ಕಲಬುರಗಿ ಡಿಸಿ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಸ್ತುವಾರಿ ಕಾರ್ಯದರ್ಶಿ ಸುಭೋದ್​ ಯಾದವ್​ ಮಾತನಾಡಿದರು. ಡಿಸಿ ಇಕ್ರಮ್​ ಶರೀಫ್​, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಅಪರ ಡಿಸಿ ರಾಯಪ್ಪ ಹುಣಸಗಿ, ಎಸಿ ಸಾಹಿತ್ಯ ಆಲದಕಟ್ಟಿ ಇತರರಿದ್ದರು. 
ರಾಜ್ಯ

ಬರ ಪರಿಸ್ಥಿತಿ ಎದರಿಸಲು ಸನ್ನದ್ಧರಾಗಿ

ಪ್ರಮುಖ ಮುಖ್ಯಾಂಶಗಳು

  • ಉಸ್ತುವಾರಿ ಕಾರ್ಯದರ್ಶಿ ಸುಭೋದ್​ ಯಾದವ್​ ಸೂಚನೆ
  • ಕಲಬುರಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆ
ಕಲಬುರಗಿ: ಪ್ರಸಕ್ತ ವರ್ಷ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬರದ ಛಾಯೆ ಆವರಿಸುವ ಸಾಧ್ಯತೆ ಇದ್ದು, ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಜ್ಜಾಗಬೇಕೆಂದು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಭೋದ್​ ಯಾದವ್​ ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಬರ ಪರಿಸ್ಥಿತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮೊದಲ ಆದ್ಯತೆಯಾಗಬೇಕು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ದಾಸ್ತಾನು ಮಾಡಿಡಬೇಕು. ಜಿಲ್ಲೆಯಲ್ಲಿ ಸುರಿದ ಮಳೆ ಪ್ರಮಾಣ ಮಾಪನ ಮಾಡಬೇಕಾದ ರೇನ್​ ಗೇಜ್​ ಸ್ಟೇಷನ್​ ಕೆಲವೆಡೆ ಕಾರ್ಯನಿರ್ವಹಿಸುತ್ತಿಲ್ಲ. ಸಮರ್ಪಕ ಕಾರ್ಯನಿರ್ವಹಣೆ ಇಲ್ಲದಿದ್ದರೆ ಮಳೆ ನಿಖರ ಪ್ರಮಾಣ ಸಿಗುವುದು ಕಷ್ಟ. ಈ ಎಲ್ಲ ಸ್ಟೇಷನ್​ಗಳ ದುರಸ್ತಿ ಮಾಡಬೇಕು ಎಂದು ತಾಕೀತು ಮಾಡಿದರು.
ಜಂಟಿ ಕೃಷಿ ನಿರ್ದೇಶಕ ಸಮದ್​ ಪಟೇಲ್​ ಮಾತನಾಡಿ, ಈಗಾಗಲೆ ಕೆಎಸ್​ಎನ್​ಡಿಎಂಸಿ ಸಂಸ್ಥೆಯಿಂದ ಟೆಂಡರ್​ ಕರೆದಿದ್ದು, ದುರಸ್ತಿ ಕಾರ್ಯ ನಡೆದಿದೆ ಎಂದು ಉತ್ತರಿಸಿದರು.
ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಬಾವಿ, ಕೊಳವೆಬಾವಿ ಜಲಮೂಲಗಳ ನೆರವಿನಿಂದ ನೀರು ಪೂರೈಸಬೇಕು. ನಗರದಲ್ಲಿ ನಡೆದಿರುವ ನಿರಂತರ ಕುಡಿಯುವ ನೀರು ಯೋಜನೆ ಕಾಮಗಾರಿ ವೇಗ ಹೆಚ್ಚಿಸಬೇಕು. ಸಮಸ್ಯೆ ಇದ್ದ ಕಡೆ ಟ್ಯಾಂಕರ್​ ನೀರು ಪೂರೈಸಬೇಕು ಎಂದು ಸೂಚಿಸಿದರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ, ನಗರದ ಜನತೆಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ನಾರಾಯಣಪುರ ಜಲಾಶಯದಿಂದ ನೀರು ತರುವ ಪೈಪ್​ಲೈನ್​ ಕಾಮಗಾರಿಯ 1850 ಕೋಟಿ ರೂ. ಮೊತ್ತದ ಯೋಜನೆ ಡಿಪಿಆರ್​ ಸಿದ್ಧವಾಗಿದೆ. ಪ್ರಸಕ್ತ ನಗರದಲ್ಲಿ ನೀರಿನ ಸಮಸ್ಯೆ ಇದ್ದ ವಾರ್ಡ್​ಗಳಲ್ಲಿ ನಿತ್ಯ 200 ಟ್ಯಾಂಕರ್​ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಂಜಯ್​ ರೆಡ್ಡಿ ಮಾತನಾಡಿ, ಮುಂದಿನ 34 ವಾರಕ್ಕೆ ಬೇಕಾಗುವ ಮೇವು ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಮಾಹಿತಿ ನೀಡಿದರು.
