ಪ್ರಮುಖ ಮುಖ್ಯಾಂಶಗಳು
ಕಲಬುರಗಿ: ಪ್ರಸಕ್ತ ವರ್ಷದಲ್ಲಿ ಇದೂವರೆಗೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಮುಂದಿನ ದಿನದಲ್ಲಿ ಬರದ ಛಾಯೆ ಆವರಿಸುವ ಸಾಧ್ಯತೆ ಇದ್ದು, ಅದನ್ನು ಸಮರ್ಥವಾಗಿ ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕೆಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ( Skills and livelihood department) ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ ಸೂಚಿಸಿದರು.
ನಗರದ (Kalaburagi) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಇಂತಹ ಬರ ಪರಿಸ್ಥಿತಿಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ದಾಸ್ತಾನು ಮಾಡಿಟ್ಟುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಬಿದ್ದ ಮಳೆ ಪ್ರಮಾಣವನ್ನು ಮಾಪನ ಮಾಡಬೇಕಾದ ರೇನ್ ಗೇಜ್ (Rain gaze) ಸ್ಟೇಷನ್ ಕೆಲವೆಡೆ ಕಾರ್ಯನಿರ್ವಹಿಸುತ್ತಿಲ್ಲ ಎಂಬುದನ್ನು ಅರಿತ ಅವರು, ಸಮರ್ಪಕ ಕಾರ್ಯನಿರ್ವಹಣೆ ಇಲ್ಲದೆ ಹೋದಲ್ಲಿ ನಿಖರ ಮಳೆ ಪ್ರಮಾಣ ಸಂಗ್ರಹಣೆ ಕಷ್ಟಸಾಧ್ಯ. ಕೂಡಲೆ ಅವೆಲ್ಲ ಸ್ಟೇಷನ್‌ಗಳನ್ನು ದುರಸ್ತಿಪಡಿಸಬೇಕೆಂದರು. ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಈಗಾಗಲೆ ಕೆ.ಎಸ್.ಎನ್.ಡಿ.ಎಂ.ಸಿ. ಸಂಸ್ಥೆಯಿಂದ ಟೆಂಡರ್ ಕರೆದಿದ್ದು, ದುರಸ್ತಿ ಕಾರ್ಯ ನಡೆದಿದೆ ಎಂದು ಉತ್ತರಿಸಿದರು.
ಜಿಲ್ಲೆಯ ವಿವಿಧ ಜಲಾಶಯಗಳ ಸ್ಥಿತಿಗತಿ ಅವಲೋಕಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಮುಂದಿನ ದಿನದಲ್ಲಿ ಮಳೆ ಬಾರದೆ ಹೋದಲ್ಲಿ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಸಹ ಮಾಡಿಟ್ಟುಕೊಳ್ಳಬೇಕು. ಬಾವಿ, ಕೊಳವೆ ಬಾವಿ ಜಲಮೂಲಗಳ ನೆರವಿನಿಂದ ನೀರು ಪೂರೈಕೆ ಮಾಡಬೇಕು. ಕಲಬುರಗಿ ನಗರದಲ್ಲಿ ನಡೆಯುತ್ತಿರುವ 24 ಗಂಟೆ ನಿರಂತರ ಕುಡಯುವ ನೀರು ಯೋಜನೆ ಕಾಮಗಾರಿಗೆ ವೇಗ ಹೆಚ್ಚಿಸಬೇಕು ಮತ್ತು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದ ಕಡೆ ಟ್ಯಾಂಕರ್ ಮೂಲಕ ಪೂರೈಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸೂಚನೆ ಕೊಟ್ಟರು.
ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಮಾತನಾಡಿ ನಗರದ ಜನತೆಗೆ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ನಾರಾಯಣಪುರ ಜಲಾಶಯದಿಂದ ನೀರು ತರುವ ಪೈಪ್ ಲೈನ್ ಕಾಮಗಾರಿಯ 1,850 ಕೋಟಿ ರೂ. ಮೊತ್ತದ ಯೋಜನೆ ಡಿ.ಪಿ.ಆರ್ ಸಿದ್ಧವಾಗಿದೆ. ಪ್ರಸಕ್ತ ನಗರದಲ್ಲಿ ನೀರಿನ ಸಮಸ್ಯೆ ಇದ್ದ ವಾರ್ಡ್ನಲ್ಲಿ ಪ್ರತಿ ದಿನ 200 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.
ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಕಳೆದ ಜೂನ್ 1 ರಿಂದ ಇಲ್ಲಿಯವೆಗೆ ವಾಡಿಕೆಯಂತೆ 168.1 ಮಿಲಿ ಮಿಟರ್ ಮಳೆಯಾಗಬೇಕಿತ್ತು. ಆಗಿದ್ದು ಕೇವಲ 80.8 ಮಿಲಿ ಮೀಟರ್ ಮಾತ್ರ. ಹೀಗಾಗಿ ಮಳೆ ಕೊರತೆಯಿಂದ ಮುಂಗಾರು ಋತುವಿನಲ್ಲಿ ನಿಗದಿತ ಗುರಿ 8,90,633.8 ಹೆಕ್ಟೇರ್ ಪೈಕಿ ಇದೂವರೆಗೆ 2,72,199 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ. ಜಿಲ್ಲೆಯ ಹಲವು ತಾಲೂಕಿನಲ್ಲಿ ಬಿತ್ತನೆಗೆ ಬೇಕಾದ ಮಳೆ ಇನ್ನು ಬಂದಿಲ್ಲ. ಭತ್ತ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೆಳೆಗಳ ಬಿತ್ತನೆಗೆ ಈಗಾಗಲೆ 22,192 ಕ್ವಿಂಟಾಲ್ ವಿತರಿಸಿದೆ. ಅದೇ ರೀತಿ 51,045 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಿದ್ದು, 32,894 ಮೆ.ಟನ್ ಇನ್ನು ಸ್ಟಾಕ್ ಇದೆ ಎಂದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಂಜಯ್ ರೆಡ್ಡಿ ಮಾತನಾಡಿ ಮುಂದಿನ 34 ವಾರಕ್ಕೆ ಬೇಕಾಗುವ ಮೇವು ಜಿಲ್ಲೆಯಲ್ಲಿ ದಾಸ್ತಾನಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬೆಳೆ ವಿಮೆ ಕುರಿತು ಚರ್ಚೆಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ, ಕಳೆದ ವರ್ಷ ಜಿಲ್ಲೆಗೆ 650 ಕೋಟಿ ರೂ. ಬೆಳೆ ವಿಮೆ ಮಂಜೂರಾಗಿದ್ದು, ರೈತರಿಗೆ ತುಂಬಾ ಅನುಕೂಲವಾಗಿದೆ. ಈ ವರ್ಷ ಸಹ ಬರದ ಛಾಯೆ ಆವರಿಸಿರುವುದರಿಂದ ರೈತಾಪಿ ಜನರು ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ನೋಂದಣಿ ಮಾಡಿಕೊಂಡಲ್ಲಿ ಪ್ರಕೃತಿ ವಿಕೋಪ ಸೇರಿದಂತೆ ಇನ್ನಿತರ ಕಷ್ಟ ಕಾಲದಲ್ಲಿ ಅವರ ನೆರವಿಗೆ ಬರಲಿದೆ. ಹೀಗಾಗಿ ರೈತರಲ್ಲಿ ಬೆಳೆ ವಿಮೆಗೆ ಜಾಗೃತಿ ಮೂಡಿಸಿ ನೋಂದಣಿ ಹೆಚ್ಚಿಸಬೇಕೆಂದು ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಸಮಸ್ಯೆ ಕುರಿತು ಚರ್ಚೆಯಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ 5 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಮತ್ತು 35 ಗ್ರಾಮಗಳಿಗೆ ಖಾಸಗಿ ಬೋರವೆಲ್ ಬಾಡಿಗೆ ಪಡೆದು ನೀರು ಪೂರೈಸಲಾಗುತ್ತಿದೆ. ಪ್ರತಿ ವರ್ಷ 168 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಇ.ಇ. ಜಗದೇವಪ್ಪ ಜೀವಣಗಿ ಅವರು ಸಭೆಗೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸುಬೋಧ ಯಾದವ ಮಾತನಾಡಿ, ಪ್ರತಿ ವರ್ಷ ಈ ಗ್ರಾಮಗಳಿಗೆ ಬಾಡಿಗೆ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸುವುದು ತಾತ್ಕಲಿಕ ವ್ಯವಸ್ಥೆ. ಆದರೆ ಈ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಆ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.
