ವಿಜಯಪುರ ನಗರದ ಪಾಲಿಕೆಯ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮೇಯರ್ ಎಂ.ಎಸ್. ಕರಡಿ ಮಾತನಾಡಿದರು. ಸುಮಿತ್ರಾ ಜಾಧವ, ವಿಜಯಕುಮಾರ ಮೆಕ್ಕಳಕಿ ಇದ್ದಾರೆ.
- ಪಾಲಿಕೆ ಮೇಯರ್ ಎಂ.ಎಸ್. ಕರಡಿ ಸೂಚನೆ
- ವಿವಿಧ ಇಲಾಖೆ ಅಧಿಕಾರಿಗಳ ಸಭೆ
ವಿಜಯಪುರ: ನಗರದಲ್ಲಿ ಮಳೆಯಿಂದ ಸಂಗ್ರಹವಾಗುವ ಮಳೆ ನೀರನ್ನು ಸರಾಗವಾಗಿ ಹರಿದು ಹೋಗಲು ಕೋಟೆ ಗೋಡೆ ಸುತ್ತಲಿನ ಕಂದಕಗಳು ಹಾಗೂ ರಾಜ ಕಾಲುವೆಗಳಲ್ಲಿ ಸಂಗ್ರಹಣೆಯಾಗಿರುವ ಮಣ್ಣು ಹಾಗೂ ಹೂಳನ್ನು ತೆಗೆಯುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ ಸಂಬಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪಾಲಿಕೆಯ ಸಭಾ ಭವನದಲ್ಲಿ ಪ್ರವಾಹ ಎದುರಾದಲ್ಲಿ ಸಮರ್ಥವಾಗಿ ಎದುರಿಸುವ, ಬೀದಿ ದೀಪ, ಸ್ವಚ್ಛತೆ, ನೀರು ಪೂರೈಕೆ ಕುರಿತಾಗಿ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ನಗರದಲ್ಲಿರುವ ಅಪಾಯಕಾರಿ ಮರ ಮತ್ತು ಅನೇಕ ಮರಗಳ ಟೊಂಗೆಗಳು ವಿದ್ಯುತ್ ತಂತಿಗೆ ತಗುಲಿ ವಿದ್ಯುತ್ ಸಂಪರ್ಕ ಹಾಗೂ ಯಾವುದೇ ಹಾನಿಯಾಗದಂತೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳಬೇಕು. ಮಳೆಗಾಲದಲ್ಲಿ ಮುಂಜಾಗ್ರತೆಯಾಗಿ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಳೆಗಾಲದ ಸನ್ನಿವೇಶದಲ್ಲಿ ತುರ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಪಾಲಿಕೆಯ ಎಲ್ಲ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿ ಕಾರ್ಯ ನಿರ್ವಹಿಸಬೇಕು ಎಂದರು.
ಪಾಲಿಕೆಯ ಇತರೆ ಸದಸ್ಯರು ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ನೀರು ನುಗ್ಗಿ ಜನ ಜೀವನಕ್ಕೆ ತೊಂದರೆ ಉಂಟಾಗದಂತೆ ಹಾಗೂ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ಅನಾನುಕೂಲವಾಗದ ನಿಟ್ಟಿನಲ್ಲಿ ಈ ಕುರಿತು ಮುಂಜಾಗೃತ ಕ್ರಮವಾಗಿ ಅವಶ್ಯಕ ಕಾಮಗಾರಿಗಳನ್ನು ಕೈಗೊಂಡು ಪ್ರವಾಹ ಪರಿಸ್ಥಿತಿಯಾಗದಂತೆ ಪರಿಹಾರ ಕ್ರಮ ತೆಗೆದುಕೊಳ್ಳಬೇಕು. ಅಪಾಯಕಾರಿ ರೀತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರ ಮಾಡುವಂತೆ ಹಾಗೂ ಹೊಸದಾಗಿ ವಿದ್ಯುತ್ ಕಂಬಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಹಾಗೂ ಜಾನುವಾರುಗಳ ಜೀವಕ್ಕೆ ಹಾನಿಯಾಗದಂತೆ ಕ್ರಮ ವಹಿಸುವಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಯುಜಿಡಿ ಚೇಂಬರ್‌ಗಳನ್ನು ಮುಂಜಾಗ್ರತವಾಗಿ ಎಲ್ಲ ಒಳ ಚರಂಡಿಗಳನ್ನು ಸ್ವಚ್ಛಗೊಳಿಸಿ ಯಾವುದೇ ತ್ಯಾಜ್ಯ ಚರಂಡಿಯಲ್ಲಿ ಬ್ಲಾಕ್ ಆಗದಂತೆ ಕ್ರಮ ವಹಿಸಬೇಕು. ನಗರದಲ್ಲಿ ಪ್ರಸ್ತುತ ಕುಡಿಯುವ ನೀರು ಸರಬರಾಜು ಪ್ರಕ್ರಿಯೆಯಲ್ಲಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಕ್ರಮ ವಹಿಸುವಂತೆ, ಈ ವಿಷಯಗಳ ಬಗ್ಗೆ ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸುವಂತೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ತಿಳಿಸಿದರು.