ಬೆಳೆ ವಿಮೆ ನೋಂದಣಿ ಹೆಚ್ಚಿಸಿ
ಕಳೆದ ವರ್ಷ ಜಿಲ್ಲೆಗೆ 650 ಕೋಟಿ ರೂ. ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ರೈತರಿಗೆ ಅನುಕೂಲವಾಗಿದೆ. ಈ ವರ್ಷ ಬರದ ಛಾಯೆ ಆವರಿಸಿರುವುದರಿಂದ ರೈತಾಪಿ ಜನರು ಕರ್ನಾಟಕ ರೈತ ಸುರಾ ಪ್ರಧಾನಮಂತ್ರಿ ಫಸಲ್​ ಬಿಮಾ (ವಿಮಾ) ಯೋಜನೆಯಡಿ ನೋಂದಣಿ ಮಾಡಿಕೊಂಡಲ್ಲಿ ರೈತರ ನೆರವಿಗೆ ಬರಲಿದೆ. ಹೀಗಾಗಿ ರೈತರಲ್ಲಿ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಕುರಿತು ಚರ್ಚೆಯಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ 5 ಗ್ರಾಮಗಳಿಗೆ ಟ್ಯಾಂಕರ್​ ಮೂಲಕ ಮತ್ತು 35 ಗ್ರಾಮಗಳಿಗೆ ಖಾಸಗಿ ಬೋರವೆಲ್​ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಪ್ರತಿ ವರ್ಷ 168 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಜಗದೇವಪ್ಪ ಜೀವಣಗಿ ತಿಳಿಸಿದರು.
ಕಾಮಗಾರಿ ವಿಳಂಬಕ್ಕೆ ಅಸಮಾಧಾನ
ಕೆಕೆಆರ್​ಡಿಬಿ ಮಂಡಳಿ ಅನುದಾನದಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಯಾದವ್​, ಕಳೆದ 2024&25ನೇ ಸಾಲಿನಲ್ಲಿ ಮಂಜೂರಾದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದರೂ ಈವರೆಗೆ ಕೆಲ ಕಾಮಗಾರಿ ಆರಂಭಿಸಿದ ಲೋಕೋಪಯೋಗಿ ಇಲಾಖೆ, ಕೆಆರ್​ಐಡಿಎಲ್​ ಕಾರ್ಯಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಎರಡು ವರ್ಷವಾದರೂ ಕಾಮಗಾರಿ ಆರಂಭಿಸಿಲ್ಲ ಎಂದಾದರೆ ಮುಗಿಸುವುದು ಯಾವಾಗ ಎಂದು ಇಇಗಳಿಗೆ ಪ್ರಶ್ನಿಸಿದ ಅವರು, ನಿಮಗೆ ಕೆಲಸ ಹೆಚ್ಚಾದರೆ ಈ ಕಾಮಗಾರಿ ಯಾಕೆ ವಹಿಸಿಕೊಂಡಿದ್ದೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಮಂಡಳಿ ಕಾರ್ಯದರ್ಶಿ ನಲಿನ್​ ಅತುಲ್​, ಅಪರ ನಿರ್ದೇಶಕಿ ಪ್ರವಿಣ್​ ಪ್ರಿಯಾ ಜಿಲ್ಲೆಯಲ್ಲಿ ನಡೆಯುತ್ತಿರುವ ಮಂಡಳಿ ಕಾಮಗಾರಿಗಳ ಕುರಿತು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಕುರಿತು ವಿವರಿಸಿದರು.
ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್​ ಸಂಕನೂರ್​, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಪ್ರೊಬೇಷನರ್​ ಐಎಎಸ್​ ಅಧಿಕಾರಿ ಶಿಖರ್​ ಮೋಘಾ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಂದಾರ್​ ಇತರರಿದ್ದರು.
"

ಪ್ರತಿ ವರ್ಷ ಈ ಗ್ರಾಮಗಳಿಗೆ ಬಾಡಿಗೆ ಕೊಳವೆ ಬಾವಿ, ಟ್ಯಾಂಕರ್​ ಮೂಲಕ ನೀರು ಪೂರೈಸುವುದು ತಾತ್ಕಾಲಿಕ ವ್ಯವಸ್ಥೆ. ಆದರೆ ಈ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು.

— ಸುಭೋದ್​ ಯಾದವ್​, ಉಸ್ತುವಾರಿ ಕಾರ್ಯದರ್ಶಿ, ಕಲಬುರಗಿ.