ಇ.ಇ. ಜಗದೇವಪ್ಪ ಜೀವಣಗಿ ಮಾತು ಮುಂದುವರೆಸಿ, ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ ಹಳ್ಳಿಯಲ್ಲಿನ ಕುಡಿಯುವ ನೀರು ಸರಬರಾಜಿಗೆಂದೆ ಗ್ರಾಮೀಣಾಭಿವೃದ್ಧಿ ಇಲಾಖೆಯು 5 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು, ಬೋರವೆಲ್ ಕೊರೆಸಲು 33 ಲಕ್ಷ ರೂ. ಇದೂವರೆಗೆ ಖರ್ಚು ಮಾಡಿದೆ. ಕಡಿಯುವ ನೀರಿಗೆ ಯಾವುದೇ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೆ.ಕೆ.ರ್.ಡಿ.ಬಿ. ಮಂಡಳಿ ಅನುದಾನದಡಿ ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಉಸ್ತುವಾರಿ ಕಾರ್ಯದರ್ಶಿಗಳು, ಕಳೆದ 2024-25ನೇ ಸಾಲಿನಲ್ಲಿ ಮಂಜೂರಾದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದರೂ ಇದೂವರೆಗೆ ಕೆಲ ಕಾಮಗಾರಿಗಳನ್ನು ಆರಂಭಿಸಿದ ಲೋಕೋಪಯೋಗಿ ಇಲಾಖೆ, ಕೆ.ಆರ್.ಐ.ಡಿ.ಎಲ್ ಕಾರ್ಯಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಎರಡು ವರ್ಷವಾದರ ಕಾಮಗಾರಿನೆ ಆರಂಭಿಸಿಲ್ಲ ಎಂದರೆ ಮುಗಿಸೋದು ಯಾವಾಗ ಎಂದು ಇ.ಇ. ಗಳಿಗೆ ಪ್ರಶ್ನಿಸಿದ ಅವರು, ನಿಮಗೆ ಕೆಲಸ ಹೆಚ್ಚಾದರೆ ಏಕೆ ಕಾಮಗಾರಿ ವಹಿಸಿಕೊಂಡಿದ್ದೀರಿ ಎಂದು ಗರಂ ಆದರು.
ಇನ್ನು ಮಂಡಳಿಯಿಂದ ಕೈಗೊಳ್ಳುವ ಯಾವುದೇ ಕಾಮಗಾರಿ ಪ್ರಗತಿಯ ವಿವರವನ್ನು ಸಂಬಂಧಪಟ್ಟ ಇಲಾಖೆಯವರು ಆಗಾಗ ಮಂಡಳಿ ಗಮನಕ್ಕೆ ತರಬೇಕು ಮತ್ತು ಮಂಡಳಿ ಅಧಿಕಾರಿಗಳಿಂದ ತಪಾಸಣೆಗೆ ಒಳಪಡಿಸಬೇಕು ಎಂದು ಸಲಹೆ ನೀಡಿದರು. ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ನಲಿನ್ ಅತುಲ್, ಅಪರ ನಿರ್ದೇಶಕಿ ಪ್ರವೀಣ್ ಪ್ರಿಯಾ ಜಿಲ್ಲೆಯಲ್ಲಿ ನಡೆಯುತ್ತಿರುವ ಮಂಡಳಿ ಕಾಮಗಾರಿಗಳ ಕುರಿತು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್. ನಡಿ ಹಣ ಖರ್ಚು ಮಾಡಲು 36.47 ಕೊಟಿ ರೂ. ಲಭ್ಯವಿದೆ ಎಂದರಲ್ಲದೆ ಪ್ರಸ್ತುತ ಜಿಲ್ಲೆಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಕುರಿತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ್ ಸಂಕನುರ್, ಸಹಾಯಕ ಆಯುಕ್ತರಾದ ಸಾಹಿತ್ಯ ಆಲದಕಟ್ಟಿ, ಪ್ರೊಬೇಷನರ್ ಐ.ಎ.ಎಸ್ ಅಧಿಕಾರಿ ಶಿಖರ್ ಮೋಘಾ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಂತೋಷ ಇನಾಂದಾರ ಸೇರಿದಂತೆ ಸಣ್ಣ ನೀರಾವರಿ, ಕೆ.ಎನ್.ಎನ್.ಎಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.