರೇ ಮೊಬೈಲ್ ಬಿಡಬೇಕು. ಹೃದಯದಲ್ಲಿ ಹೊಲಸು ಇರಬಾರದು. ಒಳ್ಳೆಯ ಸಂಸ್ಕಾರದಿಂದ ಕೂಡಿರಬೇಕು ಎಂದರು.
ಮಾದನಹಿಪ್ಪರಗಾ ಶ್ರೀ ಅಭಿವನ ಶಿವಲಿಂಗ ಸ್ವಾಮೀಜಿ, ಪ್ರಮುಖರಾದ ಸುಲ್ತಾನಪ್ಪ ವಾಗ್ಧರಗಿ, ಬಸವಂತರಾವ ಪಾಟೀಲ್, ಬಿ.ಸಿ.ಪಾಟೀಲ್, ಶರಣಗೌಡ ಪಾಟೀಲ್, ಸೂರ್ಯಕಾಂತ ಸರಸಂಬಿ, ಗುರು ಪಾಟೀಲ್, ರಾಚಣ್ಣಪ್ಪ ವಾಗ್ಧರಗಿ, ಬಸವರಾಜ ದೊಡ್ಡಮನಿ, ವೀರುಪಾಕ್ಷಯ್ಯ ಸ್ವಾಮಿ, ರಮೇಶ ಬಿರಾದಾರ, ಸಿದ್ಧಾರೂಢ ಸರಸಂಬಿ, ಬಸವರಾಜ ಸರಸಂಬಿ, ಚಾಂದಸಾಬ್ ಮುಲ್ಲಾ , ದತ್ತಾತ್ರೇಯ ವಾಗ್ಮರೆ, ಗುರುಬಸಪ್ಪ ವಾಗ್ಮರೆ, ಮಲ್ಲಿಕಾರ್ಜುನ ಕೋಗನೂರೆ, ಜಯಪ್ರಕಾಶ ಪಾಟೀಲ್, ಮಹಾದೇವ ಶೇರಿಕಾರ ಇತರರಿದ್ದರು.
ಶ್ರೀಗಳ ಸದ್ಭಾವನಾ ಪಾದಯಾತ್ರೆ ಹಿನ್ನೆಲೆಯಲ್ಲಿ ಇಡೀ ಗ್ರಾಮ ಸ್ವಚ್ಛತೆಯೊಂದಿಗೆ ಕಂಗೊಳಿಸುತ್ತಿತ್ತು. ಊರಿನ ಪ್ರತಿ ಮನೆಯಲ್ಲಿ ರಂಗೋಲಿ, ದೀಪ ಬೆಳಗಿಸಿದ್ದು ಕಂಡುಬಂದಿತು.